ಹಾವೇರಿ: ಇದೊಂಥರಾ ವಿಚಿತ್ರ ಕಥೆ. ಎಲ್ಲಾ ಗೊಂದಲ ಗೋಜಲು. ಮದುವೆಯಾಗದ ಯುವತಿಗೆ ಮಗುವಾಗುತ್ತೆ. ಮಗು ಜನಿಸಿದ ಕೆಲವೇ ಕ್ಷಣಗಳಲ್ಲಿ ಆಸ್ಪತ್ರೆಯಿಂದ ನಾಪತ್ತೆಯಾಗುತ್ತೆ. ಮಗು ಏನಾಯ್ತು ಅನ್ನೋದೇ ಈಗ ನಿಗೂಢವಾಗಿದೆ.
ಹಾವೇರಿಯ ವೀರಾಪುರ ಮಲ್ಟಿಸ್ಪೆಷಾಲಿಟಿ ಖಾಸಗಿ ಆಸ್ಪತ್ರೆಯಲ್ಲಿ ಅಕ್ಟೋಬರ್ 7ರಂದು ಮದುವೆಯಾಗದ ಯುವತಿಗೆ ಮಗು ಜನಿಸಿತ್ತು. ಆರೋಗ್ಯವಾಗಿದ್ದ ತಾಯಿ-ಮಗು ಇಬ್ಬರನ್ನೂ ಜನರಲ್ ವಾರ್ಡ್ಗೆ ಶಿಫ್ಟ್ ಮಾಡಿದ್ರು. ಆದ್ರೆ ಕೆಲವೇ ಗಂಟೆಗಳಲ್ಲಿ ಮಗು ನಾಪತ್ತೆಯಾಯ್ತು. ಈ ಬಗ್ಗೆ ವೈದ್ಯರು ಯುವತಿಯನ್ನ ವಿಚಾರಿಸಿದಾಗ ಸಂಬಂಧಿಕರು ಮನೆಗೆ ತೆಗೆದುಕೊಂಡು ಹೋದ್ರು ಎಂದಿದ್ದಳು. ಇದಾದ ಕೆಲವೇ ಗಂಟೆಗಳಲ್ಲಿ ತಾಯಿ ಹಾಗೂ ಸಂಬಂಧಿಕರು ಕೂಡ ನಾಪತ್ತೆಯಾದ್ರು. ಇದೆಲ್ಲಾ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.
Advertisement
Advertisement
ಅನುಮಾನಗೊಂಡ ವೈದ್ಯರು ಸಿಸಿಟಿವಿ ಪರೀಕ್ಷೆ ಮಾಡಿದಾಗ ವಾರ್ಡ್ನಿಂದ ಮಗು ಎತ್ಕೊಂಡು ಹೋಗಿರೋದು ಮಾತ್ರ ಕಾಣಿಸಿಲ್ಲ. ಕಡೆಗೆ ತಾಯಿಯ ದಾಖಲಾತಿ ಪರೀಕ್ಷಿಸಿದಾಗ ಆಕೆಗೆ ಮದುವೆಗೆ ಮುಂಚೆ ಮಗು ಆಗಿರೋದು ಗೊತ್ತಾಗಿದೆ. ಕೂಡಲೇ ವೈದ್ಯರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಲಿಖಿತ ದೂರು ಸಲ್ಲಿಸಿದ್ದಾರೆ.
Advertisement
Advertisement
ದೂರು ದಾಖಲಿಸಿಕೊಂಡ ಮಹಿಳಾ ರಕ್ಷಣಾ ಘಟಕದ ಅಧಿಕಾರಿಗಳು ಯುವತಿಯ ಮನೆಗೆ ಭೇಟಿ ನೀಡಿದ್ರು. ಆದ್ರೆ ಮಗು ಸತ್ತು ಹೋಗಿತ್ತು. ಅದಕ್ಕೆ ಅಂತ್ಯಕ್ರಿಯೆ ಮಾಡಲಾಗಿದೆ ಅಂತ ಲಿಖಿತ ಹೇಳಿಕೆ ನೀಡಿದ್ದಾರೆ. ಆದ್ರೆ ವೈದ್ಯರು ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ ಅನ್ನೋ ವರದಿ ಕೊಟ್ಮೇಲೂ ಮಗು ಹೇಗೆ ಸತ್ತು ಹೋಯ್ತು ಅನ್ನೋದಕ್ಕೆ ಉತ್ತರವಿಲ್ಲ.
ಮದುವೆಯಾಗದೆ ಮಗುವಿಗೆ ಜನ್ಮ ನೀಡಿದ್ರಿಂದ ಮರ್ಯಾದೆಗೆ ಅಂಜಿ ಯುವತಿ ಹಾಗೂ ಮನೆಯವರೇ ಮಗುವನ್ನ ಹತ್ಯೆ ಮಾಡಿದ್ರಾ? ಎಂಬ ಸಂಶಯ ವ್ಯಕ್ತವಾಗಿದೆ. ಮಗು ಬದುಕಿದೆಯಾ ಅಥವಾ ಕೊಲೆ ಮಾಡಿದ್ದಾರಾ ಎಂಬ ಬಗ್ಗೆ ತನಿಖೆಯಿಂದಲೇ ಸ್ಪಷ್ಟವಾಗಬೇಕಿದೆ.