– ಮಸೀದಿಗಳು, ಖಾಸಗಿ ಜಾಗಗಳಲ್ಲಿ ಫಾರ್ಮ್ ಭರ್ತಿ
– ಗದಗ, ರೋಣ ಕ್ಷೇತ್ರಗಳಲ್ಲಿ ಸಾವಿರಾರು ನಕಲಿ ಮತಗಳು ಪತ್ತೆ: ಬೊಮ್ಮಾಯಿ
ಗದಗ: ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಭಾರೀ ಗೊಂದಲ ಹಾಗೂ ಅಕ್ರಮಗಳು ನಡೆಯುತ್ತಿವೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಗಂಭೀರ ಆರೋಪ ಮಾಡಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮತದಾರರ ಪಟ್ಟಿ ಪರಿಷ್ಕರಣೆಗಾಗಿ ಬಿಎಲ್‌ಒಗಳು ಮನೆ ಮನೆಗೆ ತೆರಳಿ ಮ್ಯಾಪಿಂಗ್ ಮುಗಿಸಿದ ನಂತರ ಫಾರ್ಮ್‌ಗಳನ್ನು ನೀಡಿ, ಅವುಗಳನ್ನು ಭರ್ತಿ ಮಾಡಿ ಸ್ಕ್ಯಾನ್ ಮಾಡಬೇಕೆಂಬ ಆದೇಶವಿದೆ. ಆದರೆ, ಕಳೆದ ನಾಲ್ಕು ದಿನಗಳಿಂದ ಹಲವೆಡೆ ಬಿಎಲ್‌ಒಗಳು ಕರ್ತವ್ಯಕ್ಕೆ ಹಾಜರಾಗುತ್ತಿಲ್ಲ. ಈ ಬಗ್ಗೆ ಫೋನ್ ಮಾಡಿ ಕೇಳಿದರೆ, ನಮಗೆ ಬೇರೆ ಕೆಲಸವಿದೆ, ಅದನ್ನು ಮುಗಿಸಿಕೊಂಡು ಬರುತ್ತೇವೆ ಎಂದು ಹಾರಿಕೆ ಉತ್ತರ ನೀಡುತ್ತಿದ್ದಾರೆ. ತಹಶೀಲ್ದಾರ್ ಅವರಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಪ್ರತಿ ಕ್ಷೇತ್ರದಲ್ಲಿ ಕನಿಷ್ಠ 20ರಿಂದ 25 ಬಿಎಲ್‌ಒಗಳು ಗೈರುಹಾಜರಾಗುತ್ತಿದ್ದಾರೆ ಎಂದು ದೂರಿದರು.
ಖಾಸಗಿ ಜಾಗಗಳಲ್ಲಿ ಫಾರ್ಮ್ ಭರ್ತಿ
ನಿಯಮಾವಳಿಗಳ ಪ್ರಕಾರ ನಡೆಯಬೇಕಾದ ಪ್ರಕ್ರಿಯೆಯನ್ನು ಗಾಳಿಗೆ ತೂರಲಾಗಿದೆ. ಮಸೀದಿಗಳು ಹಾಗೂ ಕೆಲವು ಖಾಸಗಿ ಜಾಗಗಳಲ್ಲಿ ಗುಂಪು-ಗುಂಪಾಗಿ ಕುಳಿತು ಫಾರ್ಮ್‌ಗಳನ್ನು ಭರ್ತಿ ಮಾಡಲಾಗುತ್ತಿದೆ. ಕೆಲವು ದೇವಸ್ಥಾನ ಮತ್ತು ಕಲ್ಯಾಣ ಮಂಟಪಗಳಲ್ಲೂ ಈ ರೀತಿಯ ಅಕ್ರಮಗಳು ನಡೆಯುತ್ತಿವೆ. ಇದನ್ನು ಕೇಳುವವರೇ ಇಲ್ಲದಂತಾಗಿದೆ. ರಾಜ್ಯ ಸರ್ಕಾರ ಎಸ್‌ಐಆರ್ ಪ್ರಕ್ರಿಯೆಯನ್ನು ದಾರಿ ತಪ್ಪಿಸಲು ಹಾಗೂ ಹಳ್ಳ ಹಿಡಿಸಲು ಈ ರೀತಿ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹೆಚ್.ಕೆ. ಪಾಟೀಲ್ ಒಂದೇ ಹೆಸರಿನಲ್ಲಿ ಮೂರು ಮತಗಳು
ಗದಗ ಮತ್ತು ರೋಣ ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರ ಪಟ್ಟಿಯಲ್ಲಿ ದೊಡ್ಡ ಮಟ್ಟದಲ್ಲಿ ಒಂದೇ ಹೆಸರಿನ ಎರಡು-ಮೂರು ನೋಂದಣಿಗಳು ಕಂಡುಬಂದಿವೆ. ಮ್ಯಾಪಿಂಗ್ ಮಾಡಿದ್ದರೂ ಸಹ ಅನರ್ಹರ ಹೆಸರುಗಳು ಮತ್ತೆ ಪಟ್ಟಿಯಲ್ಲಿ ಕಾಣಿಸಿಕೊಳ್ಳುತ್ತಿವೆ. ಇದಕ್ಕೆ ಉದಾಹರಣೆಯಾಗಿ ಮಾಜಿ ಸಚಿವ ಹೆಚ್.ಕೆ. ಪಾಟೀಲ್ ಅವರ ಹೆಸರನ್ನೇ ಬೊಮ್ಮಾಯಿ ಪ್ರಸ್ತಾಪಿಸಿದರು.
ಗದಗ ಕ್ಷೇತ್ರದ ಹುಲಕೋಟಿಯಲ್ಲಿ ಹನುಮಂತಗೌಡ ಕೃಷ್ಣಗೌಡ ಪಾಟೀಲ್ (ಹೆಚ್.ಕೆ. ಪಾಟೀಲ್) ಅವರ ಹೆಸರು ಬೂತ್ ಸಂಖ್ಯೆ 143 (ಕ್ರಮ ಸಂಖ್ಯೆ 161 ಮತ್ತು 183) ಹಾಗೂ ಬೂತ್ ಸಂಖ್ಯೆ 153 (ಕ್ರಮ ಸಂಖ್ಯೆ 393) ರಲ್ಲಿ ಮೂರು ಬಾರಿ ದಾಖಲಾಗಿದೆ. ಒಬ್ಬ ಜವಾಬ್ದಾರಿಯುತ ಸಚಿವರ ಹೆಸರೇ ಮತದಾರರ ಪಟ್ಟಿಯಲ್ಲಿ ಮೂರು ಬಾರಿ ಬಂದರೆ, ಸಾಮಾನ್ಯ ಜನರ ಪರಿಸ್ಥಿತಿ ಏನು? ಯಾವ ರೀತಿಯ ಪರಿಷ್ಕರಣೆ ನಡೆಯುತ್ತಿದೆ ಎಂದು ಪ್ರಶ್ನಿಸಿದರು.
ಚುನಾವಣಾ ಆಯೋಗದಿಂದ ಲಭ್ಯವಾಗಿರುವ ಅಧಿಕೃತ ಪ್ರತಿಯನ್ನು ಮಾಧ್ಯಮಗಳಿಗೆ ಪ್ರದರ್ಶಿಸಿದ ಅವರು, ಇಂತಹ ಲೋಪದೋಷಗಳನ್ನು ಸರಿಪಡಿಸುವಂತೆ ತಹಶೀಲ್ದಾರ್ ಅವರಿಗೆ ಸೂಚನೆ ನೀಡಿದ್ದರೂ ಯಾವುದೇ ಗಂಭೀರ ಕ್ರಮ ಕೈಗೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ರೋಣ ಕ್ಷೇತ್ರದ ಅಲ್ಲಾಸಾಬ್ ನದಾಫ್ ಅವರ ಹೆಸರಿನಲ್ಲೂ ಇದೇ ರೀತಿಯ ಲೋಪ ಕಂಡುಬಂದಿದೆ ಎಂದು ತಿಳಿಸಿದರು.
ಗದಗ, ರೋಣ ಕ್ಷೇತ್ರಗಳಲ್ಲಿ ಸಾವಿರಾರು ನಕಲಿ ಮತಗಳು ಪತ್ತೆ
ಮತದಾರರ ಪಟ್ಟಿಯಲ್ಲಿ ಒಂದೇ ಹೆಸರಿನ ದ್ವಿಪ್ರತಿ, ತ್ರಿಪ್ರತಿ ಹಾಗೂ ನಾಲ್ಕೈದು ಕಡೆ ಒಂದೇ ಹೆಸರಿರುವ ಪ್ರಕರಣಗಳು ದಾಖಲೆಯೊಂದಿಗೆ ಬೆಳಕಿಗೆ ಬಂದಿವೆ. ರೋಣ ಕ್ಷೇತ್ರದಲ್ಲಿ ಒಟ್ಟು 3,804 ನಕಲಿ ಮತಗಳು ಪತ್ತೆಯಾಗಿವೆ. ಒಬ್ಬ ವ್ಯಕ್ತಿಯ ಹೆಸರು ನಾಲ್ಕರಿಂದ ಐದು ಕಡೆ ದಾಖಲಾಗಿರುವುದು ಕಂಡುಬಂದಿದೆ. ಗದಗ ಕ್ಷೇತ್ರದಲ್ಲೂ 2,305 ಡಬಲ್ ಹಾಗೂ ತ್ರಿಬಲ್ ಮತಗಳು ಪತ್ತೆಯಾಗಿವೆ.
ಇವು ಕೇವಲ ಮೇಲ್ನೋಟಕ್ಕೆ ಕಂಡುಬಂದಿರುವ ಅಂಕಿ-ಅಂಶಗಳಾಗಿದ್ದು, ಇನ್ನೂ ಎಷ್ಟು ಅಕ್ರಮಗಳು ನಡೆದಿವೆಯೋ ಎಂಬುದನ್ನು ಪರಿಶೀಲಿಸಬೇಕಾಗಿದೆ ಎಂದು ಹೇಳಿದರು.
ನಿಯಮ ಉಲ್ಲಂಘಿಸಿ ಖಾಸಗಿ ಜಾಗಗಳಲ್ಲಿ ಫಾರ್ಮ್ ಭರ್ತಿ
ಮತದಾರರ ಪಟ್ಟಿ ಪರಿಷ್ಕರಣೆಗಾಗಿ ಬಿಎಲ್‌ಒಗಳು ಮನೆ ಮನೆಗೆ ತೆರಳಿ ಪರಿಶೀಲನೆ ನಡೆಸಬೇಕು. ಮತದಾರರ ಗುರುತಿನ ಚೀಟಿ ಪಡೆದು ದೃಢೀಕರಣವಾದ ಬಳಿಕ ಫಾರ್ಮ್‌ಗಳನ್ನು ಸ್ಕ್ಯಾನ್ ಮಾಡಬೇಕು. ಆದರೆ, ಕ್ಷೇತ್ರಗಳಲ್ಲಿ ಬಿಎಲ್‌ಒಗಳು ಮನೆಗಳಿಗೆ ಹೋಗುತ್ತಿಲ್ಲ. ಬದಲಾಗಿ, ಸುಮ್ಮನೆ ಫಾರ್ಮ್‌ಗಳನ್ನು ಹಂಚುತ್ತಿದ್ದಾರೆ. ಕೆಲವು ಕಡೆ ಮಸೀದಿಗಳು ಹಾಗೂ ಖಾಸಗಿ ವಸತಿ ಜಾಗಗಳಲ್ಲಿ ಕುಳಿತು ಬಂಚ್‌ಗಟ್ಟಲೆ ಫಾರ್ಮ್‌ಗಳನ್ನು ಭರ್ತಿ ಮಾಡಲಾಗುತ್ತಿದೆ.ಇದನ್ನೂ ಓದಿ: ಕಾಶ್ಮೀರದ ಶಾಲೆಗಳಲ್ಲಿ ಉಗ್ರರನ್ನು ಮಹಾತ್ಮರಂತೆ ಬಿಂಬಿಸಿದ ಪುಸ್ತಕ ಹಂಚಿಕೆ – ಇದು ಶೈಕ್ಷಣಿಕ ಜಿಹಾದ್ ಎಂದ ಬಿಜೆಪಿ
ಶಿಗ್ಗಾಂವಿ ತಾಲೂಕಿನ ಬಂಕಾಪುರದ ಎರಡು ಮಸೀದಿಗಳಲ್ಲಿ ಈ ರೀತಿಯ ನಿಯಮಬಾಹಿರವಾಗಿ ಫಾರ್ಮ್‌ಗಳನ್ನು ಭರ್ತಿ ಮಾಡುತ್ತಿರುವುದರ ವಿರುದ್ಧ ಈಗಾಗಲೇ ಅಧಿಕೃತವಾಗಿ ದೂರು ನೀಡಲಾಗಿದೆ ಎಂದು ಅವರು ತಿಳಿಸಿದರು.
ಬಿಎಲ್‌ಒಗಳಿಗೆ ಸರಿಯಾದ ತರಬೇತಿ ಇಲ್ಲದ ಕಾರಣ ಹಲವರಿಗೆ ಸ್ಕ್ಯಾನ್ ಮಾಡಲು ಸಹ ಬರುತ್ತಿಲ್ಲ. ಕೇವಲ ಒಂದು ತಿಂಗಳ ಅವಧಿಯಲ್ಲಿ ಒಂದು ಬೂತ್‌ನ ಕನಿಷ್ಠ 1,000 ಮತದಾರರ ಪರಿಶೀಲನೆ ನಡೆಸಲು ಹೇಗೆ ಸಾಧ್ಯ ಎಂದು ಅವರು ಪ್ರಶ್ನಿಸಿದರು.
ಶೀಘ್ರ ಕ್ರಮಕ್ಕೆ ಆಗ್ರಹ
ಚುನಾವಣಾ ಆಯೋಗದ ಅಧಿಕೃತ ಮತದಾರರ ಪಟ್ಟಿಯ ಪ್ರತಿಯನ್ನು ಮಾಧ್ಯಮಗಳಿಗೆ ಪ್ರದರ್ಶಿಸಿದ ಬೊಮ್ಮಾಯಿ, ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಇಂತಹ ನಕಲಿ ಹಾಗೂ ದ್ವಿಪ್ರತಿ ಮತಗಳನ್ನು ಪಟ್ಟಿಯಿಂದ ಕೈಬಿಡಬೇಕು. ಮತದಾರರ ಪಟ್ಟಿ ಪರಿಷ್ಕರಣೆ ಪಾರದರ್ಶಕವಾಗಿ ನಡೆಯಬೇಕು ಎಂದು ಆಗ್ರಹಿಸಿದರು.
ಈ ವೇಳೆ ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರು, ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರುಡಗಿ, ಮಾಜಿ ಸಚಿವ ಕಳಕಪ್ಪ ಬಂಡಿ, ಎಂ.ಎಸ್. ಕರಿಗೌಡ್ರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.ಇದನ್ನೂ ಓದಿ: ರಾಮಮಂದಿರ ದೇಣಿಗೆ ಕಳವು ಪ್ರಕರಣ: ಆರೋಪಿ ಅನುಕಲ್ಪ್ ಮಿಶ್ರಾ ಆಸ್ತಿ ಜಾಡು ಪತ್ತೆ
