ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (PM Modi) ಅವರು ನಾಳೆಯಿಂದ (ಆ.29) ನಾಲ್ಕು ದಿನಗಳ ಕಾಲ ಉಜ್ಬೇಕಿಸ್ತಾನ್ ಮತ್ತು ಕಿರ್ಗಿಸ್ತಾನ್ ದೇಶಗಳಿಗೆ ಭೇಟಿ ನೀಡಲಿದ್ದಾರೆ. ಅಲ್ಲಿ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವ ಕುರಿತು ಚರ್ಚೆ ನಡೆಸಲಿದ್ದಾರೆ.
ಈ ಕುರಿತು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಾಹಿತಿ ನೀಡಿದೆ. ಪ್ರಧಾನಿ ಮೋದಿ ಅವರು ಆ.29ರಿಂದ 30ರವರೆಗೆ ಉಜ್ಬೇಕಿಸ್ತಾನ್‌ಗೆ (Uzbekistan) ಭೇಟಿ ನೀಡಲಿದ್ದಾರೆ. ಈ ವೇಳೆ ವಿವಿಧ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವ ಮಾರ್ಗಗಳನ್ನು ಅನ್ವೇಷಿಸುವ ಬಗ್ಗೆ ಚರ್ಚೆ ಮಾಡಲಿದ್ದಾರೆ. ಇದನ್ನೂ ಓದಿ: ಇಂದು ಚುನಾವಣೆ ನಡೆದರೆ ಎನ್‌ಡಿಎಗೆ 326 ಸ್ಥಾನ – ಕಾಂಗ್ರೆಸ್ ಸ್ವಲ್ಪ ಚೇತರಿಕೆ
ಉಜ್ಬೇಕಿಸ್ತಾನ್‌ನಿಂದ ಪ್ರಧಾನಿ ಮೋದಿ ಕಿರ್ಗಿಸ್ತಾನ್ (Kyrgyzstan) ರಾಜಧಾನಿ ಬಿಷ್ಕೇಕ್‌ಗೆ ಪ್ರಯಾಣ ಬೆಳೆಸಲಿದ್ದು, ಅಲ್ಲಿ ನಡೆಯಲಿರುವ ಶಾಂಘೈ ಸಹಕಾರ ಸಂಘಟನೆಯ ವಾರ್ಷಿಕ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ಈ ಶೃಂಗಸಭೆಯಲ್ಲಿ ಈ ಪ್ರದೇಶದಲ್ಲಿ ಬದಲಾಗುತ್ತಿರುವ ಭದ್ರತಾ ಪರಿಸ್ಥಿತಿಯ ಕುರಿತು ವಿಸ್ತೃತವಾಗಿ ಚರ್ಚಿಸುವ ನಿರೀಕ್ಷೆಯಿದೆ. ಭಯೋತ್ಪಾದನೆ, ಪ್ರತ್ಯೇಕತಾವಾದ ಮತ್ತು ಉಗ್ರವಾದವನ್ನು ಎದುರಿಸುವ ಪ್ರಾಥಮಿಕ ಗುರಿಯೊಂದಿಗೆ ಎಸ್‌ಸಿಒ ಅನ್ನು ಸ್ಥಾಪಿಸಲಾಗಿದ್ದು, ಇವುಗಳು ಇಂದಿಗೂ ಸವಾಲಾಗಿ ಮುಂದುವರಿದಿವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ (ಪಶ್ಚಿಮ) ಕಾರ್ಯದರ್ಶಿ ಸಿಬಿ ಜಾರ್ಜ್ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದ್ದಾರೆ.
