ಚಂಡೀಗಢ: ದುಷ್ಕರ್ಮಿಗಳಿಂದ ದಾಳಿಗೊಳಗಾಗಿದ್ದ ಪಂಜಾಬ್‌ನ (Punjab) ಇನ್ಸ್ಟಾ ಇನ್‌ಫ್ಲ್ಯೂಯೆನ್ಸರ್ ಒಬ್ಬರು ಎರಡು ತಿಂಗಳ ಬಳಿಕ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.
28 ವರ್ಷದ ಮಂಜೀತ್ ಕೌರ್ ಮೃತ ಮಹಿಳೆ. ಅವರನ್ನು ಅಪಹರಿಸಿ, ಹಲ್ಲೆ ಮಾಡಿ ಬೆಂಕಿ ಹಚ್ಚಲಾಗಿತ್ತು ಎಂದು ಹೇಳಲಾಗಿತ್ತು. ಇದಾದ ಸುಮಾರು ಎರಡು ತಿಂಗಳ ನಂತರ ಅವರು ಸಾವನ್ನಪ್ಪಿದ್ದಾರೆ. ಕೌರ್ ವಿಚ್ಛೇದನ ಪಡೆದಿದ್ದು, ಅವರ ಏಳು ವರ್ಷದ ಮಗ ಬಚಾವ್ ಆಗಿದ್ದಾರೆ ಎಂದು ವರದಿಯಾಗಿದೆ.
ಜುಲೈ 3 ರಂದು ಚಂಡೀಗಢದ ಸೆಕ್ಟರ್ 34 ರಲ್ಲಿರುವ ಮದ್ಯದ ಅಂಗಡಿಯ ಬಳಿ ಶುಭಿ ಮತ್ತು ಪಿಂಡಾ ಎಂಬವರು ಮಂಜಿತ್‌ಳನ್ನು ಕಾರಿನಲ್ಲಿ ಅಪಹರಿಸಿದ್ದರು ಎಂದು ಆಕೆಯ ತಾಯಿ ದೂರಿನಲ್ಲಿ ತಿಳಿಸಿದ್ದಾರೆ. ಬಳಿಕ ಪಂಜಾಬ್‌ನ ರೂಪನಗರ ಜಿಲ್ಲೆಯ ಮೊರಿಂಡಾಗೆ ಕರೆದೊಯ್ದು, ಹಲ್ಲೆ ನಡೆಸಿ, ಮರಕ್ಕೆ ಕಟ್ಟಿ ಬೆಂಕಿ ಹಚ್ಚಿದ್ದಾರೆ. ಸ್ನೇಹಿತೆ ಸ್ಥಳಕ್ಕೆ ಬಂದು ಕಂಬಳಿ ಬಳಸಿ ಬೆಂಕಿಯನ್ನು ನಂದಿಸಿದ್ದಳು ಎಂದು ವರದಿಯಾಗಿದೆ.
ಕೌರ್ ಅವರನ್ನು ಮೊದಲು ಮೊರಿಂಡಾದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ನಂತರ ಮೊಹಾಲಿಗೆ ಕರೆದೊಯ್ಯಲಾಯಿತು. ಸುಟ್ಟ ಗಾಯಗಳ ತೀವ್ರತೆಯಿಂದಾಗಿ ಜುಲೈ 9 ರಂದು ಚಂಡೀಗಢದ ಪಿಜಿಐಎಂಇಆರ್‌ಗೆ ಕಳುಹಿಸಲಾಯಿತು.
ಅವರು ಹಲವಾರು ವಾರಗಳ ಕಾಲ ಪ್ರಜ್ಞಾಹೀನರಾಗಿದ್ದರು. ಆಗಸ್ಟ್ 5 ರಂದು, ಅವರು ಸ್ವಲ್ಪ ಸಮಯದವರೆಗೆ ಪ್ರಜ್ಞೆ ಮರಳಿದ ನಂತರ ಘಟನೆಯನ್ನು ತಮ್ಮ ಕುಟುಂಬಕ್ಕೆ ವಿವರಿಸಿದ್ದರು. ನಂತರ ಅವರ ಸ್ಥಿತಿ ಹದಗೆಟ್ಟಿತು ಮತ್ತು ಅವರು ಆಗಸ್ಟ್ 26 ರಂದು ನಿಧನರಾದರು.
ಆಪಾದಿತ ದಾಳಿಯ ಹಿಂದಿನ ಉದ್ದೇಶ ಇನ್ನೂ ದೃಢಪಟ್ಟಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಕೌರ್ ವಿಚ್ಛೇದನ ಪಡೆದಿದ್ದರು ಎಂದು ತಿಳಿದು ಬಂದಿದೆ. ಮಹಿಳೆಯ ಸಾವಿನ ಬಳಿಕ ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 140(1) (ಅಪಹರಣ), 103(1) (ಕೊಲೆ) ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳ ಪತ್ತೆಗೆ ಪೊಲೀದರು ಬಲೆ ಬೀಸಿದ್ದಾರೆ.
