– ಫ್ರೀಡಂ ಹಬ್ಬಕ್ಕೆ ಬಹುಪರಾಕ್ ಹೇಳಿದ ಬೆಂಗಳೂರಿಗರು
– ಇದು ನವಯುಗ, ನಿಮ್ಮ ಯುಗ, ನಿಮ್ಮ ಬೆಂಗಳೂರು ಎಂದ ಸಿಎಂ

ಬೆಂಗಳೂರು: ವಿಧಾನಸೌಧದಲ್ಲಿ ಆಯೋಜಿಸಿದ್ದ ಫ್ರೀಡಂ ಹಬ್ಬ ಸಮಾರಂಭದಲ್ಲಿ ಸಿಎಂ ಡಿ.ಕೆ.ಶಿವಕುಮಾರ್ ಅವರು ಮಾತನಾಡುವಾಗ ಜನರು, ‘ಮೋದಿ ಮೋದಿ’.. ಅಂತ ಕೂಗಿದ ಪ್ರಸಂಗ ನಡೆಯಿತು. ಹಾಗೆ ಕೂಗಿದ ಜನರಿಗೆ ಸಿಎಂ ಪರೋಕ್ಷವಾಗಿ ಟಾಂಗ್ ಕೊಟ್ಟರು.
ಸಮಾರಂಭದಲ್ಲಿ ಸಿಎಂ ಮಾತು ಆರಂಭಿಸುತ್ತಿದ್ದಂತೆ ಜನರು, ‘ಮೋದಿ ಮೋದಿ’ ಅಂತಾ ಕೂಗಿದರು. ಅದಕ್ಕೆ ಪ್ರತಿಕ್ರಿಯಿಸಿದ ಸಿಎಂ, ‘ಮೋದಿನೇ ಡಿಕೆ ಡಿಕೆ ಅಂತಿದ್ದಾರೆ.. ನೀವು ಮೋದಿ ಮೋದಿ ಅಂತಿದ್ದೀರಾ’ ಎಂದು ಜನರಿಗೆ ಟಾಂಗ್ ಕೊಟ್ಟರು. ಆಗ ಮತ್ತೆ ಜನರು, ‘ಡಿಕೆ ಡಿಕೆ’ ಅಂತ ಕೂಗಿದರು.
ನಂತರ ಮಾತು ಮುಂದುವರಿಸಿದ ಸಿಎಂ, 80ನೇ ವರ್ಷದ ಸ್ವಾತಂತ್ರ‍್ಯ ದಿನಾಚರಣೆ ಕೋರುತ್ತೇನೆ. ಇದು ನವಯುಗ, ಇದು ನಿಮ್ಮ ಯುಗ, ನವ ಕರ್ನಾಟಕ, ನಿಮ್ಮ ಬೆಂಗಳೂರು. ನಮ್ಮ ಹಿರಿಯರು ಕೊಟ್ಟ ಸ್ವಾತಂತ್ರ‍್ಯ ಸಂಗ್ರಾಮದಲ್ಲಿ ನಾವು ಇದನ್ನ ಉಳಿಸಿಕೊಳ್ಳಬೇಕು. ಇಡೀ ದೇಶ ನಿಮ್ಮನ್ನ ನೋಡ್ತಾ ಇದೆ. ಇಂದು ಮಧ್ಯಾಹ್ನ 15 ಸಾವಿರ ಮಂದಿ ವಿಧಾನಸೌಧಕ್ಕೆ ಬಂದಿದ್ದರು. ಮೊದಲು ಜನ ಇಲ್ಲಿ ಬಂದು ಪೋಟೊ ತೆಗೆದುಕೊಂಡು, ಕಡಲೆಕಾಯಿ ತಿನ್ಕೊಂಡು ಹೋಗ್ತಿದ್ರು. ಈ ದೇಗುಲದಲ್ಲಿ ನೀವು ನಾವು ಸೇರಿದ್ದು ಒಂದು ಪುಣ್ಯ. ನನಗೆ ಭಾಷಣ ಮುಖ್ಯ ಅಲ್ಲ. ನಿಮ್ಮನ್ನು ಭೇಟಿ ಮಾಡಲು ಬಂದಿದ್ದೇನೆ ಎಂದರು.
ಭಾರತ್ ಜೋಡೊದಲ್ಲಿ ನಿಮಗೆಲ್ಲಾ ಅವಕಾಶ ಇದೆ. ಆ ಸ್ಪರ್ಧೆಯಲ್ಲಿ ನೀವೆಲ್ಲಾ ಪಾಲ್ಗೊಳ್ಳಬೇಕು. ನೀವು ಭವಿಷ್ಯ ದೇಶದ ಶಕ್ತಿ. ಅಭಿವೃದ್ಧಿಶೀಲ ರಾಷ್ಟ್ರ ಮಾಡಲು ಪ್ರಯತ್ನ ಮಾಡ್ತಾ ಇದ್ದೇವೆ. ಮುಂದೆ ಇನ್ನೂ ಹೆಚ್ಚಿನ ಕಾರ್ಯಕ್ರಮ ಮಾಡೋಣ. ಯಾರಿಗೂ ಯಾವುದೇ ತೊಂದರೆ ಆಗದೇ ರಕ್ಷಣೆ ಕೊಡಬೇಕು. ಎಲ್ಲಾ ನಿಲ್ಲಿಸಿ ನಮ್ಮ ಸರ್ಕಾರಕ್ಕೆ ಈ ರಾಜ್ಯಕ್ಕೆ ಆರ್ಶೀವಾದ ಮಾಡಿ ಅಂತಾ ಯುವಜನತೆ, ಜನರಲ್ಲಿ ಸಿಎಂ ಮನವಿ ಮಾಡಿದರು.
30 ವರ್ಷಗಳ ಹಿಂದೆ ಈ ಜಾಗದಲ್ಲಿ ನಿಂತುಕೊಂಡು ಪೋಟೋ ಕ್ಲಿಕ್ಕಿಸಿಕೊಂಡು ಹೋಗುತ್ತಿದ್ದರು. ಇಂದು ನೀವೆಲ್ಲಾ ಬಂದು ಸಂಭ್ರಮ ಪಟ್ಟಿದ್ದೀರಿ. ಫ್ರೀಡಂ ಇಸ್ ಪಲ್ಸ್, ಯೂತ್ ಇಸ್ ಪವರ್. ನೀವೆಲ್ಲಾ ನಗುನಗುತಾ ಸಂತೋಷವಾಗಿ ಇರಬೇಕು. ಸಚಿವ ಕೃಷ್ಣ ಬೈರೇಗೌಡ ನೇತೃತ್ವದಲ್ಲಿ ಕಾರ್ಯಕ್ರಮ ತುಂಬ ಚೆನ್ನಾಗಿ ಆಗಿದೆ ಎಂದು ಸಿಎಂ ಅಭಿನಂದಿಸಿದರು.
ಫ್ರೀಡಂ ಹಬ್ಬಕ್ಕೆ ಬೆಂಗಳೂರಿಗರು ಬಹುಪರಾಕ್ ಹೇಳಿದರು. ಪ್ರತಿ ಸಲ ಸರ್ಕಾರ ಇಂತಹ ಕಾರ್ಯಕ್ರಮವನ್ನ ಆಯೋಜನೆ ಮಾಡಬೇಕು. ಮಕ್ಕಳಿಗೆ ಜನರಿಗೆ ಸಂಗೀತ ವ್ಯವಸ್ಥೆ ನೋಡುಗರ ಗಮನ ಸೆಳೆಯುತ್ತಿದೆ. ಎಲ್ಲಾ ವ್ಯವಸ್ಥೆ ಅಚ್ಚುಕಟ್ಟಾಗಿ ಮಾಡಿದ್ದಾರೆ. ನಮ್ಮ ಬೆಂಗಳೂರಿನಲ್ಲಿ ಇಂತಹದೊಂದು ಕಾರ್ಯಕ್ರಮ ಅದ್ಭುತವಾಗಿದೆ ಎಂದ ಬೆಂಗಳೂರಿಗರು ಸಂತಸ ವ್ಯಕ್ತಪಡಿಸಿದರು.
ವಿಧಾನಸೌಧದ ಮೇಲೆ ಬೆಳಕಿನ ಚಿತ್ತಾರ ಮೂಡಿಬಂತು. ಕಲರ್‌ಫುಲ್ ಫ್ರೀಡಂ ಸ್ಕೈ ಕಾರ್ಯಕ್ರಮ ಜನರ ಮನಗೆದ್ದಿತು. ಬೆಳಕಿನ ಕಿರಣಗಳು ಅದ್ಭುತ ಚಿತ್ತಾರ ಮೂಡಿಬಂತು.
