ಬೆಂಗಳೂರು: ಬೆಂಗಳೂರು ವಿಮಾನ ನಿಲ್ದಾಣದಲ್ಲಿ (Bengaluru Airport) ಇಂಡಿಗೋ ವಿಮಾನದಲ್ಲಿ (IndiGo Flight) ಹೊಗೆ ಕಾಣಿಸಿಕೊಂಡಿದ್ದು, ಪ್ರಯಾಣಿಕರಲ್ಲಿ ಆತಂಕ ಮೂಡಿಸಿದೆ. ಹೊಗೆ ಕಾಣಿಸಿಕೊಳ್ಳುತ್ತಿದ್ದಂತೆ ಬೆಚ್ಚಿದ ಪ್ರಯಾಣಿಕರನ್ನು ವಿಮಾನದಿಂದ ತುರ್ತು ಸ್ಥಳಾಂತರ ಮಾಡಲಾಗಿದೆ.
ಇಂಡಿಗೋ ವಿಮಾನ ಚೆನ್ನೈಗೆ ಹಾರಲು ಸಿದ್ಧತೆ ನಡೆಸಿತ್ತು. ಈ ವೇಳೆ ವಿಮಾನದಲ್ಲಿ ಹೊಗೆ ಕಾಣಿಸಿಕೊಂಡಿದೆ. ಆತಂಕಗೊಂಡ ಪ್ರಯಾಣಿಕರನ್ನು ವಿಮಾನದಿಂದ ಸ್ಥಳಾಂತರಿಸಲಾಯಿತು. ವಿಮಾನದ ಬಾಗಿಲುಗಳ ಬಳಿ ಇರುವ ಇನ್‌ಫ್ಲೇಟೇಬಲ್ ಸ್ಲೈಡ್‌ಗಳ (Inflatable Slides) ಮೂಲಕ ಪ್ರಯಾಣಿಕರನ್ನು ವಿಮಾನದಿಂದ ಹೊರಗೆ ಜಾರಿಸಲಾಯಿತು.
Scary. Emergency evacuation was carried out from an Indigo aircraft at the Bangalore airport following smoke in cabin. 🤯 pic.twitter.com/CXN1gKLJe3
— Prashant Kumar (@scribe_prashant) May 26, 2026
ಘಟನೆಯಿಂದ ವಿಮಾನ ನಿಲ್ದಾಣದಲ್ಲಿ ಕ್ಷಣಕಾಲ ಆತಂಕ ಮನೆಮಾಡಿತು. ಪ್ರಯಾಣಿಕರು ತಮ್ಮ ಮಕ್ಕಳು, ವೃದ್ಧ ಪೋಷಕರ ಕೈಹಿಡಿದು ಗಾಬರಿಯಿಂದ ಹೊರಗೆ ಬಂದ ದೃಶ್ಯದ ವೀಡಿಯೋಗಳು ವೈರಲ್ ಆಗಿವೆ.
ಯಾರಿಗೂ ಯಾವುದೇ ಗಾಯಗಳಾಗಿಲ್ಲ. ಪ್ರಯಾಣಿಕ ಜೆಟ್ ವಿಮಾನವು ಹೊರಡಲು ರನ್‌ವೇಗೆ ಟ್ಯಾಕ್ಸಿ ಮಾಡುತ್ತಿದ್ದಾಗ ಒಳಗೆ ಹೊಗೆ ಪತ್ತೆಯಾದ ನಂತರ ಸುರಕ್ಷತಾ ಕ್ರಮವಾಗಿ ತುರ್ತು ಸ್ಥಳಾಂತರಿಸಲು ಆದೇಶಿಸಲಾಗಿದೆ ಎಂದು ಇಂಡಿಗೋ ಮಾಹಿತಿ ನೀಡಿದೆ.
More footage of the incident. pic.twitter.com/XDWyTQTBUb
— Gagan Choudhary (@Ganikgagan) May 26, 2026
ಎಲ್ಲಾ ಗ್ರಾಹಕರು ಮತ್ತು ಸಿಬ್ಬಂದಿ ಸುರಕ್ಷಿತವಾಗಿದ್ದಾರೆ. ಅವರನ್ನು ಟರ್ಮಿನಲ್‌ಗೆ ಸ್ಥಳಾಂತರಿಸಲಾಗಿದೆ. ಅಲ್ಲಿ ಅವರ ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ನಮ್ಮ ತಂಡಗಳು ಅವರನ್ನು ನೋಡಿಕೊಳ್ಳುತ್ತಿವೆ ಎಂದು ವಿಮಾನಯಾನ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.
ಸ್ಥಳಾಂತರಿಸುವ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ತುರ್ತು ಸ್ಲೈಡ್‌ಗಳನ್ನು ನಿಯೋಜಿಸಲಾಗಿದೆ. ನಾಗರಿಕ ವಿಮಾನಯಾನ ನಿರ್ದೇಶನಾಲಯದ ಮೂಲಗಳು ಘಟನೆಯನ್ನು ದೃಢಪಡಿಸಿದ್ದು, ಬೆಂಗಳೂರು-ಚೆನ್ನೈ ಇಂಡಿಗೋ ವಿಮಾನ 6E-6017, ಹಿಂದಕ್ಕೆ ತಳ್ಳುವ ಸಮಯದಲ್ಲಿ ಕ್ಯಾಬಿನ್‌ನಲ್ಲಿ ಹೊಗೆಯ ಅನುಭವವಾಯಿತು ಎಂದು ತಿಳಿಸಿವೆ.
