Connect with us

Latest

ಅಮಿತ್ ಶಾ ರೋಡ್ ಶೋ ವೇಳೆ ಹಿಂಸಾಚಾರ – ಬಿಜೆಪಿ, ಟಿಎಂಸಿ ಘರ್ಷಣೆ

Published

on

ಕೋಲ್ಕತ್ತಾ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ  ಅವರ ಕೋಲ್ಕತ್ತಾ  ರೋಡ್ ಶೋ ವೇಳೆ ಭಾರೀ ಹಿಂಸಾಚಾರ, ಗಲಾಟೆ ನಡೆದಿದ್ದು, ಈಗ ಬಿಜೆಪಿ, ಟಿಎಂಸಿ ನಡುವಿನ ವಾಕ್ಸಮರಕ್ಕೆ ಕಾರಣವಾಗಿದೆ.

ಬಿಜೆಪಿಯ ಮೆರವಣಿಗೆ ನಡೆಯುತ್ತಿದ್ದ ವೇಳೆ ಕಾರ್ಯಕರ್ತರು ಮೋದಿ, ಜೈಶ್ರೀರಾಮ್ ಘೋಷಣೆ ಕೂಗುತ್ತಿದ್ದರು. ಈ ಸಂದರ್ಭದಲ್ಲಿ ವಿದ್ಯಾಸಾಗರ್ ಕಾಲೇಜಿನ ಒಳಗಡೆ ಇದ್ದ ಟಿಎಂಸಿ ಕಾರ್ಯಕರ್ತರಿದ್ದ ಗುಂಪೊಂದು ಬಿಜೆಪಿ ಕಾರ್ಯಕರ್ತರತ್ತ ಕಲ್ಲು ತೂರಿದೆ.

ಪ್ರತಿಯಾಗಿ ಕೇಸರಿ ಟೀಶರ್ಟ್ ಧರಿಸಿದ್ದ ಬಿಜೆಪಿ ಕಾರ್ಯಕರ್ತರು ಕಲ್ಲಲ್ಲೇ ಪ್ರತಿದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಎರಡು ಗುಂಪುಗಳ ಮಧ್ಯೆ ಗಲಾಟೆ ನಡೆದಿದೆ. ಮಾರಾಮಾರಿ ನಡೆದಿದ್ದು ವಾಹನಗಳೂ ಬೆಂಕಿಗಾಹುತಿಯಾಗಿದೆ. ಕಾಲೇಜಿನಲ್ಲಿದ್ದ ವಿದ್ಯಾಸಾಗರ್ ಪ್ರತಿಮೆಯನ್ನು ಧ್ವಂಸಗೊಳಿಸಲಾಗಿದೆ.

ಪೊಲೀಸರು ಮಧ್ಯಪ್ರವೇಶಿಸಿ ಲಾಠಿ ಬೀಸಿದ್ದಾರೆ. ಟಿಎಂಸಿ ಕಾರ್ಯಕರ್ತರ ಕೃತ್ಯ ಖಂಡಿಸಿ ಇಂದು ದೆಹಲಿಯಲ್ಲಿ ಬಿಜೆಪಿ ಪ್ರತಿಭಟನೆ ನಡೆಸಲಿದೆ.

ಈ ಹಿಂಸಾಚಾರಕ್ಕೆ ಪ್ರತಿಕ್ರಿಯಿಸಿದ ಅಮಿತ್ ಶಾ, ಮಮತಾ ಬ್ಯಾನರ್ಜಿ ಅವರ ಕಾಯಕರ್ತರು ನನ್ನ ಮೇಲೆ ದಾಳಿ ನಡೆಸಲು ಮುಂದಾಗಿದ್ದರು. ರೋಡ್ ಶೋ ನಡೆಸಿ ಹಿಂಸಾಚಾರ ಮಾಡಲು ಟಿಎಂಸಿ ಪ್ಲಾನ್ ಮಾಡಿಕೊಂಡಿತ್ತು. ಪೊಲೀಸರು ಮೌನ ಪ್ರೇಕ್ಷಕರಾಗಿದ್ದರು ಎಂದು ದೂರಿದರು.

ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಮಿತ್ ಶಾ ಅವರನ್ನು ಗೂಂಡಾ ಎಂದು ಕರೆದಿದ್ದು, ಬಿಜೆಪಿ ಕಾರ್ಯಕರ್ತರು ಹಿಂಸಾಚಾರ ಮಾಡಿದ್ದು, ಅವರೇ ವಿದ್ಯಾಸಾಗರ್ ಪ್ರತಿಮೆಯನ್ನು ಧ್ವಂಸಗೊಳಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ವಿದ್ಯಾಸಾಗರ್ ಪ್ರತಿಮೆ ಕಾಲೇಜಿನ ಕ್ಯಾಂಪಸ್ ಒಳಗಡೆ ಇದೆ. ಕ್ಯಾಂಪಸ್ ಒಳಗಡೆ ರೋಡ್ ಶೋ ನಡೆಸಲು ಅನುಮತಿ ಇಲ್ಲ. ಅಷ್ಟೇ ಅಲ್ಲದೇ ಬಿಜೆಪಿ ಕಾರ್ಯಕರ್ತರು ಕ್ಯಾಂಪಸ್ ಒಳಗಡೆ ಹೋಗಿಲ್ಲ. ಕ್ಯಾಂಪಸ್ ಒಳಗಡೆ ಇದ್ದ ಟಿಎಂಸಿ ಕಾರ್ಯಕರ್ತರೇ ಪ್ರತಿಮೆಯನ್ನು ಧ್ವಂಸಗೊಳಿಸಿದ್ದಾರೆ ಎಂದು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಆರೋಪಿಸಿದ್ದಾರೆ.