Connect with us

Latest

ಮೋದಿ ಸಂಪುಟ ಸೇರಿದ ಸಚಿವರ ಸಾಧನೆ ಏನು? ಇಷ್ಟೊಂದು ಮಹತ್ವ ಯಾಕೆ?

Published

on

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಸಚಿವ ಸಂಪುಟ ಬೆಳಗ್ಗೆ 10.30ಕ್ಕೆ ಪುನಾರಚನೆ ಆಗಿದೆ. 9 ಮಂದಿ ಹೊಸಬರು ಸಂಪುಟ ಸೇರಿದ್ದು, ನಾಲ್ಕು ಮಂದಿಗೆ ಕ್ಯಾಬಿನೆಟ್ ದರ್ಜೆಗೆ ಭಡ್ತಿ ನೀಡಲಾಗಿದೆ. ಸಚಿವ ಸ್ಥಾನದ ಪಟ್ಟಿಯಲ್ಲಿ ಕರ್ನಾಟಕದ ಪ್ರಹ್ಲಾದ್ ಜೋಷಿ, ಸುರೇಶ್ ಅಂಗಡಿ, ಶೋಭಾ ಕರಂದ್ಲಾಜೆ ಹೆಸರು ಬಲವಾಗಿ ಕೇಳಿ ಬಂದಿತ್ತು. ಆದರೆ ಮೋದಿ ಎಲ್ಲಾ ಲೆಕ್ಕಾಚಾರವನ್ನು ಬುಡಮೇಲು ಮಾಡಿದ್ದು, ಅಚ್ಚರಿಯ ಆಯ್ಕೆ ಎಂಬಂತೆ ಉತ್ತರ ಕನ್ನಡದ ಸಂಸದ ಉತ್ತರ ಕನ್ನಡದ ಅನಂತಕುಮಾರ್ ಹೆಗಡೆ ಅವರನ್ನು ಆರಿಸಿದ್ದಾರೆ. ಹೀಗಾಗಿ ಇಲ್ಲಿ ಇಂದು ಪ್ರಮಾಣವಚನ ಸ್ವೀಕರಿಸಿದ 9 ಮಂದಿ ಸಚಿವರ ಕಿರು ವಿವರವನ್ನು ನೀಡಲಾಗಿದೆ.

ಅನಂತ್‍ಕುಮಾರ್ ಹೆಗಡೆ:
ಮೇ 20, 1968ರಲ್ಲಿ ಶಿರಸಿಯಲ್ಲಿ ಜನಿಸಿದ ಇವರ ಪೂರ್ಣ ಹೆಸರು ಅನಂತಕುಮಾರ್ ದತ್ತಾತ್ರೇಯ ಹೆಗಡೆ. ಉತ್ತರ ಕನ್ನಡದ ಬಿಜೆಪಿ ಹಾಲಿ ಸಂಸದರಾಗಿರುವ ಅನಂತ್ ಕುಮಾರ್ 28ನೇ ವಯಸ್ಸಿಗೇ ಮೊದಲ ಬಾರಿ ಸಂಸದರಾಗಿ ಆಯ್ಕೆ ಆಗಿದ್ದರು. 1996, 1998, 2004, 2009, 2014ರಲ್ಲಿ ಸಂಸದರಾಗಿ ಆಯ್ಕೆ ಆಗಿರುವ ಇವರು ವಿದೇಶಾಂಗ ವ್ಯವಹಾರ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ಸಮಿತಿ ಹಾಲಿ ಸದಸ್ಯರಾಗಿದ್ದಾರೆ.

ಹಣಕಾಸು, ಗೃಹ, ವಾಣಿಜ್ಯ, ಕೃಷಿ, ಪರಿಸರ ಸಮಿತಿಗಳಲ್ಲಿ ಸದಸ್ಯರಾಗಿ ಸೇವೆ ಸಲ್ಲಿಸಿರುವ ಇವರು ಗ್ರಾಮೀಣಾ ಅಭಿವೃದ್ಧಿಗಾಗಿ ಕದಂಬ ಹೆಸರಿನ ಸರ್ಕಾರೇತರ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ಟೇಕ್ವಾಂಡೋ, ಮಾರ್ಷಲ್ ಆರ್ಟ್ಸ್ ನಲ್ಲಿ ಪರಿಣಿತಿಯನ್ನು ಪಡೆದಿದ್ದಾರೆ.

ಅಶ್ವಿನಿ ಚೌಬೆ:
ಬಿಹಾರದ ಬಕ್ಸರ್ ಕ್ಷೇತ್ರದ ಸಂಸದರಾಗಿರುವ ಅಶ್ವಿನಿ ಚೌಬೆ ಬ್ರಾಹ್ಮಣ ಸಮುದಾಯದ ಪ್ರಮುಖ ಮುಖಂಡರಾಗಿದ್ದು, 8 ವರ್ಷ ಬಿಹಾರದಲ್ಲಿ ಸಚಿವರಾಗಿ ಅನುಭವ ಹೊಂದಿದ್ದಾರೆ. 5 ಬಾರಿ ಬಾಗಲ್ಪುರದಿಂದ ಶಾಸಕರಾಗಿ ಆಯ್ಕೆ ಆಗಿದ್ದಾರೆ.

ಸತ್ಯಪಾಲ್ ಸಿಂಗ್:
ಉತ್ತರಪ್ರದೇಶ ಬಾಗ್ಪತ್ ಕ್ಷೇತ್ರದ ಸಂಸದರಾಗಿರುವ ಇವರು ಮುಂಬೈ ಪೊಲೀಸ್ ಆಯುಕ್ತರಾಗಿ ಈ ಹಿಂದೆ ಸೇವೆ ಸಲ್ಲಿಸಿದ್ದರು. ಮೊದಲ ಬಾರಿಗೆ ಸಂಸದರಾಗಿರುವ ಇವರು ಇಶ್ರಾಂತ್ ಜಹಾನ್ ನಕಲಿ ಎನ್‍ಕೌಂಟರ್ ಪ್ರಕರಣದ ತನಿಖಾ ತಂಡದ ಮುಖ್ಯಸ್ಥರಾಗಿದ್ದರು.

ಗಜೇಂದ್ರ ಸಿಂಗ್ ಶೇಖಾವತ್:
ರಾಜಸ್ಥಾನದ ಜೋಧಪುರ್ ಕ್ಷೇತ್ರದ ಬಿಜೆಪಿ ಸಂಸದರಾಗಿರುವ ಇವರು ರಜಪೂತ್ ಸಮುದಾಯದ ಪ್ರಭಾವಿ ನಾಯಕ. ಐತಿಹಾಸಿಕ 4,10,051 ಮತಗಳ ಅಂತರದೊಂದಿಗೆ ಗೆದ್ದಿದ್ದು ಸೋಶಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯರಾಗಿದ್ದಾರೆ. ಪ್ರಶ್ನೆ ಮತ್ತು ಉತ್ತರಕ್ಕೆ ಮೀಸಲಾಗಿರುವ ಸಾಮಾಜಿಕ ಜಾಲತಾಣ ಕೋರಾದಲ್ಲಿ ಇವರ ಪೇಜ್ ಅನ್ನು 58 ಲಕ್ಷ ಬಾರಿ ವೀಕ್ಷಣೆ ಮಾಡಲಾಗಿದೆ. ಸ್ವದೇಶಿ ಜಾಗರಣ ಮಂಚ್, ಬಿಜೆಪಿ ಕಿಸಾನ್ ಮೋರ್ಚಾದಲ್ಲಿ ಸಕ್ರಿಯರಾಗಿರುವ ಇವರು ತತ್ವಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ಶಿವಪ್ರತಾಪ್ ಶುಕ್ಲ:
ಉತ್ತರಪ್ರದೇಶದಿಂದ ರಾಜ್ಯಸಭಾ ಸಂಸದರಾಗಿರುವ ಇವರು ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಪ್ರಮುಖ ಮುಖಂಡರಾಗಿದ್ದಾರೆ. ರಾಜನಾಥ್ ಸಿಂಗ್, ಕಲ್ಯಾಣ ಸಿಂಗ್ ಅವಧಿಯಲ್ಲಿ ಉತ್ತರಪ್ರದೇಶಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ.

ವೀರೇಂದ್ರ ಕುಮಾರ್:
ಮಧ್ಯಪ್ರದೇಶದ ಟಿಕ್ಕಂಗಢ ಲೋಕಸಭಾ ಕ್ಷೇತ್ರದ ಸಂಸದರಾಗಿರುವ ಇವರು ಸತತ 7 ಬಾರಿ ಲೋಕಸಭೆಗೆ ಆಯ್ಕೆ ಆಗಿದ್ದಾರೆ. ಅರ್ಥಶಾಸ್ತ್ರದಲ್ಲಿ ಎಂ.ಎ ಪದವಿ, ಬಾಲಕಾರ್ಮಿಕರ ವಿಷಯದಲ್ಲಿ ಪಿಎಚ್‍ಡಿ ಪದವಿ ಪಡೆದಿದ್ದಾರೆ.

ರಾಜ್‍ಕುಮಾರ್ ಸಿಂಗ್:
ಮಾಜಿ ಕೇಂದ್ರ ಗೃಹ ಖಾತೆ ಕಾರ್ಯದರ್ಶಿ ಆಗಿರುವ ಇವರು ಮೊದಲ ಬಾರಿಗೆ ಬಿಹಾರದ ಅರ್ರಾ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆ ಆಗಿದ್ದಾರೆ. ರಾಮಜನ್ಮ ಭೂಮಿ ರಥಯಾತ್ರೆ ವೇಳೆ 1990 ಅಕ್ಟೋಬರ್ 30 ರಂದು ಸಮಷ್ಠಿಪುರದಲ್ಲಿ ಅಡ್ವಾಣಿ ಬಂಧಿಸಿದ ಖ್ಯಾತಿ ಇವರಿಗಿದೆ. ಅತ್ಯಂತ ದಕ್ಷ ಐಎಎಸ್ ಅಧಿಕಾರಿ ಎಂದು ಹೆಗ್ಗಳಿಕೆಯನ್ನು ಪಡೆದಿದ್ದಾರೆ.

ಹರ್ದೀಪ್ ಸಿಂಗ್ ಪುರಿ:
1974ನೇ ಬ್ಯಾಚ್‍ನ ಭಾರತೀಯ ವಿದೇಶಾಂಗ ಸೇವೆ ಅಧಿಕಾರಿ ಆಗಿದ್ದ ಇವರು 009 – 2013ರವರೆಗೆ ವಿಶ್ವಸಂಸ್ಥೆಯಲ್ಲಿ ಭಾರತದ ಪ್ರತಿನಿಧಿ ಆಗಿ ಕಾರ್ಯನಿರ್ವಹಿಸಿದ್ದರು. ವಿಶ್ವಸಂಸ್ಥೆಯ ಭದ್ರತಾ ಸಮಿತಿ(ಭಯೋತ್ಪಾದನೆ ನಿಗ್ರಹ) ಮುಖ್ಯಸ್ಥರಾಗಿದ್ದರು. ಬ್ರೆಜಿಲ್, ಶ್ರೀಲಂಕಾ, ಜಪಾನ್, ಇಂಗ್ಲೆಂಡ್‍ಗೆ ರಾಯಭಾರಿ ಆಗಿ ಸೇವೆ ಸಲ್ಲಿಸಿದ ಅನುಭವ ಹೊಂದಿರುವ ಇವರು 2014ರಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದರೂ ಇನ್ನೂ ಸಂಸದರಾಗಿಲ್ಲ.

ಅಲ್ಫೋನ್ಸ್ ಕಣ್ಣನ್‍ತನಂ:
ಮಾಜಿ ಐಎಎಸ್ ಅಧಿಕಾರಿ, 2006ರಲ್ಲಿ ಬಿಜೆಪಿಗೆ ಸೇರ್ಪಡೆ ಆಗಿದ್ದ ಇವರು ಈ ಹಿಂದೆ ದೆಹಲಿ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿದ್ದ ವೇಳೆ ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆ ನಡೆಸಿದ್ದರು. ‘ಡೆಮಾಲಿಶನ್ ಮ್ಯಾನ್’ ಎಂದೇ ಖ್ಯಾತಿ ಪಡೆದಿರುವ ಇವರು 1994ರಲ್ಲಿ ಟೈಂ ಮ್ಯಾಗಜಿನ್‍ನ 100 ಪ್ರಭಾವಿ ಯುವ ಮುಖಗಳಲ್ಲಿ ಒಬ್ಬರಾಗಿದ್ದರು. ಸದ್ಯ ರಾಷ್ಟ್ರೀಯ ಶಿಕ್ಷಣ ನೀತಿ ಮೇಲಿನ ಸಮಿತಿ ಸದಸ್ಯರಾಗಿರುವ ಇವರು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯ ಸದಸ್ಯರಾಗಿದ್ದಾರೆ. ಆದರೆ ಸದ್ಯ ಸಂಸದರಲ್ಲ.

ಸಂಪುಟ ಪುನಾರಚನೆಗೆ ಯಾಕೆ ಅಷ್ಟೊಂದು ಮಹತ್ವ?
ಇದು ತಮ್ಮ ಕನಸಿನ ಸಂಪುಟ ರಚಿಸಿಕೊಳ್ಳಲು ಪ್ರಧಾನಿ ಮೋದಿಗಿರುವ ಕಡೆಯ ಅವಕಾಶವಾಗಿದ್ದು, ಕಳಪೆ ಸಾಧನೆ ಮಾಡಿದ ಸಚಿವರಿಗೆ ಗೇಟ್‍ಪಾಸ್, ಹೊಸಬರು, ಯುವ ಮುಖಗಳಿಗೆ ಅವಕಾಶ ನೀಡಲಾಗಿದೆ. ಇನ್ನೆರಡು ವರ್ಷಗಳಲ್ಲಿ 3 ವರ್ಷಗಳ ಹಿಂದೆ ಘೋಷಿಸಿರುವ ಕಾರ್ಯಕ್ರಮಗಳ ಸಮರ್ಥ ಅನುಷ್ಠಾನ ಮತ್ತು 2019ರ ಲೋಕಸಭಾ ಚುನಾವಣೆಯಲ್ಲಿ ಸರ್ಕಾರದ ಬಗ್ಗೆ ಮತ್ತಷ್ಟು ಜನಪ್ರಿಯತೆ ಸೃಷ್ಟಿಸುವ ಲೆಕ್ಕಾಚಾರ ನೋಡಿಕೊಂಡು ಪುನಾರಚನೆ ಮಾಡಿದ್ದಾರೆ ಎನ್ನಲಾಗಿದೆ.

ಈಗಾಗಲೇ ಅಮಿತ್ ಶಾ ಹೆಣೆದಿರುವ 350 ಸೀಟುಗಳ ಕನಸನ್ನು ಸಾಕಾರಗೊಳಿಸುವುದಕ್ಕೆ ಸಂಪುಟದಲ್ಲಿ ಜಾತಿ-ವರ್ಗಗಳ ಲೆಕ್ಕಾಚಾರದಲ್ಲಿ ಜಾಗ ನೀಡಿ ಹೊಸ ಮತ ಧ್ರುವೀಕರಣಕ್ಕೆ ಪ್ಲಾನ್ ಮಾಡಿ ಪುನರಾಚನೆ ಮಾಡಲಾಗಿದೆ. ಕರ್ನಾಟಕ, ಆಂಧ್ರ, ತೆಲಂಗಾಣ, ಕೇರಳ, ಪಶ್ಚಿಮಬಂಗಾಳ, ಅಸ್ಸಾಂ, ಒಡಿಶಾದಲ್ಲಿ ಮತ್ತಷ್ಟು ಸಂಸದ ಸ್ಥಾನ ಗೆಲ್ಲಲು ತಂತ್ರ ಹೆಣೆಯಲಾಗಿದ್ದು ಈ ಕಾರಣಕ್ಕೆ ಹಿರಿಯ ಸಚಿವರಿಗೆ ಮಂತ್ರಿ ಸ್ಥಾನದಿಂದ ಮುಕ್ತಿ ನೀಡಿ ಪಕ್ಷದ ಬಲವರ್ಧನೆಗೆ ಬಳಸಲು ಮೋದಿ ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ನಿರ್ಮಲಾ ಸೀತಾರಾಮನ್, ಮುಕ್ತಾರ್ ಅಬ್ಬಾಸ್ ನಖ್ವಿ, ಪಿಯೂಷ್ ಗೋಯಲ್, ಧರ್ಮೇಂದ್ರ ಪ್ರಧಾನ್ ಅವರಿಗೆ ಕ್ಯಾಬಿನೆಟ್ ದರ್ಜೆಗೆ ಭಡ್ತಿ ನೀಡಲಾಗಿದೆ. ಈ ನಾಲ್ಕೂ ಸಚಿವರಿಗೂ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಪ್ರತಿಜ್ಞಾ ವಿಧಿ ಬೋಧಿಸಿದರು.ಕಾರ್ಯಕ್ರಮದಲ್ಲಿ ಉಪ ರಾಷ್ಟ್ರಪತಿ ವೆಂಕಯ್ಯನಾಯ್ಡು, ಪ್ರಧಾನಿ ನರೇಂದ್ರ ಮೋದಿ, ಸ್ಪೀಕರ್ ಸುಮಿತ್ರಾ ಮಹಾಜನ್, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಗೃಹ ಸಚಿವ ರಾಜನಾಥ್ ಸಿಂಗ್, ಹಣಕಾಸು ಸಚಿವ ಅರುಣ್ ಜೇಟ್ಲಿ ಸೇರಿದಂತೆ ಹಲವು ಸಚಿವರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು. ಭಾರತೀಯ ಸೇನೆಯ ಮೂರು ದಳಗಳ ಮುಖ್ಯಸ್ಥರು ಹಾಜರಿದ್ದರು.

Click to comment

Leave a Reply

Your email address will not be published. Required fields are marked *

www.publictv.in