ಬಳ್ಳಾರಿ: ಬಿ. ನಾಗೇಂದ್ರ ಅವರು ನವೆಂಬರ್ 10ರ ವೇಳೆಗೆ ಮತ್ತೆ ಸಂಪುಟ ಸೇರ್ಪಡೆಯಾಗಲಿದ್ದಾರೆ ಎಂದು ವಸತಿ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹ್ಮದ್ ಖಾನ್(Zameer Ahmed) ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬಳ್ಳಾರಿಯಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಹಲವು ಮಹತ್ವದ ರಾಜಕೀಯ ಬೆಳವಣಿಗೆಗಳ ಕುರಿತು ಪ್ರತಿಕ್ರಿಯೆ ನೀಡಿದರು.
ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆ ಮತ್ತು ನಾಗೇಂದ್ರ(Nagendra) ಅವರ ಸಂಪುಟ ಮರುಪ್ರವೇಶದ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಜಮೀರ್, “ವಾಲ್ಮೀಕಿ ಅಭಿವೃದ್ಧಿ ನಿಗಮದ ಪ್ರಕರಣದಲ್ಲಿ ಬಿ. ನಾಗೇಂದ್ರ ಅವರ ಯಾವುದೇ ತಪ್ಪಿಲ್ಲ. ಅಂದು ಪ್ರತಿಪಕ್ಷಗಳು ಸದನ ನಡೆಸಲು ಬಿಡದೆ ಪಾದಯಾತ್ರೆ ನಡೆಸಿದವು. ಇದರಿಂದ ಸರ್ಕಾರ ಮತ್ತು ಪಕ್ಷಕ್ಕೆ ಮುಜುಗರವಾಗಬಾರದು ಎಂಬ ಏಕೈಕ ಕಾರಣಕ್ಕೆ ನಾಗೇಂದ್ರ ಅವರು ಸ್ವಯಂಪ್ರೇರಿತರಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಪ್ರಕರಣದ ತನಿಖೆ ಅಂತಿಮ ಹಂತದಲ್ಲಿದ್ದು, ಶೀಘ್ರದಲ್ಲೇ ಸಿಒಡಿ ವರದಿ ಹೊರಬರಲಿದೆ. ನವೆಂಬರ್ 10ರೊಳಗೆ ನಾಗೇಂದ್ರ ಅವರು ಮತ್ತೊಮ್ಮೆ ಸಚಿವರಾಗಲಿದ್ದಾರೆ” ಎಂದರು.
ಸ್ಟಿಂಗ್ ಆಪರೇಷನ್ ಕುರಿತು ಹೈಕಮಾಂಡ್ಗೆ ದೂರು ನೀಡಲು ಸಿದ್ದರಾಮಯ್ಯ(Siddaramaiah) ದೆಹಲಿಗೆ ತೆರಳಿದ್ದಾರೆ ಎಂಬ ಸುದ್ದಿಯನ್ನು ಸಚಿವರು ತಳ್ಳಿಹಾಕಿದರು. “ರಾಜ್ಯೋತ್ಸವ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಸಿಎಂ ಸೇರಿದಂತೆ ರಾಜ್ಯದ ಇತರ ಸಚಿವರು ದೆಹಲಿಗೆ ತೆರಳಲು ಸಾಧ್ಯವಾಗಿಲ್ಲ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರ ಕರೆಯ ಮೇರೆಗೆ ಅಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಭಾಗವಹಿಸಲು ಮಾತ್ರ ಸಿದ್ದರಾಮಯ್ಯ ತೆರಳಿದ್ದಾರೆಯೇ ಹೊರತು ಯಾವುದೇ ದೂರು ನೀಡಲು ಅಲ್ಲ” ಎಂದು ಸ್ಪಷ್ಟಪಡಿಸಿದರು.
ಸಿದ್ದರಾಮಯ್ಯ ವಿರುದ್ಧ ನಡೆದಿದೆ ಎನ್ನಲಾದ ಸ್ಟಿಂಗ್ ಆಪರೇಷನ್ ಷಡ್ಯಂತ್ರದ ಆರೋಪಗಳಿಗೆ ತಿರುಗೇಟು ನೀಡಿದ ಅವರು, ಕೆಲವರಿಗೆ ಬೇರೆ ಕೆಲಸವಿಲ್ಲ. ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗುವುದನ್ನು ಕೆಲವರಿಂದ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಸಿದ್ದರಾಮಯ್ಯ ಮತ್ತು ಡಿಕೆಶಿ ನಡುವೆ ಭಿನ್ನಾಭಿಪ್ರಾಯ ಮೂಡಿಸಲು ಕೆಲವರು ಹುನ್ನಾರ ನಡೆಸುತ್ತಿದ್ದಾರೆ, ಆದರೆ ಅದು ಎಂದಿಗೂ ಸಾಧ್ಯವಿಲ್ಲ ಎಂದು ತಿಳಿಸಿದರು.
ನಿಗದಿಗಿಂತ ಹೆಚ್ಚು ಹಾಲಿನ ದರ ಏರಿಕೆಯಾಗಿರುವ ವಿಚಾರವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದ ಸಚಿವರು, ರೈತರ ಹಿತದೃಷ್ಟಿಯಿಂದ ಹಾಲಿನ ದರವನ್ನು ಕೇವಲ ಎಂಟು ರೂಪಾಯಿ ಮಾತ್ರ ಹೆಚ್ಚಿಸಲಾಗಿದೆ. ಇದರಿಂದ ಸರ್ಕಾರಕ್ಕೆ ಯಾವುದೇ ಲಾಭವಿಲ್ಲ, ಸಂಪೂರ್ಣ ಹಣ ರೈತರಿಗೆ ತಲುಪಲಿದೆ. ಇನ್ನು ಕಳೆದ ಹತ್ತು ವರ್ಷಗಳಿಂದ ರಾಜ್ಯದಲ್ಲಿ ಬಸ್ ದರ ಪರಿಷ್ಕರಣೆ ಆಗಿರಲಿಲ್ಲ. ಡೀಸೆಲ್ ದರ ಗಣನೀಯವಾಗಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಬಸ್ ದರ ಹೆಚ್ಚಳ ಮಾಡುವುದು ಅನಿವಾರ್ಯವಾಗಿದೆ ಎಂದು ಸರ್ಕಾರದ ತೀರ್ಮಾನವನ್ನು ಸಮರ್ಥಿಸಿಕೊಂಡರು.
