ಬೆಂಗಳೂರು: ನಾನು ಸಿಎಂ ಬಸವರಾಜ್ ಬೊಮ್ಮಾಯಿ ಹಾಗೂ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಮಾತಿಗೆ ಬೆಲೆಕೊಟ್ಟು ಅಧಿಕಾರ ಸ್ವೀಕಾರ ಮಾಡುತ್ತೇನೆ ಎಂದು ಸಚಿವ ಆನಂದ್ ಸಿಂಗ್ ಹೇಳಿದ್ದಾರೆ. ಈ ಮೂಲಕ ಇದೀಗ ಮತ್ತೆ ಸಚಿವರು ತಮ್ಮ ರಾಜೀನಾಮೆಯಿಂದ ಹಿಂದೆ ಸರಿದಿದ್ದಾರೆ.
Advertisement
ಈ ಕುರಿತಂತೆ ವಿಕಾಸ ಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಕ್ಷದ ಕಚೇರಿಗೆ ಹೋಗಿ ಬೊಮ್ಮಾಯಿಯವರನ್ನು ಭೇಟಿ ಮಾಡಿ ಮನವಿ ಮಾಡಿದ್ದೇನೆ. ಅವರು ನೀವು ಮೊದಲು ಖಾತೆ ಕೆಲಸ ಪ್ರಾರಂಭ ಮಾಡಿ ಎಂದು ಹೇಳಿದ್ದಾರೆ. ಮೊದಲು ಖಾತೆ ಅಧಿಕಾರ ಪಡೆಯಿರಿ ನಂತರ ನಾನು ನಿಮ್ಮ ಮನವಿಯನ್ನು ಪರಿಗಣಿಸಿ ಸೂಕ್ತವಾದ ಕ್ರಮ ಕೈಗೊಂಡು, ಹೈಕಮಾಂಡ್ ಜೊತೆ ಮಾತನಾಡುತ್ತೇನೆ ಅಂತ ತಿಳಿಸಿದ್ದಾರೆ. ಹೀಗಾಗಿ ನಾನು ಸಿಎಂ ಹಾಗೂ ರಾಜ್ಯಾಧ್ಯಕ್ಷರ ಮಾತಿಗೆ ಬೆಲೆ ಕೊಟ್ಟು ಅಧಿಕಾರ ಸ್ವೀಕಾರ ಮಾಡುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ರಾಜೀನಾಮೆ ಸಂದೇಶ ರವಾನಿಸಿದ ಸಚಿವ ಆನಂದ್ ಸಿಂಗ್?
Advertisement
Advertisement
ಬೊಮ್ಮಾಯಿ ಕ್ಯಾಬಿನೆಟ್ ನಲ್ಲಿ ಆನಂದ್ ಸಿಂಗ್ ಅವರಿಗೆ ಪ್ರವಾಸೋದ್ಯಮ, ಜೀವಶಾಸ್ತ್ರ ಹಾಗೂ ಪರಿಸರ ಖಾತೆಯನ್ನು ನೀಡಲಾಗಿದೆ. ಆದರೆ ಈ ಖಾತೆಯಿಂದ ಆನಂದ್ ಅಸಮಾಧಾನಗೊಂಡಿದ್ದು, ಈ ಹಿಂದೆಯೂ ರಾಜೀನಾಮೆಯ ಎಚ್ಚರಿಕೆ ನೀಡಿದ್ದರು. ಅಲ್ಲದೇ ಖಾತೆ ವಿಚಾರಕ್ಕೆ ಮುನಿಸಿಕೊಂಡಿದ್ದ ಆನಂದ್ ಸಿಂಗ್ ಇಂದು ಅಥವಾ ನಾಳೆ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧಾರ ಮಾಡಿರುವುದಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಸಂದೇಶ ನೀಡಿದ್ದರು. ಆದರೆ ಇದೀಗ ರಾಜೀನಾಮೆಯಿಂದ ಆನಂದ್ ಸಿಂಗ್ ಹಿಂದೆ ಸರಿದಿದ್ದು, ನೀಡಿರುವ ಖಾತೆಯನ್ನೇ ಸದ್ಯ ಮುಂದುವರಿಸುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ:ಪಿಕ್ಚರ್ ಅಭೀ ಬಾಕಿ ಹೈ ಎಂದ ಆನಂದ್ ಸಿಂಗ್‍ಗೆ ಥಿಯೇಟರ್ ಬಂದ್ ಹೈ ಎಂದ ರಾಜೂ ಗೌಡ
Advertisement
ಈ ಹಿಂದೆ ರಾಜೀನಾಮೆ ನೀಡುವುದಾಗಿ ಹೇಳಿದ್ದ ಸಂದರ್ಭದಲ್ಲಿಯೂ ಸಿಎಂ ಅವರು ಸಚಿವರ ಮನವೊಲಿಕೆ ಮಾಡಿದ್ದರು. ಆ ಬಳಿಕ ಮುಖ್ಯಮಂತ್ರಿಯವರು ಆನಂದ್ ಸಿಂಗ್ ಅವರಿಗೆ ಮನವೊಲಿಕೆ ಮಾಡಿದ್ದರು. ಹೀಗಾಗಿ ಪ್ರಬಲ ಖಾತೆಗೆ ಬಿಗಿಪಟ್ಟು ಹಿಡಿದಿದ್ದ ಆನಂದ್ ಸಿಂಗ್ ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿದಿದ್ದರು. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ್ದ ಆನಂದ್ ಸಿಂಗ್, ರಾಜೀನಾಮೆ ನೀಡುತ್ತೇನೆ ಎಂದು ನಾನು ಎಲ್ಲಿಯೂ ಹೇಳಿಲ್ಲ. ಖಾತೆ ಬದಲಾವಣೆ ಆಗಬೇಕೆಂದು ಹೇಳಿದ್ದು ನಿಜ. ಸಿಎಂ ನನ್ನ ಮಾತುಗಳನ್ನ ಕೇಳಿದ್ದು, ಭರವಸೆ ನೀಡಿದ್ದಾರೆ ಎಂದು ಹೇಳಿದ್ದರು. ಇತ್ತ ಸಿಎಂ ಮಾತನಾಡಿ, ಖಾತೆಯ ಬದಲಾವಣೆಯ ತೀರ್ಮಾನವನ್ನು ಪಕ್ಷದ ಹೈಕಮಾಂಡ್ ತೆಗೆದುಕೊಳ್ಳುತ್ತದೆ. ಆನಂದ್ ಸಿಂಗ್ ಭಾವನೆಗಳಿಗೆ ನಾವು ಸ್ಪಂದಿಸಿದ್ದು, ಅವರ ಮನವಿಯನ್ನು ತಲುಪಿಸಬೇಕಾದವರಿಗೆ ತಲುಪಿಸುತ್ತೇನೆ ಎಂದು ಹೇಳಿದ್ದರು.