ಬೆಂಗಳೂರು: ಕಾಂಗ್ರೆಸ್ ಶಾಸಕಾಂಗ ಪಕ್ಷದ ನೂತನ ನಾಯಕರಾಗಿ ಡಿ.ಕೆ. ಶಿವಕುಮಾರ್ (D.K.Shivakumar) ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಹೆಮ್ಮೆಯಿಂದ ಹೇಳುತ್ತೇನೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ (K.C.Venugopal) ಪ್ರಕಟಿಸಿದರು.
ವಿಧಾನಸೌಧದಲ್ಲಿ ಶನಿವಾರ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಬಳಿಕ ಕೆ.ಸಿ.ವೇಣುಗೋಪಾಲ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ಇದನ್ನೂ ಓದಿ: ಸಿದ್ದರಾಮಯ್ಯನವರೇ ರಾಷ್ಟ್ರ ರಾಜಕಾರಣಕ್ಕೆ ಬನ್ನಿ: ಕೆ.ಸಿ.ವೇಣುಗೋಪಾಲ್ ಮತ್ತೆ ಆಹ್ವಾನ
ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಹೆಸರನ್ನು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ಸೂಚಿಸಿತು. ಸಭೆಯಲ್ಲಿ ಹಂಗಾಮಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಿವಕುಮಾರ್ ಅವರ ಹೆಸರನ್ನು ಪ್ರಸ್ತಾಪಿಸಿದ್ದು, ಕಾಂಗ್ರೆಸ್ ಶಾಸಕಾಂಗ ಸಭೆಯು ಸರ್ವಾನುಮತದಿಂದ ಒಪ್ಪಿಕೊಂಡಿತು. ಡಾ. ಜಿ.ಪರಮೇಶ್ವರ ಅವರು ಈ ಪ್ರಸ್ತಾವನೆಯನ್ನು ಅನುಮೋದಿಸಿದರು ಎಂದು ಮಾಹಿತಿ ನೀಡಿದರು.
ಜೂನ್ 3ರಂದು ಪ್ರಮಾಣವಚನ ಸ್ವೀಕಾರ
ಶಿವಕುಮಾರ್ ಅವರು ರಾಜ್ಯಪಾಲರನ್ನು ಭೇಟಿ ಮಾಡಿ, ಮುಖ್ಯಮಂತ್ರಿಯಾಗಿ ಸರ್ಕಾರ ರಚನೆಯ ಹಕ್ಕು ಮಂಡಿಸಲಿದ್ದಾರೆ. ಜೂನ್ 3ರಂದು ಶಿವಕುಮಾರ್ ಅವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ಅಧಿಕಾರ ಹಸ್ತಾಂತರದಿಂದ ಕಾಂಗ್ರೆಸ್ ಪಕ್ಷಕ್ಕೆ ಸಂಕಷ್ಟ ಎದುರಾಗಲಿದೆ ಎಂದು ಅನೇಕರು ನಿರೀಕ್ಷಿಸಿದ್ದರು. ಆದರೆ, ನಮ್ಮದು ಕುಟುಂಬವಿದ್ದಂತೆ. ಎಲ್ಲರೂ ಸಿದ್ದರಾಮಯ್ಯ ಅವರ ನಡೆ ಹೇಗಿರಲಿದೆ ಎಂದು ಕೇಳುತ್ತಿದ್ದರು. ಆದರೆ, ಸಿದ್ದರಾಮಯ್ಯ ಅವರು ನನ್ನ ಹೃದಯದಲ್ಲಿ ಕೇವಲ ಕಾಂಗ್ರೆಸ್ ಪಕ್ಷವಿದೆ. ಕಾಂಗ್ರೆಸ್ ಹೈಕಮಾಂಡ್ ನಿರ್ಧಾರವನ್ನು ಪಾಲಿಸುತ್ತೇನೆ ಎಂದು ಉತ್ತರ ನೀಡಿದ್ದರು. ಸಿದ್ದರಾಮಯ್ಯ ಅವರು ತಮ್ಮ ನಡೆ ಮೂಲಕ ಸಾಬೀತಪಡಿಸಿದರು. ಇದು ಕಾಂಗ್ರೆಸ್ ಒಂದು ಕುಟುಂಬ ಎಂಬುದಕ್ಕೆ ಸಾಕ್ಷಿ ಎಂದು ಬಣ್ಣಿಸಿದರು. ಇದನ್ನೂ ಓದಿ: ವಿಧಾನಸೌಧದ ಮುಂದೆ ಡಿಕೆಶಿ ಬೆಂಬಲಿಗರಿಂದ ‘ಡಿಕೆ..ಡಿಕೆ’ ಜಯಘೋಷ – ತಣ್ಣಗಾದ ಸಿದ್ದು
ಕಾಂಗ್ರೆಸ್ ಪಕ್ಷ ಮತ್ತೆ 2028ರಲ್ಲಿ ಅಧಿಕಾರಕ್ಕೆ
ಇಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಮುಖ್ಯಮಂತ್ರಿಗಳಾಗಿ ಸಿದ್ದರಾಮಯ್ಯ ಅವರ 8 ವರ್ಷಗಳ ಅತ್ಯುತ್ತಮ ಸೇವೆಯನ್ನು ಶ್ಲಾಘಿಸಲಾಗಿದೆ. ಈ ನಿರ್ಣಯವನ್ನು ಸ್ವತಃ ಡಿ.ಕೆ.ಶಿವಕುಮಾರ್ ಅವರು ಮಂಡಿಸಿದರು. ಇದು ಕಾಂಗ್ರೆಸ್ ಪಕ್ಷಕ್ಕೆ ಹೆಮ್ಮೆಯ ಕ್ಷಣ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಹಾಗೂ ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರ ಮಾರ್ಗದರ್ಶನದಂತೆ ಈ ಅಧಿಕಾರ ಹಸ್ತಾಂತರ ಮಾಡಲಾಗಿದೆ. ಸಿದ್ದರಾಮಯ್ಯ ಅವರ ಬೆಂಬಲದೊಂದಿಗೆ ಡಿ.ಕೆ.ಶಿವಕುಮಾರ್ ಅವರ ನಾಯಕತ್ವದಲ್ಲಿ ಕಾಂಗ್ರೆಸ್ ಪಕ್ಷ ಮತ್ತೆ 2028ರಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದರು.
