Bagalkot

ಮುಖ್ಯಮಂತ್ರಿ ಆಗಿ ಕಿಸಿಯುದು ಏನ್ ಐತಿ – ಸಿಎಂ ವಿರುದ್ಧ ಯತ್ನಾಳ್ ವಾಗ್ದಾಳಿ

Published

on

Share this

– ಯಡಿಯೂರಪ್ಪನವರೇ ಬರೀ ಭಾಷಣದಿಂದ ಆಗಲ್ಲ
– ನಾನು ಹಿಂದುತ್ವದ ಮೇಲೆ ಬಂದವನು

ಬಾಗಲಕೋಟೆ: ಲಿಂಗಾಯತ ಸಮಾಜ ನನ್ನ ಕೈ ಬಿಟ್ಟಿತು ಎಂದು ಅವರಿಗೆ ನಿದ್ದೆ ಬಂದಿಲ್ಲ ಎನ್ನುವ ಮೂಲಕ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.

ಕೂಡಲಸಂಗಮದಲ್ಲಿ ನಡೆದ ಮೀಸಲಾತಿ ಹೋರಾಟದ ಪಾದಯಾತ್ರೆ ಸಮಾವೇಶದಲ್ಲಿ ಮಾತನಾಡಿದ ಅವರು, ನಮ್ಮನ್ನ ದೆಹಲಿಗೆ ಕರೆದೊಯ್ದು, ನನ್ನ ತಗೆದರೆ ಹಿಂದೆ ಲಿಂಗಾಯತ ಸಮುದಾಯ ಇದೆ ಎಂದು ಪೋಸ್ ಕೊಡ್ತೀರಾ ಎಂದು ಪರೋಕ್ಷವಾಗಿ ಸಿಎಂ ವಿರುದ್ಧ ಹರಿಹಾಯ್ದಿದ್ದಾರೆ.

ವೀರಶೈವ ಲಿಂಗಾಯತರು ಹಿಂದುಳಿದವರು ಅಂತಾ ಹೇಳಿ ಅದನ್ನ ಅರ್ಧಕ್ಕೆ ಯಾಕೆ ನಿಲ್ಲಿಸಿದಿರಿ. ಯಡಿಯೂರಪ್ಪನವರೇ ಬರೀ ಭಾಷಣದಿಂದ ಆಗಲ್ಲ. ಪಂಚಮಸಾಲಿ ಸಮಾಜದ ಋಣ ಇದೆ ಅಂದಿದ್ರಿ. ಈ ಪಾದಯಾತ್ರೆ ಬೆಂಗಳೂರು ಮುಟ್ಟುವುದರೊಳಗಾಗಿ, ಮೀಸಲಾತಿ ಕೊಟ್ಟುಬಿಡಿ ಎಂದು ಪ್ರಧಾನಿಯಿಂದಲೇ ಆದೇಶ ಬರುತ್ತೆ ಎಂದು ಹೇಳಿದರು.

ನಮ್ಮ ಸಮುದಾಯದ ನಾಯಕರಿಗೆ ಮಂತ್ರಿ ಕೊಡಲಿಲ್ಲ ಎಂದರೆ ಪಂಚಮಸಾಲಿ ಸಮುದಾಯ ಕೈ ಬಿಡುತ್ತೆ ಎಂದು ಹೇಳಿಬಿಡೋದು. ಇಬ್ಬರು ಮೂವರನ್ನ ಮಂತ್ರಿ ಮಾಡಿದರೆ ಸಮಾಜ ಉದ್ಧಾರ ಆಗುತ್ತಾ ಎಂದು ಪರೋಕ್ಷವಾಗಿ ಹರಿಹರ ಪೀಠದ ವಚನಾನಂದ ಸ್ವಾಮೀಜಿಗೆ ಟಾಂಗ್ ನೀಡಿದರು. ಅಲ್ಲದೆ ಪಾದಯಾತ್ರೆ ಅಂದ್ರೆ ಸುಲಭವಲ್ಲ, ಕಾಲಲ್ಲಿ ಗುಳ್ಳೆ ಏಳುತ್ತವೆ. ತೊಡೆಗಳು ನೋವಾಗುತ್ತವೆ ಎಂದರು.

ಸ್ವಲ್ಪ ಬಾಯಿ ಕಡಿಮೆ ಮಾಡಿದರೆ ಮುಖ್ಯಮಂತ್ರಿ ಅಕ್ಕೀರಿ ಎಂದು ಕೆಲವರು ನನಗೆ ಹೆಳಿದರು. ಆದರೆ ಮುಖ್ಯಮಂತ್ರಿ ಆಗಿ ಕಿಸಿಯುದು ಏನ್ ಐತಿ. ಬಸನಗೌಡ ಪಾಟೀಲ್ ಯತ್ನಾಳ್ ಸ್ವಲ್ಪ ಜಾಸ್ತಿ ಮಾತಾಡಿದ್ರೆ ಅವ್ರನ್ನ ಮುಗಿಸಬೇಕು ಎನ್ನುತ್ತಾರೆ. ಏನ್ ತಲೆ ಮುಗಿಸೋದಾಗತ್ತ. ನಾಳೆ ನನ್ನ ಮುಖ್ಯಮಂತ್ರಿ ಮಾಡ್ತೀನಿ ಅಂದರೂ ನಾನು ಹೋಗಲ್ಲ, ಸಮಾಜಕ್ಕೆ ಮೀಸಲಾತಿ ಸಿಗಲಿ, ಉದ್ಧಾರ ಆಗಲಿ. ನಾನು ಮುಖ್ಯಮಂತ್ರಿ ಆಗುತ್ತೇನೋ ಇಲ್ಲೋ ಗೊತ್ತಿಲ್ಲ. ಆದರೆ ಸಮುದಾಯಕ್ಕೆ ಅನ್ಯಾಯ ಆಗುವ ಕೆಲಸ ಮಾಡುವುದಿಲ್ಲ. ಈ ಹಿಂದೆ ನನ್ನನ್ನು ಪಂಚಮಸಾಲಿ ರಾಷ್ಟ್ರೀಯ ಅಧ್ಯಕ್ಷ ಆಗಿ ಎಂದರು. ಆದರೆ ನಾನೇ ಬೇಡ ಎಂದೆ. ನಾನು ಹಿಂದುತ್ವದ ಮೇಲೆ ಬಂದವನು. ಸಮುದಾಯಕ್ಕೆ ಕೆಟ್ಟತನ ಮಾಡಿ ಮುಖ್ಯಮಂತ್ರಿ ಆಗಬೇಕು ಎಂಬ ಆಸೆ ನನಗಿಲ್ಲ ಎಂದು ಯತ್ನಾಳ್ ಹೇಳಿದರು.

ಶಾಸಕರು ರಾಜೀನಾಮೆ ನೀಡಿ ಹೋರಾಟ ಮಾಡಿ ಎಂದ ಮಾಜಿ ಶಾಸಕ ರವಿಕಾಂತ್ ಪಾಟೀಲ್ ಗೆ ಯತ್ನಾಳ್ ಟಾಂಗ್ ಕೊಟ್ಟಿದ್ದು, ನೀನು ಮಾಜಿ, ನಾನು ಹಾಲಿ. ನಾನು ರಾಜೀನಾಮೆ ನೀಡಿ ಹೋರಾಟ ಮಾಡುವವನಲ್ಲ. ಅಧಿಕಾರದಲ್ಲಿದ್ದೇ ಹೋರಾಡುತ್ತೇನೆ. ಈ ಪಾದಯಾತ್ರೆಯಲ್ಲಿ ನಮ್ಮ ಸಮುದಾಯದ ಭವಿಷ್ಯವಿದೆ. ನಮಗೆ ಸಿಗಬೇಕಾದ ಸೌಲಭ್ಯದ ಬಗ್ಗೆ ಪಾದಯಾತ್ರೆ ನಡೆಸಲಾಗುತ್ತಿದೆ. ಆದರೆ ಅವರು ಸುಮ್ಮನೆ ಭರವಸೆ ನೀಡುತ್ತಾರೆ. ಅಲ್ಲದೆ ನಮ್ಮ ಹೋರಾಟ ವಿಫಲಗೊಳಿಸಬೇಕೆಂಬ ದೊಡ್ಡ ಷಡ್ಯಂತ್ರ ನಡೆದಿದೆ. ಪಂಚಮಸಾಲಿ ಸ್ವಾಮೀಜಿ ಅವರ ಬೆನ್ನು ಹತ್ತಿ, ನಿಮ್ಮ ಹೋರಾಟಕ್ಕೆ ವೈಯಕ್ತಿಕವಾಗಿ 5 ಲಕ್ಷ ರೂ. ನೀಡುತ್ತೇನೆ. ನಾನು ಪಾದಯಾತ್ರೆಗೆ ಬಂದು ಐದೈದು ಕಿಲೋಮೀಟರ್ ನಡೆಯುತ್ತೇನೆ. 108 ಕೆ.ಜಿ. ತೂಕವಿದ್ದೇನೆ. ನನ್ನ ಕೈಲಾದಷ್ಟು ಪಾದಯಾತ್ರೆ ಮಾಡುತ್ತೇನೆ ಎಂದರು.

ಸಮುದಾಮಯದ ನ್ಯಾಯಯುತ ಬೇಡಿಕೆ ಈಡೇರಿಕೆಗಾಗಿ ಬೆಂಗಳೂರು ವರೆಗೆ ನಡೆಯುತ್ತಿರುವ ಪಾದಯಾತ್ರೆ ಇದು. ಇವತ್ತಿನ ಕಾರ್ಯಕ್ರಮ ಇತಿಹಾಸದಲ್ಲಿ ದಾಖಲಾಗಲಿದೆ. ಇತ್ತೀಚಿನ ಪೂರ್ವಭಾವಿ ಸಭೆಯಲ್ಲಿ ಸಿಸಿ ಪಾಟೀಲ್ ಬಂದಿದ್ರು. ನಮ್ಮ ಸ್ವಾಮೀಜಿಗಳ ಮಠ ಹಳ್ಳಿ ಮನೆ ರೀತಿ ಇದೆ. ಮಠಗಳ ಕೆಲಸಕ್ಕಾಗಿ ರಾಜಕಾರಣಿಯ ಬೆನ್ನು ಹತ್ತಿ, ಯಡಿಯೂರಪ್ಪನವರನ್ನು ಹೆದರಿಸಿ 2 ಕೋಟಿ ರೂಪಾಯಿ ತೆಗೆದುಕೊಳ್ಳಲು ಪಾದಾಯತ್ರೆ ಮಾಡುತ್ತಿದ್ದೇವೆ ಎಂದು ತಿಳಿದಿದ್ದೀರಾ, 20 ಲಕ್ಷ ರೂ. ನೀಡಿ ಮಠ ಖರೀದಿ ಮಾಡಬೇಕಂತಿದ್ದಾರೆ. ಸರ್ಕಾರದ ದುಡ್ಡು ತೆಗೆದುಕೊಳ್ಳಬೇಡಿ ಎಂದು ನಾನು ಮೊದಲೇ ಹೇಳಿದ್ದೆ ಎಂದು ಕಿಡಿಕಾರಿದರು.

ಬಿಜೆಪಿಯಲ್ಲಿ ಜಮಖಾನ ಹಾಸಿದ್ದೇನೆ. ಅಟಲ್ ಬಿಹಾರಿ ವಾಜಪೇಯಿ ಆಡಳಿತದಲ್ಲಿ ಮಂತ್ರಿ ಆಗಿದ್ದೆ. ಪಾಜಪೇಯಿ ಪುಣ್ಯಾತ್ಮ, ದೇವರು ಅವರು. ಹಿಂದೆ ನಿಯೋಗ ಕೊಂಡೊಯ್ದಾಗ, ವಾಜಪೇಯಿ, ಅಡ್ವಾಣಿ ಖುಷಿಯಾಗಿದ್ದರು. ದೆಹಲಿಯಲ್ಲಿ ರೈತರ ಹೆಸರಲ್ಲಿ ದಲ್ಲಾಳಿಗಳು ಹೋರಾಟ ನಡೆಸುತ್ತಿದ್ದಾರೆ. ಬ್ರಹ್ಮಚಾರಿಗಳಿಗೆ ಆಸೆಗಳು ಇರಲ್ಲ. ಪ್ರಧಾನಿ ಮೋದಿ ಬ್ರಹ್ಮಚಾರಿ, ಅವರಿಗೆ ಯಾವುದೇ ಆಸೆ ಇಲ್ಲ.

Click to comment

Leave a Reply

Your email address will not be published. Required fields are marked *

Advertisement
Advertisement