ಮಡಿಕೇರಿ: ಮದೆನಾಡು ಬಳಿ ಕೊಡಗು ಗೌಡ ಸಮಾಜದ ಅಭಿವೃದ್ಧಿಗೆ ಸರ್ಕಾರದಿಂದ 6 ಎಕರೆ ಭೂಮಿ ಕಾಯ್ದಿರಿಸಿದೆ. ಹಾಗೆಯೇ ಭಾಗಮಂಡಲ ಗೌಡ ಸಮಾಜ ನೂತನ ಕಟ್ಟಡ ನಿರ್ಮಾಣಕ್ಕೆ ಒಂದು ಕೋಟಿ ರೂ. ನಿಗದಿ ಮಾಡಿದೆ ಎಂದು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಯವರ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ ಅವರು ತಿಳಿಸಿದ್ದಾರೆ.
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ವಿರಾಜಪೇಟೆಯ ಕೆದಮುಳ್ಳೂರು ಗ್ರಾಮದ ಅರೆಭಾಷೆ, ಸಂಸ್ಕೃತಿ ಮತ್ತು ಅಭಿವೃದ್ಧಿ ಸಂಘ ಇವರ ಸಹಕಾರದಲ್ಲಿ ತೋರ ಸಮುದಾಯ ಭವನದ ಆವರಣದಲ್ಲಿ ನಡೆದ ಅರೆಭಾಷೆ ಗಡಿನಾಡ ಉತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಈ ವೇಳೆ, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಬೆಂಗಳೂರಿನಲ್ಲಿ ನವೆಂಬರ್ ತಿಂಗಳಲ್ಲಿ ನಡೆದ ಗೌರವ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭರವಸೆ ನೀಡಿದಂತೆ 6 ಎಕರೆ ಭೂಮಿ ನೀಡಿದ್ದಾರೆ. ಹಾಗೆಯೇ ಭಾಗಮಂಡಲ ಗೌಡ ಸಮಾಜ ನೂತನ ಕಟ್ಟಡ ನಿರ್ಮಾಣಕ್ಕೆ ಒಂದು ಕೋಟಿ ರೂ. ಪ್ರಕಟಿಸಿದ್ದರು. ಅದರಂತೆ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಅವರು ನುಡಿದಂತೆ ನಡೆದಿದ್ದು, ಸರ್ಕಾರ ಎಲ್ಲಾ ಸಮಾಜಗಳ ಶ್ರೇಯೋಭಿವೃದ್ಧಿಗೆ ಬದ್ಧವಾಗಿದೆ ಎಂದರು.

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಅರೆಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ತೋರದಂತಹ ಗಡಿ ಗ್ರಾಮದಲ್ಲಿಯೂ ಸಹ ಗಡಿನಾಡ ಉತ್ಸವ ಕಾರ್ಯಕ್ರಮ ಹಮ್ಮಿಕೊಂಡಿರುವುದು ವಿಶೇಷವೇ ಸರಿ. ಇದರಿಂದ ಅರೆಭಾಷೆ, ಸಂಸ್ಕೃತಿ, ಸಾಹಿತ್ಯ, ಕಲೆಗಳನ್ನು ಉಳಿಸಿ, ಬೆಳೆಸಲು ಸಹಕಾರಿಯಾಗಿದೆ. ಹಾಗೆಯೇ ಅಕಾಡೆಮಿ ಕಾರ್ಯಕ್ರಮಗಳು ಕುಗ್ರಾಮಗಳಿಗೂ ಸಹ ತಲುಪುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರು ಮೆಚ್ಚುಗೆ ವ್ಯಕ್ತಪಡಿಸಿದರು.
ಗಡಿನಾಡ ಉತ್ಸವಗಳು, ಗ್ರಾಮೋತ್ಸವ ಕಾರ್ಯಕ್ರಮಗಳು ಹಳ್ಳಿಗಳಿಗೂ ತಲುಪಿದಾಗ ಅರೆಭಾಷೆ, ಸಂಸ್ಕೃತಿ, ಸಾಹಿತ್ಯ, ಪರಂಪರೆ ಮತ್ತಷ್ಟು ಗಟ್ಟಿಗೊಳಿಸಲು ಅನುಕೂಲವಾಗಿದೆ. ಆ ನಿಟ್ಟಿನಲ್ಲಿ ಎಲ್ಲರೂ ಒಂದೆಡೆ ಸೇರಲು ಕಾರ್ಯಕ್ರಮ ಅನುಕೂಲವಾಗಿದೆ ಎಂದು ಎ.ಎಸ್.ಪೊನ್ನಣ್ಣ ನುಡಿದರು. ಕೊಡಗು ಜಿಲ್ಲೆಯಲ್ಲಿ ಸಣ್ಣ ಸಣ್ಣ ಸಮಾಜಗಳು ವಾಸಿಸುತ್ತಿದ್ದು, ತಮ್ಮದೇ ಆದ ಭಾಷೆ, ಸಂಸ್ಕೃತಿ, ಕಲೆ, ಸಂಪ್ರದಾಯಗಳನ್ನು ಒಳಗೊಂಡಿದ್ದು, ಇವುಗಳನ್ನು ಉಳಿಸಿ ಬೆಳೆಸಬೇಕು. ಆ ನಿಟ್ಟಿನಲ್ಲಿ ಅಕಾಡೆಮಿಗಳು ಕೆಲಸ ನಿರ್ವಹಿಸುತ್ತಿದೆ ಎಂದು ಹೇಳಿದರು.
ಅರೆಭಾಷೆ ಸಂಸ್ಕೃತಿ, ಸಾಹಿತ್ಯವನ್ನು ಜನ ಸಮುದಾಯದ ಅಂತರಾಳಕ್ಕೆ ತಲುಪಿಸಬೇಕು. ಇಲ್ಲಿನ ಆಹಾರ ಪದ್ಧತಿ, ಉಡುಗೆ, ತೊಡುಗೆ, ಮದುವೆ ಪದ್ಧತಿಗಳು ವಿಭಿನ್ನ ಹಾಗೂ ವೈಶಿಷ್ಟ್ಯತೆ ಹೊಂದಿದೆ. ಆ ನಿಟ್ಟಿನಲ್ಲಿ ಎಲ್ಲರೂ ಸಹ ಸಹೋದರತೆ, ಸಹಬಾಳ್ವೆ, ಸಾಮರಸ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವತ್ತ ಮುನ್ನಡೆಯಬೇಕು ಎಂದು ಎ.ಎಸ್.ಪೊನ್ನಣ್ಣ ಅವರು ನುಡಿದರು.
ಯಾವುದೇ ಒಂದು ಭಾಷೆಗೆ ಗಡಿ ಇಲ್ಲ. ಭಾಷೆಯನ್ನು ಮತ್ತಷ್ಟು ವಿಸ್ತರಿಸಿ ಬೆಳೆಸುವಲ್ಲಿ ಶ್ರಮಿಸಬೇಕು. ಆ ನಿಟ್ಟಿನಲ್ಲಿ ಕುಟುಂಬದಿಂದಲೇ ಭಾಷೆ ಬೆಳವಣಿಗೆಗೆ ಪ್ರಯತ್ನಗಳು ನಡೆಯಬೇಕು. ಭಾಷೆ ಉಳಿದರೆ ಜನಾಂಗ ಉಳಿಯುತ್ತದೆ ಎಂಬುದನ್ನು ಮರೆಯಬಾರದು ಎಂದರು. ಅನಾದಿಕಾಲದಿಂದಲೂ ಪೂರ್ವಜರು ಉಳಿಸಿಕೊಂಡಿರುವ ಅರೆಭಾಷೆಯನ್ನು ಉಳಿಸಬೇಕು. ಇತರೆ ಭಾಷೆಯನ್ನು ಗೌರವಿಸಬೇಕು ಮತ್ತು ಪ್ರೀತಿಸಬೇಕು. ಎಲ್ಲರಲ್ಲೂ ಸಹ ಸಹೋದರತೆ ಇರಬೇಕು ಎಂದರು.

