ಶಿವಮೊಗ್ಗ: ಸೋಪನ್ನು ಆನ್‌ಲೈನ್ ಮೂಲಕ ಆರ್ಡರ್ ಮಾಡಿದ್ದ ವ್ಯಕ್ತಿಯೊಬ್ಬ ಬರೋಬ್ಬರಿ 2.97 ಲಕ್ಷ ರೂ. ಕಳೆದುಕೊಂಡಿರುವ ಘಟನೆ ಶಿವಮೊಗ್ಗದಲ್ಲಿ (Shivamogga) ನಡೆದಿದೆ.
ಶಿವಮೊಗ್ಗ ನಗರದ ಗಾಂಧಿಬಜಾರ್‌ನ 38 ವರ್ಷದ ಎಲೆಕ್ಟ್ರಿಶಿಯನ್ ಹಣ ಕಳೆದುಕೊಂಡಿದ್ದಾರೆ. ಜು.7ರಂದು ಮೊಬೈಲ್‌ನಲ್ಲಿ ಇನ್‌ಸ್ಟಾಗ್ರಾಂ ನೋಡುತ್ತಿದ್ದಾಗ ಸೋಪಿನ ಜಾಹೀರಾತು ಕಂಡಿತ್ತು. ಆ ಸೋಪನ್ನು ಆರ್ಡರ್ ಮಾಡಿದ್ದರು. ಆರ್ಡರ್ ಮಾಡಿದ್ದ ಸೋಪು ಮನೆಗೆ ಬಾರದೇ ಇದ್ದಾಗ ಗೂಗಲ್‌ನಲ್ಲಿ ಸಿಕ್ಕ ಕೊರಿಯರ್ ನಂಬರ್‌ಗೆ ಕರೆ ಮಾಡಿದ್ದರು. ಕರೆ ಸ್ವೀಕರಿಸಿದ್ದ ವ್ಯಕ್ತಿ ತಾನು ಕಳುಹಿಸಿದ ಲಿಂಕ್ ಮೇಲೆ ಕ್ಲಿಕ್ ಮಾಡುವಂತೆ ಸೂಚಿಸಿದ್ದ. ಅದರಂತೆ ಎಲೆಕ್ರಿಶಿಯನ್ ಲಿಂಕ್ ಮೇಲೆ ಕ್ಲಿಕ್ ಮಾಡಿದ್ದರು. ಈ ವೇಳೆ ಹತ್ತಾರು ಮೆಸೇಜ್‌ಗಳು ಬಂದಿದ್ದು, ಗೊಂದಲಕ್ಕೀಡಾದ ಎಲೆಕ್ಟ್ರಿಶಿಯನ್ ಲಿಂಕ್ ಅನ್ನು ಡಿಲೀಟ್ ಮಾಡಿದ್ದರು. ಇದನ್ನೂ ಓದಿ: ಗದಗ | ನೇಣು ಬಿಗಿದ ಸ್ಥಿತಿಯಲ್ಲಿ ಪದವೀಧರೆಯ ಶವ ಪತ್ತೆ – ಕೊಲೆ ಶಂಕೆ
ಆನಂತರ ಮಗನ ಶಾಲಾ ಶುಲ್ಕ ಪಾವತಿಸಲು ಶಾಲೆಗೆ ತೆರಳಿದಾಗ ಬ್ಯಾಂಕ್ ಖಾತೆಯಲ್ಲಿ ಹಣ ಇರಲಿಲ್ಲ. ಬ್ಯಾಂಕ್‌ಗೆ ತೆರಳಿ ಪರಿಶೀಲಿಸಿದಾಗ ಎರಡು ಬಾರಿ ತಲಾ ಒಂದು ಲಕ್ಷ ರೂ., ಮತ್ತೊಮ್ಮೆ 97 ಸಾವಿರ ರೂ. ಕಡಿತವಾಗಿದೆ. ಈ ಬಗ್ಗೆ ಶಿವಮೊಗ್ಗದ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
