ನವದೆಹಲಿ: ಕೇಂದ್ರದಲ್ಲಿ ಕಾಂಗ್ರೆಸ್ (Congress) ಅಧಿಕಾರದಲ್ಲಿದ್ದಾಗ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ನಕಲಿ ಎನ್‍ಕೌಂಟರ್ ಪ್ರಕರಣದಲ್ಲಿ ಸಿಲುಕಿಸುವಂತೆ ಕೇಂದ್ರೀಯ ತನಿಖಾ ದಳ (CBI) ತಮ್ಮ ಮೇಲೆ ಒತ್ತಡ ಹೇರಿತ್ತು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಗಂಭೀರ ಆರೋಪ ಮಾಡಿದ್ದಾರೆ.
ನರೇಂದ್ರ ಮೋದಿ ಸರ್ಕಾರ ಕೇಂದ್ರೀಯ ಸಂಸ್ಥೆಗಳನ್ನು ದುರಪಯೋಗಪಡಿಸಿಕೊಳ್ಳುತ್ತಿದೆ ಎಂಬ ಪ್ರತಿಪಕ್ಷಗಳ ಆರೋಪದ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಆಪಾದಿತ ನಕಲಿ ಎನ್‍ಕೌಂಟರ್ ಪ್ರಕರಣದಲ್ಲಿ ಮೋದಿ ಅವರನ್ನು ಸಿಲುಕಿಸುವಂತೆ ಸಿಬಿಐ ನನ್ನ ಮೇಲೆ ಒತ್ತಡ ಹೇರಿತ್ತು. ಆದರೂ ಬಿಜೆಪಿ (BJP) ಎಂದಿಗೂ ಗದ್ದಲ ಎಬ್ಬಿಸಲಿಲ್ಲ. ಮೋದಿ ಹೆಸರನ್ನು ಹೇಳುವಂತೆ ನನ್ನ ವಿರುದ್ಧ ಸಿಬಿಐ ಒತ್ತಡ ಹೇರಿತ್ತು. ಮೋದಿ ಹೆಸರನ್ನು ಹೇಳಿದರೆ ನನ್ನ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಲಾಗಿತ್ತು. ಆದರೆ ನಾನು ಮೋದಿ ಹೆಸರನ್ನು ಹೇಳದ ಕಾರಣ ಜೈಲಿಗೆ ಹೋಗಬೇಕಾಯಿತು ಎಂದು ತಿಳಿಸಿದರು.
Advertisement
Advertisement
ಸೂರತ್‍ನ ನ್ಯಾಯಾಲಯವು ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ರಾಹುಲ್ ಗಾಂಧಿಯವರಿಗೆ ಶಿಕ್ಷೆ ವಿಧಿಸಿದೆ. ಆದರೆ ರಾಹುಲ್ ಗಾಂಧಿ (Rahul Gandhi) ಅವರು ನ್ಯಾಯಾಲಯದಿಂದ ಶಿಕ್ಷೆಗೊಳಗಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಶಾಸಕಾಂಗದ ಸದಸ್ಯತ್ವವನ್ನು ಕಳೆದುಕೊಂಡಿದ್ದಾರೆ. ಆದರೆ ರಾಹುಲ್ ಗಾಂಧಿ ಒಬ್ಬರೇ ಶಾಸಕಾಂಗದ ಸದಸ್ಯತ್ವವನ್ನು ಕಳೆದುಕೊಂಡ ಏಕೈಕ ರಾಜಕಾರಣಿ ಕಾಂಗ್ರೆಸ್ ನಾಯಕರಲ್ಲ. ರಾಹುಲ್ ಗಾಂಧಿ ಅವರು ಉನ್ನತ ನ್ಯಾಯಾಲಯದ ಮೊರೆ ಹೋಗುವ ಬದಲು ತಮ್ಮ ಅಳಲನ್ನು ತೋಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ತಮ್ಮ ಭವಿಷ್ಯಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ದೂಷಿಸಿದ್ದಾರೆ. ಅಷ್ಟೇ ಅಲ್ಲದೇ ಕಾಂಗ್ರೆಸ್ ಜನರಲ್ಲಿ ತಪ್ಪು ಕಲ್ಪನೆಯನ್ನು ಹರಡುತ್ತಿದೆ ಎಂದು ಕಿಡಿಕಾರಿದರು.
Advertisement
ರಾಹುಲ್ ಗಾಂಧಿ ಎಲ್ಲಿಯೂ ತಮ್ಮ ಶಿಕ್ಷೆಗೆ ತಡೆ ನೀಡುವಂತೆ ಮನವಿ ಮಾಡಿಲ್ಲ. ಇದು ಅವರ ದುರಹಂಕಾರವಾಗಿದೆ. ಅವರು ಸಂಸದರಾಗಿ ಮುಂದುವರಿಯಲು ಬಯಸುತ್ತಿದ್ದಾರೆ. ಆದರೆ ನ್ಯಾಯಾಲಯದ ಮುಂದೆ ಹೋಗುತ್ತಿಲ್ಲ. ಇಂತಹ ದುರಂಹಕಾರ ಎಲ್ಲಿಂದ ಹುಟ್ಟುತ್ತದೆ ಎಂದು ಪ್ರಶ್ನಿಸಿದರು.
Advertisement
ರಾಹುಲ್ ಗಾಂಧಿ ಅವರು ಕೋಲಾರದಲ್ಲಿ ನೀಡಿದ್ದ ಸಂಪೂರ್ಣ ಭಾಷಣವನ್ನು ಆಲಿಸಿ, ಆ ವೇಳೆ ಅವರು ಮೋದಿ ಕುರಿತು ನಿಂದನೀಯ ಮಾತುಗಳನ್ನು ಆಡಿರಲಿಲ್ಲ. ಬದಲಿಗೆ ಇಡೀ ಮೋದಿ ಸಮುದಾಯ ಹಾಗೂ ಒಬಿಸಿ ಸಮಾಜದ ಬಗ್ಗೆ ನಿಂದನೀಯ ಮಾತುಗಳನ್ನು ಆಡಿದ್ದರು. ಈ ಹಿನ್ನೆಲೆಯಲ್ಲಿ ಕೋರ್ಟ್ ಶಿಕ್ಷೆ ವಿಧಿಸಿದೆ. ದೇಶದ ಕಾನೂನು ಸ್ಪಷ್ಟವಾಗಿದೆ. ಇಲ್ಲಿ ಸೇಡಿನ ರಾಜಕಾರಣದ ಪ್ರಶ್ನೆಯೇ ಇಲ್ಲ. ಇದು ಅವರ ಸರ್ಕಾರದ ಅವಧಿಯಲ್ಲಿ ಬಂದ ಭಾರತದ ಸುಪ್ರೀಂ ಕೋರ್ಟ್‍ನ ತೀರ್ಪಾಗಿದೆ ಎಂದರು.
ರಾಹುಲ್ ಗಾಂಧಿ ಅವರ ಬಂಗಲೆಯನ್ನು ಖಾಲಿ ಮಾಡುವಂತೆ ನೋಟಿಸ್ ನೀಡಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ಶಿಕ್ಷೆ ಜಾರಿಯಾದ ತಕ್ಷಣ ಕಾರ್ಯನಿರ್ವಹಿಸುವಂತೆ ಸುಪ್ರೀಂ ಕೋರ್ಟ್ ತಿಳಿಸಿರುವ ವಿಶೇಷ ಸೌಲಭ್ಯವನ್ನು ಏಕೆ ನೀಡಬೇಕು. ಜೊತೆಗೆ ರಾಹುಲ್ ಗಾಂಧಿ ಅವರು ನೀಡಿರುವ ಹೇಳಿಕೆಯು ಉದ್ದೇಶ ಪೂರ್ವಕ ಹೇಳಿಕೆಯಾಗಿದೆ. ರಾಹುಲ್ ಗಾಂಧಿ ಕ್ಷಮೆ ಕೇಳಲು ಬಯಸಿದಿದ್ದರೇ, ಅವರು ಜಾಮೀನು ಅರ್ಜಿ ಸಲ್ಲಿಸಬಾರದು ಎಂದರು.
ಈ ರೀತಿ ಸದಸ್ಯತ್ವವನ್ನು ಕಳೆದುಕೊಳ್ಳುತ್ತಿರುವವರಲ್ಲಿ ರಾಹುಲ್ ಗಾಂಧಿ ಅವರು ಮೊದಲನೆಯವರಲ್ಲ. ಉನ್ನತ ಸ್ಥಾನ ಅಲಂಕರಿಸಿದ್ದ ಹಾಗೂ ಹೆಚ್ಚು ಅನುಭವ ಹೊಂದಿರುವ ರಾಜಕಾರಣಿಗಳು ಈ ನಿಬಂಧನೆಯಿಂದಾಗಿ ತಮ್ಮ ಸದಸ್ಯತ್ವವನ್ನು ಕಳೆದುಕೊಂಡಿದ್ದಾರೆ. ಯುಪಿಎ ಸರ್ಕಾರದ ಅವಧಿಯಲ್ಲಿ 2013ರ ಸುಪ್ರೀಂ ಕೋರ್ಟ್ ಆದೇಶದಿಂದಾಗಿ ಲಾಲು ಪ್ರಸಾದ್, ಜೆ ಜಯಲಲಿತಾ ಮತ್ತು ರಶೀದ್ ಅಲ್ವಿ ಸೇರಿದಂತೆ 17 ಪ್ರಮುಖ ನಾಯಕರು ತಮ್ಮ ಸದಸ್ಯತ್ವವನ್ನು ಕಳೆದುಕೊಂಡಿದ್ದಾರೆ. ಚುನಾಯಿತ ಪ್ರತಿನಿಧಿಯು ಶಿಕ್ಷೆಯಾದ ತಕ್ಷಣ ತನ್ನ ಸ್ಥಾನವನ್ನು ಕಳೆದುಕೊಳ್ಳುತ್ತಾನೆ. ಆದರೆ ಯಾರೂ ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ ನಡೆಸಲಿಲ್ಲ. ನನ್ನ ಮೇಲೆ ಆರೋಪ ಬಂದಾಗ ನಾವು ಯಾರು ಪ್ರತಿಭಟನೆ ನಡೆಸಲಿಲ್ಲ. ಇದು ದೇಶದ ಕಾನೂನಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಕಲಾಪದ ವೇಳೆ ತ್ರಿಪುರ ಬಿಜೆಪಿ ಶಾಸಕನಿಂದ ಅಶ್ಲೀಲ ದೃಶ್ಯ ವೀಕ್ಷಣೆ – ವಿಡಿಯೋ ವೈರಲ್
ಲಾಲು ಪ್ರಸಾದ್ ಯಾದವ್ ಅವರನ್ನು ಅನರ್ಹಗೊಳಿಸಿದಾಗ ಭಾರತದ ಪ್ರಜಾಪ್ರಭುತ್ವಕ್ಕೆ ಅಪಾಯವಾಗಿರಲಿಲ್ಲ. ಆದರೆ ಗಾಂಧಿ ಕುಟುಂಬದ ವ್ಯಕ್ತಿಯನ್ನು ಅನರ್ಹಗೊಳಿಸಿದಾಗ ಮಾತ್ರ ಅದು ಅಪಾಯದಲ್ಲಿದೆ ಎಂದು ಕಾಂಗ್ರೆಸ್ ಕಿಡಿಕಾರುತ್ತಿದೆ. ಅಷ್ಟೇ ಅಲ್ಲದೇ ಗಾಂಧೀ ಕುಟುಂಬಕ್ಕೆ ಪ್ರತ್ಯೇಕ ಕಾನೂನು ಮಾಡಿ ಎಂದು ಒತ್ತಾಯಿಸುತ್ತಿದೆ. ಈ ರೀತಿ ಒಂದೇ ಕುಟುಂಬಕ್ಕೆ ಪ್ರತ್ಯೇಕ ಕಾನೂನು ಬೇಕೇ? ಇದು ಯಾವ ರೀತಿಯ ಮನಸ್ಥಿತಿ? ಏನೇ ನಡೆದರೂ ವಿರೋಧ ಪಕ್ಷದವರು ಮೋದಿ ಹಾಗೂ ಲೋಕಸಭಾ ಸ್ಪೀಕರ್‌ರನ್ನು ದ್ವೇಷಿಸುತ್ತಾರೆ. ಆದರೆ ಸುಪ್ರೀಂ ಕೋರ್ಟ್ ಆದೇಶದಲ್ಲಿ ಬದಲಾವಣೆಯನ್ನು ಬಿಜೆಪಿ ಬಯಸುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಚುನಾವಣಾ ಅಕ್ರಮ ತಡೆಗೆ 16 ಚೆಕ್ ಪೋಸ್ಟ್ ಸ್ಥಾಪನೆ- ಐವರು ರೌಡಿಶೀಟರ್‌ಗಳ ಗಡಿಪಾರು