Thursday, 23rd January 2020

ವಿದೇಶಿ ಹೂಡಿಕೆದಾರರ ಮೇಲಿನ ಹೆಚ್ಚುವರಿ ಶುಲ್ಕ ರದ್ದು- ಆರ್ಥಿಕತೆ ಸುಧಾರಿಸಲು ಸರ್ಕಾರದ ಟಾನಿಕ್

– ಏಂಜಲ್ ಟ್ಯಾಕ್ಸ್ ರದ್ದು
– ವಿಜಯ ದಶಮಿಯಿಂದ ಮತ್ತಷ್ಟು ಸುಧಾರಣಾ ಕ್ರಮ

ನವದೆಹಲಿ: ವಿಶ್ವದ ಇತರೆ ದೇಶಗಳಿಗೆ ಹೋಲಿಸಿದರೆ ಭಾರತದ ಒಟ್ಟು ರಾಷ್ಟ್ರೀಯ ಉತ್ಪನ್ನ (ಜಿಡಿಪಿ) ದರ ಉತ್ತಮವಾಗಿದೆ. ಜಾಗತಿಕ ಆರ್ಥಿಕ ಹಿಂಜರಿತದ ನಡುವೆಯೂ ಭಾರತದ ಆರ್ಥಿಕ ಪ್ರಗತಿ ಗಣನೀಯವಾಗಿ ಏರಿಕೆಯಲ್ಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಭಾರತದ ಆರ್ಥಿಕತೆ ಕುಸಿಯುತ್ತಿದ್ದು ಸರ್ಕಾರ ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎನ್ನುವ ಟೀಕೆ ಬರುತ್ತಿರುವ ಹಿನ್ನೆಲೆಯಲ್ಲಿ ಇಂದು ಸಂಜೆ ಸುದ್ದಿಗೋಷ್ಠಿ ನಡೆಸಿ ಸರ್ಕಾರ ಕೈಗೊಂಡ ಕ್ರಮಗಳನ್ನು ತಿಳಿಸಿದರು.

ಬಜೆಟ್ ನಲ್ಲಿ ವಿದೇಶಿ ಹೂಡಿಕೆದಾರರ ಮೇಲೆ ಹೆಚ್ಚುವರಿ ಶುಲ್ಕ ವಿಧಿಸಲಾಗಿತ್ತು. ಸರ್ಕಾರದ ಈ ನಿರ್ಧಾರ ಪ್ರಕಟವಾಗುತ್ತಿದ್ದಂತೆ ಷೇರು ಮಾರುಕಟ್ಟೆಯಲ್ಲಿ ವಿದೇಶಿ ಹೂಡಿಕೆದಾರರು ಹಣವನ್ನು ಹಿಂತೆಗೆದುಕೊಳ್ಳುತ್ತಿದ್ದ ಪರಿಣಾಮ ಹೂಡಿಕೆದಾರರು ನಷ್ಟ ಅನುಭವಿಸಿದ್ದರು. ಈಗ  ಈ ಶುಲ್ಕವನ್ನು ರದ್ದು ಪಡಿಸಿದೆ.

ಈ ಬಾರಿಯ ವಿಜಯದಶಮಿಯ ದಿನದಿಂದ ಹಲವಾರು ಸುಧಾರಣೆ ಕ್ರಮಗಳನ್ನು ಜಾರಿಗೆ ತರಲಾಗುವುದು. ಉದ್ಯಮಿಗಳಿಗೆ, ತೆರಿಗೆದಾರರಿಗೆ ಯಾವುದೇ ರೀತಿಯ ದೌರ್ಜನ್ಯ ನಡೆಯದಂತೆ ನೋಡಿಕೊಳ್ಳಲಾಗುವುದು. ಬ್ಯಾಂಕ್‍ಗಳಿಗೆ 70 ಸಾವಿರ ಕೋಟಿ ರೂ. ಪ್ಯಾಕೇಜ್ ಘೋಷಿಸಲಾಗುವುದು. ಇದರಿಂದಾಗಿ ಬ್ಯಾಂಕ್ ಗಳ ಬಡ್ಡಿದರ ಕಡಿಮೆಯಾಗಲಿದೆ ಎಂದು ಸಚಿವರು ತಿಳಿಸಿದರು.

ಆಟೋಮೊಬೈಲ್ ಕ್ಷೇತ್ರಕ್ಕೆ ಉತ್ತೇಜನ ನೀಡಲು ಸಂಬಂಧ 2020 ಮಾರ್ಚ್ 31ರ ಒಳಗಡೆ ಖರೀದಿಸಿದ ಬಿಎಸ್ 4(ಭಾರತ್ ಸ್ಟೇಜ್ 4)ವಾಹನಗಳು ನೊಂದಣಿ ದಿನಾಂಕದಿಂದ ಆ ವಾಹನದ ಅವಧಿ ಪೂರ್ಣ ಆಗುವರೆಗೂ ಓಡಿಸಬಹುದು. ಹೊಸ ವಾಹನ ಖರೀದಿಗೆ ಸರ್ಕಾರದ ಇಲಾಖೆಗಳಿಗೆ ನಿರ್ಬಂಧ ಹೇರಲಾಗಿತ್ತು. ಈಗ ಹಳೆಯ ವಾಹನದ ಬದಲಿಗೆ ಹೊಸ ವಾಹನ ಖರೀದಿಸಬಹುದು ಎಂದು ಮಾಹಿತಿ ನೀಡಿದರು.

ಕೈಗಾರಿಕೆಗಳು ಮತ್ತು ಉದ್ಯಮಗಳು ತಮ್ಮ ಸಿಎಸ್‍ಆರ್(ಸಾಮಾಜಿಕ ಜವಬ್ದಾರಿ ನಿಧಿ) ಅನುದಾನವನ್ನು ಬಳಕೆ ಮಾಡದೇ ಇದ್ದರೆ ಅವರನ್ನು ಕ್ರಿಮಿನಲ್‍ಗಳು ಎಂದು ಪರಿಗಣಿಸುವುದಿಲ್ಲ ಇದರ ಜೊತೆಗೆ ನೊಂದಣಿಯಾಗಿದ್ದ ಸ್ಟಾರ್ಟಪ್‍ಗಳಿಗೆ ವಿಧಿಸಿದ್ದ ಏಂಜಲ್ ತೆರಿಗೆಯನ್ನು ರದ್ದು ಮಾಡಿದ್ದೇವೆ. 30 ದಿನಗಳ ಒಳಗಡೆ ಜಿಎಸ್‍ಟಿ ರಿಫಂಡ್ ಪೂರ್ಣವಾಗುವಂತೆ ಕ್ರಮ ಕೈಗೊಳ್ಳಲಾಗಿದ್ದೇವೆ ಎಂದು ತಿಳಿಸಿದರು.

ಜಾಗತಿಕ ಆರ್ಥಿಕತೆ ಕುಸಿಯುತ್ತಿರುವ ವಿಚಾರ ಎಲ್ಲರಿಗೆ ತಿಳಿದಿದೆ. ಅಮೆರಿಕ ಮತ್ತು ಚೀನಾ ನಡುವಿನ ವ್ಯಾಪಾರ ಸಮರದಿಂದಾಗಿ ಜಾಗತಿಕ ಮಟ್ಟದಲ್ಲಿ ಆರ್ಥಿಕತೆ ಸಮಸ್ಯೆಯಾಗಿದೆ. ಇದರಿಂದಾಗಿ ಭಾರತಕ್ಕೂ ಸಮಸ್ಯೆಯಾಗಿದ್ದು, ಆರ್ಥಿಕ ಪ್ರಗತಿ ಮೇಲೆ ಪರಿಣಾಮ ಬೀರಿದೆ. ಆದರೆ ಭಾರತ ಜಿಡಿಪಿಯಲ್ಲಿ ಅಮೆರಿಕ ಮತ್ತು ಚೀನಾಕ್ಕಿಂತ ಮುಂದಿದೆ. ಆರ್ಥಿಕತೆಯಲ್ಲಿ ಏರಿಳಿತ ನಡೆಯುತ್ತಲೇ ಇರುತ್ತದೆ. ಕುಸಿಯುತ್ತಿದೆ ಎನ್ನುವ ಕಾರಣಕ್ಕೆ ನಾವು ಸಮಸ್ಯೆಯಲ್ಲಿ ಸಿಲುಕಿದ್ದೇವೆ ಎಂದು ವದಂತಿ ಹಬ್ಬಿಸುವ ಅಗತ್ಯವಿಲ್ಲ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.

Leave a Reply

Your email address will not be published. Required fields are marked *