ಬಳ್ಳಾರಿ: ಜಗತ್ಪ್ರಸಿದ್ಧ ಐತಿಹಾಸಿಕ ಪ್ರವಾಸಿ ತಾಣವಾದ ಹಂಪಿಯಲ್ಲಿ(Hampi) ವಿಜಯನಗರ ಸಾಮ್ರಾಜ್ಯದ ಗತ ವೈಭವ ಹಾಗೂ ಅಂದಿನ ಭೀಕರ ಯುದ್ಧದ ಕರಾಳ ದಿನಗಳನ್ನು ನೆನಪಿಸುವ ಅತ್ಯಂತ ಮಹತ್ವದ ಕುರುಹುಗಳು ಪತ್ತೆಯಾಗಿವೆ.
ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ (ASI) ವತಿಯಿಂದ ಹಂಪಿಯ ಪ್ರಸಿದ್ಧ ಹಜಾರ ರಾಮ ದೇವಸ್ಥಾನದ ಆವರಣದ ಉತ್ತರ ಭಾಗದಲ್ಲಿ ಹಮ್ಮಿಕೊಳ್ಳಲಾಗಿರುವ ವೈಜ್ಞಾನಿಕ ಉತ್ಖನನ ಕಾರ್ಯದಲ್ಲಿ, ಶಿರಚ್ಛೇದನ ಮಾಡಲಾದ ಸ್ಥಿತಿಯಲ್ಲಿರುವ ಅಪರೂಪದ ಆಳ್ವಾರ್ ವಿಗ್ರಹಗಳ ಭಗ್ನ ಅವಶೇಷಗಳು ಪತ್ತೆಯಾಗಿವೆ.
1565 ರಲ್ಲಿ ನಡೆದ ಐತಿಹಾಸಿಕ ತಾಳಿಕೋಟೆ ಯುದ್ಧ (ರಕ್ಕಸ ತಂಗಡಿ ಕದನ) ವಿಜಯನಗರ ಸಾಮ್ರಾಜ್ಯದ(Vijayanagara Dynasty) ಪತನಕ್ಕೆ ಕಾರಣವಾಗಿತ್ತು. ಈ ಯುದ್ಧದಲ್ಲಿ ವಿಜಯನಗರ ಸೋತ ನಂತರ, ಇಡೀ ಸಾಮ್ರಾಜ್ಯವನ್ನು ಧ್ವಂಸಗೊಳಿಸಲು ನುಗ್ಗಿದ ಬಹಮನಿ ಸುಲ್ತಾನರ (Bahmani Sultanate) ಆಕ್ರಮಣಕಾರರ ಸೈನ್ಯವು ಹಂಪಿಯ ಮೇಲೆ ದಾಳಿ ನಡೆಸಿತ್ತು.
ಅಂದು ಇಡೀ ನಗರವನ್ನು ಲೂಟಿ ಮಾಡಿದ ಆಕ್ರಮಣಕಾರರು, ಮುಖ್ಯವಾಗಿ ವೈಷ್ಣವ ದೇವಸ್ಥಾನಗಳನ್ನೇ ಗುರಿಯಾಗಿಸಿಕೊಂಡು ಸಾವಿರಾರು ಭವ್ಯ ವಿಗ್ರಹಗಳನ್ನು ಭಗ್ನಗೊಳಿಸಿದ್ದರು. ಅದರ ಭಾಗವಾಗಿಯೇ ಹಜಾರ ರಾಮ ದೇವಸ್ಥಾನದ ಬಳಿ ಇದ್ದ ಈ ಪವಿತ್ರ ಆಳ್ವಾರ್ ಮೂರ್ತಿಗಳ ಶಿರಚ್ಛೇದನ (ತಲೆ ಕತ್ತರಿಸಿ) ಮಾಡಿ, ಅವುಗಳನ್ನು ನಾಶಪಡಿಸಿ ಮಣ್ಣಿನಲ್ಲಿ ಹೂತುಹಾಕಲಾಗಿತ್ತು ಎಂಬುದು ಈಗ ಹೊರಬಿದ್ದಿರುವ ಕುರುಹುಗಳಿಂದ ಸ್ಪಷ್ಟವಾಗಿದೆ.

ಯಾರು ಈ ಆಳ್ವಾರರು?
ಆಳ್ವಾರರು (Alvars) ಎಂದರೆ ತಮಿಳುನಾಡಿನ ಪ್ರಸಿದ್ಧ 12 ಜನ ವೈಷ್ಣವ ಸಂತರು ಹಾಗೂ ಭಕ್ತಿ ಪಂಥದ ಪ್ರಚಾರಕರು. ಹಂಪಿಯ ದೇವಸ್ಥಾನಗಳ ಕಂಬಗಳು ಮತ್ತು ಗೋಡೆಗಳ ಉಬ್ಬುಶಿಲ್ಪಗಳಲ್ಲಿ ಆಳ್ವಾರರ ಚಿತ್ರಣಗಳು ಸಾಮಾನ್ಯವಾಗಿ ಕಂಡುಬರುತ್ತಿದ್ದವು. ಆದರೆ ಈಗ ಸ್ವತಂತ್ರ ಮೂರ್ತಿಗಳೇ ಸಿಕ್ಕಿರುವುದು ವಿಜಯನಗರದ ಅರಸರ ಮೇಲೆ ಶ್ರೀವೈಷ್ಣವ ಧರ್ಮದ ಪ್ರಭಾವ ಎಷ್ಟಿತ್ತು ಎಂಬುದನ್ನು ಸಾಬೀತುಪಡಿಸಿದೆ. ಕೃಷ್ಣದೇವರಾಯ ಮತ್ತು ಅಚ್ಯುತರಾಯರ ಆಳ್ವಿಕೆಯಲ್ಲಿ ತಮಿಳುನಾಡಿನ ಶ್ರೀವೈಷ್ಣವ ಧರ್ಮಕ್ಕೆ ಭಾರಿ ರಾಜಾಶ್ರಯವಿತ್ತು.
ಅತ್ಯಂತ ಜಾಗರೂಕ ಹಾಗೂ ವೈಜ್ಞಾನಿಕ ಉತ್ಖನನ
ಭಾರತೀಯ ಪುರಾತತ್ವ ಇಲಾಖೆಯ (ASI) ಹಂಪಿ ವೃತ್ತದ ಪುರಾತತ್ವ ಅಧೀಕ್ಷಕರಾದ ಕೆ. ರಾಮಕೃಷ್ಣ ರೆಡ್ಡಿ ಅವರ ನೇತೃತ್ವದ ತಂಡವು ಅತ್ಯಂತ ಜಾಗೃತ, ಸೂಕ್ಷ್ಮ ಹಾಗೂ ಆಧುನಿಕ ವೈಜ್ಞಾನಿಕ ವಿಧಾನಗಳ ಮೂಲಕ ಈ ಜಾಗದಲ್ಲಿ ಉತ್ಖನನ ನಡೆಸುತ್ತಿದೆ. ವಿಗ್ರಹಗಳ ಅವಶೇಷಗಳಿಗೆ ಯಾವುದೇ ಹಾನಿಯಾಗದಂತೆ ಮಣ್ಣನ್ನು ಸರಿಸಿ ಇವುಗಳನ್ನು ಹೊರತೆಗೆದು, ಸುರಕ್ಷಿತವಾಗಿ ಸಂರಕ್ಷಿಸಲಾಗುತ್ತಿದೆ.

ಇನ್ನಷ್ಟು ಮೂರ್ತಿಗಳು ಸಿಗುವ ಸಾಧ್ಯತೆ:
ಸಾಮಾನ್ಯವಾಗಿ ಪ್ರಮುಖ ವಿಷ್ಣು ದೇವಾಲಯಗಳಲ್ಲಿ 12 ರಿಂದ 13 ಆಳ್ವಾರ್ ಪ್ರತಿಮೆಗಳನ್ನು ಸ್ಥಾಪಿಸುವ ಸಂಪ್ರದಾಯವಿತ್ತು. ಸದ್ಯಕ್ಕೆ ಈ ಭಗ್ನ ಮೂರ್ತಿಗಳು ಪತ್ತೆಯಾಗಿದ್ದು, ಹಜಾರ ರಾಮ ದೇವಸ್ಥಾನದ ಸುತ್ತಮುತ್ತಲಿನ ಭೂಮಿಯ ಆಳದಲ್ಲಿ ಇಂತಹ ಇನ್ನೂ ಅನೇಕ ಆಳ್ವಾರ್ ಮೂರ್ತಿಗಳು ಹಾಗೂ ವಿಜಯನಗರ ಕಾಲದ ರಹಸ್ಯಗಳು ಹೂತುಹೋಗಿರುವ ಬಲವಾದ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

