ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu and Kashmir) ಶಾಲೆಗಳಲ್ಲಿ (School) ಉಗ್ರರನ್ನು ಮಹಾತ್ಮರಂತೆ ಬಿಂಬಿಸಲಾದ ಪುಸ್ತಕಗಳನ್ನು ಹಂಚಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ವಿಚಾರವಾಗಿ ನಾಗರಿಕರ ಸಮಾಜ ಸಂಘಟನೆ ಪೀಪಲ್ಸ್ ಫೋರಮ್ (ಜೆಕೆಪಿಎಫ್) ಹಾಗೂ ಬಿಜೆಪಿ (BJP) ತೀವ್ರ ಆಕ್ರೋಶ ಹೊರಹಾಕಿವೆ.
ಶಾಲೆಯ ಗ್ರಂಥಾಲಯದಲ್ಲಿ ಹಂಚಲಾದ ಪುಸ್ತಕದಲ್ಲಿ ಪ್ರತ್ಯೇಕತಾವಾದಿ ನಾಯಕರನ್ನು ಮತ್ತು ಶಿಕ್ಷೆಗೊಳಗಾದ ಭಯೋತ್ಪಾದಕರನ್ನು ಮಹಾನ್ ವ್ಯಕ್ತಿಗಳು ಎಂದು ಬಿಂಬಿಸಲಾಗಿದೆ. ಅವರನ್ನು ದಂತಕಥೆಗಳಾಗಿ ವೈಭವೀಕರಿಸಲಾಗಿದೆ ಎಂದು ಆರೋಪಿಸಲಾಗಿದೆ. ಈ ವಿಚಾರವಾಗಿ ಜಮ್ಮು ಮತ್ತು ಕಾಶ್ಮೀರದ ಒಮರ್ ಅಬ್ದುಲ್ಲಾ (Omar Abdullah) ನೇತೃತ್ವದ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಇದನ್ನೂ ಓದಿ: 70 ಲಕ್ಷ ಪಡೆದು ಉದ್ಯಮಿಗೆ ವಂಚನೆ, ಹಣ ವಾಪಸ್ ಕೇಳಿದ್ರೆ ರೇಪ್ ಕೇಸ್ ದಾಖಲಿಸೋದಾಗಿ ಬೆದರಿಕೆ – ಮಹಿಳೆ ಅರೆಸ್ಟ್

ರಾಷ್ಟ್ರವಿರೋಧಿ ವ್ಯಕ್ತಿಗಳನ್ನು ಮಾದರಿ ವ್ಯಕ್ತಿಗಳೆಂದು ಕರೆಯುವ ಮೂಲಕ ಇತಿಹಾಸವನ್ನು ತಿರುಚಲಾಗುತ್ತಿದೆ ಎಂದು ಜೆಕೆಪಿಎಫ್ ಹೇಳಿದೆ. ದೇಶಭಕ್ತಿಯನ್ನು ಕಲಿಸುವ ಬದಲು, ಭಾರತವನ್ನು ಒಡೆಯಲು ಯುದ್ಧ ಸಂಚು ರೂಪಿಸಿದವರನ್ನು ವೈಭವೀಕರಿಸಲು ಶಾಲಾ ಕೊಠಡಿಗಳನ್ನು ಬಳಸಲಾಗುತ್ತಿದೆ. ಪುಸ್ತಕವು ಮಕ್ಬೂಲ್ ಭಟ್, ಸೈಯದ್ ಅಲಿ ಶಾ ಗಿಲಾನಿ, ಮಸರತ್ ಆಲಂ ಮತ್ತು ಹುರಿಯತ್ ನಾಯಕ ಮಿರ್ವೈಜ್ ಉಮರ್ ಫಾರೂಕ್ ಅವರಂತಹ ಪ್ರತ್ಯೇಕತಾವಾದಿಗಳು ಮತ್ತು ಭಯೋತ್ಪಾದಕರನ್ನು ಮಾದರಿ ವ್ಯಕ್ತಿಗಳನ್ನಾಗಿ ಬಿಂಬಿಸುತ್ತಿದೆ ಎಂದು ಆರೋಪಿಸಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕ ಮತ್ತು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುನಿಲ್ ಶರ್ಮಾ, ಯುವ ಮನಸ್ಸುಗಳನ್ನು ಕಲುಷಿತಗೊಳಿಸಲು ಈ ಪುಸ್ತಕ ಬಿಡುಗಡೆ ಮಾಡಲಾಗಿದೆ. ಇದು ʻಶೈಕ್ಷಣಿಕ ಜಿಹಾದ್ʼ ಎಂದು ಕಿಡಿಕಾರಿದ್ದಾರೆ.
ಸಿಎಂ ಒಮರ್ ಅಬ್ದುಲ್ಲಾ ತಮ್ಮ ಸಂಪುಟದ ಶಿಕ್ಷಣ ಸಚಿವ ಸಕಿನಾ ಇಟೂ ಅವರನ್ನು ವಜಾಗೊಳಿಸಬೇಕು. ಶಾಲಾ ಗ್ರಂಥಾಲಯಗಳಲ್ಲಿ ಈ ವಿವಾದಾತ್ಮಕ ಪುಸ್ತಕವನ್ನು ಉತ್ತೇಜಿಸುವ ಮತ್ತು ಶಿಫಾರಸು ಮಾಡುವ ಹಿಂದೆ ಇರುವ ಎಲ್ಲ ಜನರನ್ನು ಬಂಧಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ವಿವಾದದ ಬಗ್ಗೆ ಪ್ರತಿಕ್ರಿಯಿಸಿದ ಒಮರ್ ಅಬ್ದುಲ್ಲಾ, ಆ ಪುಸ್ತಕವನ್ನು ನಾನು ಸರಿಯಾಗಿ ನೋಡಿಲ್ಲ ಹಾಗೂ ಓದಿಲ್ಲ ಎಂದಿದ್ದಾರೆ.
ಈ ವಿಷಯವನ್ನು ಮೊದಲು ಬಹಿರಂಗಪಡಿಸಿದ ನಾಗರಿಕ ಸಮಾಜ ಸಂಘಟನೆ ಜಮ್ಮು ಮತ್ತು ಕಾಶ್ಮೀರ ಪೀಪಲ್ಸ್ ಫೋರಮ್. ಪುಸ್ತಕವು ಹುತಾತ್ಮರ ಕುಟುಂಬಗಳಿಗೆ ಮಾಡಿದ ಅತಿದೊಡ್ಡ ದ್ರೋಹ ಎಂದು ಕರೆದಿದೆ. ಈ ಬಗ್ಗೆ ಕಠಿಣ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಮಕ್ಬೂಲ್ ಭಟ್ ಮತ್ತು ಇತರ ಉಗ್ರರನ್ನು ವೈಭವೀಕರಿಸುವ ಮೂಲಕ, ಭಯೋತ್ಪಾದನೆಯ ವಿರುದ್ಧ ಹೋರಾಡುವಾಗ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಹುತಾತ್ಮರ ಕುಟುಂಬದ ಸದಸ್ಯರಿಗೆ ನೋವುಂಟು ಮಾಡಿದ್ದಾರೆ ಎಂದು ಜೆಕೆ ಪೀಪಲ್ಸ್ ಫೋರಮ್ ಸದಸ್ಯ ದೀಪಕ್ ಕಪೂರ್ ಹೇಳಿದ್ದಾರೆ. ಈ ಪುಸ್ತಕವನ್ನು 2025-26 ಶೈಕ್ಷಣಿಕ ಅಧಿವೇಶನಕ್ಕಾಗಿ ರಾಜ್ಯ ಸರ್ಕಾರವು ಖರೀದಿಸಿದೆ. ಸಮಗ್ರ ಶಿಕ್ಷಾ ಲೋಗೋವನ್ನು ಮುದ್ರಿಸಿ ಕೇಂದ್ರಾಡಳಿತ ಪ್ರದೇಶದಾದ್ಯಂತ ಶಾಲಾ ಗ್ರಂಥಾಲಯಗಳಿಗೆ ಕಳುಹಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಪುಸ್ತಕದಲ್ಲಿ ʻಶಾಹಿದ್ ಮಕ್ಬೂಲ್ ಭಟ್ʼ ಎಂಬ ಶೀರ್ಷಿಕೆಯ ಅಧ್ಯಾಯವಿದೆ. ಇದರಲ್ಲಿ ಭಟ್‌ನಂತಹ ಭಯೋತ್ಪಾದಕನನ್ನು “ಕ್ರಾಂತಿಕಾರಿ” ಮತ್ತು “ಶಾಹಿದ್-ಎ-ಆಜಮ್” ಎಂದು ವೈಭವೀಕರಿಸಲಾಗಿದೆ. ಮಕ್ಬೂಲ್ ಭಟ್ ಒಬ್ಬ ಅಪರಾಧಿ ಮತ್ತು ಕೊಲೆಗಾರ. ಸುಪ್ರೀಂ ಕೋರ್ಟ್ ಮರಣದಂಡನೆ ಶಿಕ್ಷೆಯನ್ನು ಎತ್ತಿಹಿಡಿದ ನಂತರ ಫೆಬ್ರವರಿ 11, 1984 ರಂದು ತಿಹಾರ್ ಜೈಲಿನಲ್ಲಿ ಆತನನ್ನು ಗಲ್ಲಿಗೇರಿಸಲಾಗಿತ್ತು. ಇದನ್ನೂ ಓದಿ: SIR ಪ್ರಕ್ರಿಯೆಗೆ ತೆರಳುತ್ತಿದ್ದಾಗ ಅಪಘಾತ – ಚಿಕಿತ್ಸೆ ಫಲಕಾರಿಯಾಗದೇ ವಿಎ ಸಾವು
