– ಸಮಿತಿಯ ಖಾಸಗಿ ಕಾರ್ಯದರ್ಶಿ ಅಮಾನತು
– ಮೂರು ಸದಸ್ಯರ ಸಮಿತಿಯಿಂದ ತನಿಖೆ
ಡೆಹ್ರಾಡೂನ್: ಬದರಿನಾಥ ದೇಣಿಗೆ (Badrinath Dham) ಹಣ ಕಳ್ಳತನ ಆರೋಪಕ್ಕೆ ಸಂಬಂಧಿಸಿದಂತೆ ಸಿಎಂ ಪುಷ್ಕರ್ ಸಿಂಗ್ ಧಾಮಿ (Pushkar Singh Dham) ಅವರು ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದು, ಮೂರು ಜನರ ವಿಶೇಷ ಸಮಿತಿ ರಚಿಸಲಾಗಿದೆ.
ಈ ಕುರಿತು ಸಮಿತಿಯ ಅಧ್ಯಕ್ಷ ಹೇಮಂತ್ ದ್ವಿವೇದಿ (Hemant Dwivedi) ಅವರು ಮಾಹಿತಿ ನೀಡಿದ್ದು, ಪ್ರಾಥಮಿಕ ತನಿಖೆಯಲ್ಲಿ ಮೇಲ್ನೋಟಕ್ಕೆ ಲೋಪದೋಷಗಳು ಕಂಡುಬಂದ ಹಿನ್ನೆಲೆ ಬದರಿನಾಥ್-ಕೇದಾರನಾಥ ದೇವಸ್ಥಾನ ಸಮಿತಿಯು (Shri Badrinath-Kedarnath Temple Committee) ಖಾಸಗಿ ಕಾರ್ಯದರ್ಶಿಯಾಗಿದ್ದ ಪ್ರಮೋದ್ ನೌಟಿಯಾಲ್‌ನನ್ನು ಅಮಾನತುಗೊಳಿಸಿದ್ದು, ಆತನ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಆರೋಪ ಸಾಬೀತಾದರೆ ಇನ್ನಷ್ಟು ಸಿಬ್ಬಂದಿ ಅಥವಾ ಅಧಿಕಾರಿಗಳ ಪಾತ್ರವನ್ನೂ ತನಿಖೆಯ ವ್ಯಾಪ್ತಿಗೆ ತರಲಾಗುವ ಸಾಧ್ಯತೆ ಇದೆ ಎಂದಿದ್ದಾರೆ.ಇದನ್ನೂ ಓದಿ:ಬದರಿನಾಥ ಧಾಮದಲ್ಲೂ ದೇಣಿಗೆ ದುರುಪಯೋಗ ಆರೋಪ – ತನಿಖೆಗೆ 4 ಸದಸ್ಯರ ಸಮಿತಿ ರಚನೆ
ಸರ್ಕಾರದ ಹೊಸ ತನಿಖಾ ಸಮಿತಿ:
ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರ ಆದೇಶದ ಮೇರೆಗೆ ಸರ್ಕಾರ 3 ಜನರ ಪ್ರತ್ಯೇಕ ಸಮಿತಿ ರಚಿಸಿದೆ. ಈ ತಂಡವು ಇಂದಿನಿಂದಲೇ (ಜು.8) ತನಿಖೆಯನ್ನು ಶುರು ಮಾಡಿದೆ. ಇದಕ್ಕೆ ಗರ್ವಾಲ್ ವಿಭಾಗದ ಕಮಿಷನರ್ ಮುಖ್ಯಸ್ಥರಾಗಿದ್ದಾರೆ. ಈ ಸಮಿತಿಯು ಮುಂದಿನ 15 ದಿನಗಳ ಒಳಗಾಗಿ ತನಿಖೆ ನಡೆಸಿ ಸರ್ಕಾರಕ್ಕೆ ವರದಿ ನೀಡಲು ಆದೇಶಿಸಿದ್ದಾರೆ.
ಇನ್ನೊಂದು ಕಡೆ ದೇವಸ್ಥಾನದ ಸಮಿತಿಯು ಕಳೆದ ವಾರವೇ ನಾಲ್ಕು ಜನ ಹಿರಿಯ ಅಧಿಕಾರಿಗಳ ತಂಡವನ್ನು ರಚಿಸಿತ್ತು. ಈ ತಂಡವು ದೇವಸ್ಥಾನದ ಸಿಸಿಟಿವಿ ದೃಶ್ಯಗಳು, ಅಲ್ಲಿನ ನೌಕರರ ಹೇಳಿಕೆಗಳು ಮತ್ತು ದೇವಸ್ಥಾನದ ದಾಖಲೆ ಪತ್ರಗಳನ್ನು ಪರಿಶೀಲಿಸಿ ತನಿಖೆ ನಡೆಸುತ್ತಿದೆ. ಯಾವುದೇ ಅಕ್ರಮಗಳು ಬೆಳಕಿಗೆ ಬಂದಲ್ಲಿ, ತಪ್ಪಿತಸ್ಥರ ವಿರುದ್ಧ `ಶ್ರೀ ಬದರಿನಾಥ-ಕೇದರನಾಥ ದೇವಸ್ಥಾನ ಸಮಿತಿ ಕಾಯ್ದೆ, 1939′ ಮತ್ತು ನೌಕರರ ನಡವಳಿಕೆ ನಿಯಮಗಳ ಅಡಿಯಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು. ತನಿಖೆ ಮುಗಿಯುವವರೆಗೆ ಸಾರ್ವಜನಿಕರು ದಾರಿ ತಪ್ಪಿಸುವ ಮಾಹಿತಿಯನ್ನು ಹರಡಬಾರದು ಎಂದು ಮನವಿ ಮಾಡಿದ್ದಾರೆ.
ಏನಿದು ವಿವಾದ?
ಬದರಿನಾಥ ದೇವಸ್ಥಾನದಲ್ಲಿ ಭಕ್ತರು ನೀಡಿದ ಕಾಣಿಕೆ ಹಣವನ್ನು ಎಣಿಸುವಾಗ ಅಕ್ರಮ ನಡೆದಿದೆ ಎಂಬ ವಿಷಯ ಮೊದಲು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದನ್ನು ಗಮನಿಸಿದ `ಭೈರವ್ ಸೇನಾ’ ಎಂಬ ಸಂಘಟನೆಯು, ಈ ಬಗ್ಗೆ ತನಿಖೆ ನಡೆಸಿ ಎಂದು ಅಧಿಕೃತವಾಗಿ ದೂರು ನೀಡಿತ್ತು. ಸದ್ಯ ಭಕ್ತರು ಭಕ್ತಿಯಿಂದ ದೇವರಿಗೆ ಸಲ್ಲಿಸುವ ಕಾಣಿಕೆ ಹಣದಲ್ಲೇ ಅಕ್ರಮ ನಡೆದಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.ಇದನ್ನೂ ಓದಿ:ರಾಮ ಮಂದಿರ ಆಯ್ತು, ಈಗ ಬದರಿನಾಥ ಧಾಮದಲ್ಲೂ ದೇಣಿಗೆ ದುರುಪಯೋಗ ಆರೋಪ: ತನಿಖೆಗೆ ಆದೇಶ
