– ʻಆಪರೇಷನ್ ಸಿಂಧೂರʼ ಸಾಕ್ಷ್ಯಚಿತ್ರ ಸರಣಿ ಬಿಡುಗಡೆ ಸಂದರ್ಶನದಲ್ಲಿ ದೋವಲ್ ಮಾತು
– 88 ಗಂಟೆಗಳ ಮಿಲಿಟರಿ ಕಾರ್ಯಾಚರಣೆಯಲ್ಲಿ ಏನೆಲ್ಲಾ ಆಯ್ತು?
ಬೆಂಗಳೂರು: ಭಾರತವು ಸಹಿಷ್ಣು ದೇಶ, ದುರ್ಬಲವಲ್ಲ. ನಾವು ಅಪಾಯಗಳನ್ನು ತೆಗೆದುಕೊಳ್ಳಬಹುದು, ಆದ್ರೆ ನಮ್ಮ ಸಹಿಷ್ಣುತೆಯನ್ನು, ನಮ್ಮ ಔದಾರ್ಯವನ್ನು ದೌರ್ಬಲ್ಯವೆಂದು ತಪ್ಪಾಗಿ ಭಾವಿಸಬೇಡಿ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ (NSA) ಅಜಿತ್ ದೋವಲ್ (Ajit Doval) ಹೇಳಿದ್ದಾರೆ.
ಆಪರೇಷನ್ ಸಿಂಧೂರ (Operation Sindoor) ಮಿಲಿಟರಿ ಕಾರ್ಯಾಚರಣೆ ಕುರಿತ ʻಡಿಕ್ಲಾಸಿಫೈಡ್: ಆಪರೇಷನ್ ಸಿಂಧೂರ್ʼ ಸಾಕ್ಷ್ಯಚಿತ್ರ ಸರಣಿ 2 ಭಾಗಗಳಲ್ಲಿ ಡಿಸ್ಕವರಿ ಚಾನಲ್‌ನಲ್ಲಿ ಶನಿವಾರ ಪ್ರಸಾರವಾಗಲಿದೆ. ಇದರ ಸಂದರ್ಶನದಲ್ಲಿ ಅಜಿತ್ ದೋವಲ್ ಮಾತನಾಡಿದ್ದಾರೆ. ಇದು ಆಪರೇಷನ್ ಸಿಂಧೂರ ಕುರಿತು ದೋವಲ್ ಅವರ ಮೊದಲ ಸಂದರ್ಶನವಾಗಿದೆ.
ಇದರಲ್ಲಿ, 88 ಗಂಟೆಗಳ ಮಿಲಿಟರಿ ಕಾರ್ಯಾಚರಣೆಯ ಹಿಂದಿನ ಕಾರ್ಯತಂತ್ರ ಮತ್ತು ನಿರ್ಧಾರ ತೆಗೆದುಕೊಳ್ಳುವಿಕೆಯ ಬಗ್ಗೆ ಅವರು ವಿವರವಾಗಿ ಮಾತನಾಡಿದ್ದಾರೆ. ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಕಾರಣವಾದ ಶತ್ರು ಗುರಿಗಳನ್ನ ನಾಶಮಾಡುವುದು ಕಾರ್ಯಾಚರಣೆಯ ಉದ್ದೇಶವಾಗಿತ್ತು ಎಂದು ದೋವಲ್ ಹೇಳಿದ್ದಾರೆ.

ಮುಂದುವರಿದು… ಜಗತ್ತಿಗೆ ಸಂದೇಶವು ತುಂಬಾ ಸ್ಪಷ್ಟವಾಗಿದೆ, ಭಾರತದ ಔದಾರ್ಯ ಅಥವಾ ಸಹಿಷ್ಣುತೆಯನ್ನು ದೌರ್ಬಲ್ಯವೆಂದು ತಪ್ಪಾಗಿ ಭಾವಿಸಬಾರದು. ಭಾರತ ಅಪಾಯಗಳನ್ನು ತೆಗೆದುಕೊಳ್ಳಬಹುದು, ಪರಿಣಾಮಗಳು ಏನೇ ಇರಲಿ, ಭಾರತ ತೀವ್ರವಾಗಿ ದಾಳಿ ಮಾಡಬಹುದು ಎಂದಿದ್ದಾರೆ.
ʻಡಿಕ್ಲಾಸಿಫೈಡ್: ಆಪರೇಷನ್ ಸಿಂಧೂರ್ʼ ಎರಡು ಭಾಗಗಳ ಸಾಕ್ಷ್ಯಚಿತ್ರ ಸರಣಿಯಾಗಿದೆ. ಇದು ಶನಿವಾರ ರಾತ್ರಿ 9 ಗಂಟೆಗೆ ಡಿಸ್ಕವರಿ ಚಾನೆಲ್ ಮತ್ತು ಅದರ ಸ್ಟ್ರೀಮಿಂಗ್ ಸೇವೆಯಾದ ಡಿಸ್ಕವರಿ+ ನಲ್ಲಿ ಪ್ರಸಾರವಾಗಲಿದೆ. ಇದು ಆಪರೇಷನ್ ಸಿಂಧೂರ ಸುತ್ತಲಿನ ಘಟನೆಗಳು ಮತ್ತು ಭಾರತದ ಉನ್ನತ ಮಿಲಿಟರಿ ಮತ್ತು ಭದ್ರತಾ ನಾಯಕತ್ವವು ತೆಗೆದುಕೊಂಡ ನಿರ್ಧಾರಗಳ ಕುರಿತ ಸಾಕ್ಷ್ಯಚಿತ್ರವಾಗಿದೆ.
ಈ ಎರಡು ಭಾಗಗಳ ಸಾಕ್ಷ್ಯಚಿತ್ರ ಸರಣಿಯು ಭಾರತದ ಮಿಲಿಟರಿ ಮತ್ತು ರಾಷ್ಟ್ರೀಯ ಭದ್ರತಾ ನಾಯಕತ್ವವನ್ನ ಒಳಗೊಂಡಿದೆ. ಇದು ಭಾರತದ ಪ್ರತಿಕ್ರಿಯೆಯನ್ನು ಮೇಲ್ವಿಚಾರಣೆ ಮಾಡಿದ ಅಧಿಕಾರಿಗಳ ನೇರ ಅನುಭವಗಳ ಮೂಲಕ ಆಪರೇಷನ್ ಸಿಂಧೂರ್ ಸಮಯದಲ್ಲಿ ತೆಗೆದುಕೊಂಡ ಪ್ರಮುಖ ನಿರ್ಧಾರಗಳು ಮತ್ತು ಘಟನೆಗಳನ್ನು ವಿವರಿಸುತ್ತದೆ. ಮಿಲಿಟರಿ ಕಾರ್ಯಾಚರಣೆಯ ಹಿಂದಿನ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆ, ಕಾರ್ಯತಂತ್ರ ಮತ್ತು ದೃಢಸಂಕಲ್ಪದ ಕುರಿತು ದೋವಲ್ ತಮ್ಮ ದೃಷ್ಟಿಕೋನವನ್ನ ಹಂಚಿಕೊಳ್ಳುವುದನ್ನು ಕಾಣಬಹುದು.
![]()
88 ಗಂಟೆಗಳ ಮಿಲಿಟರಿ ಕಾರ್ಯಾಚರಣೆ
2025 ರ ವರ್ಷ ಮೇ 7ರ ಬೆಳಗ್ಗೆ ಆಪರೇಷನ್ ಸಿಂಧೂರ್ ಪ್ರಾರಂಭವಾಯಿತು. ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ಇದನ್ನು ನಡೆಸಲಾಯಿತು. ಭಾರತೀಯ ಸಶಸ್ತ್ರ ಪಡೆಗಳು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ)ರುವ ಹಲವಾರು ಭಯೋತ್ಪಾದಕ ಅಡಗುತಾಣಗಳನ್ನ ಧ್ವಂಸಗೊಳಿಸಿದವು.
ಇದರ ನಂತರ, ಪಾಕಿಸ್ತಾನವು ಭಾರತದ ವಿರುದ್ಧ ಮಿಲಿಟರಿ ಕ್ರಮ ಪ್ರಾರಂಭಿಸಿತು. ಭಾರತವು ಹಲವಾರು ಪ್ರತೀಕಾರದ ಕಾರ್ಯಾಚರಣೆಗಳೊಂದಿಗೆ ಪ್ರತಿಕ್ರಿಯಿಸಿತು, ಇವೆಲ್ಲವನ್ನೂ ಆಪರೇಷನ್ ಸಿಂಧೂರ ಅಡಿಯಲ್ಲಿ ನಡೆಸಲಾಯಿತು. ಎರಡು ಪರಮಾಣು ಶಸ್ತ್ರಸಜ್ಜಿತ ದೇಶಗಳ ನಡುವಿನ ಈ ಮಿಲಿಟರಿ ಮುಖಾಮುಖಿ ಸುಮಾರು 88 ಗಂಟೆಗಳ ಕಾಲ ನಡೆಯಿತು. ಮೇ 10 ರ ಸಂಜೆ ಭಾರತ ಮತ್ತು ಪಾಕಿಸ್ತಾನ ನಡುವೆ ಒಪ್ಪಂದವಾದ ನಂತರ ಮಿಲಿಟರಿ ಚಟುವಟಿಕೆಗಳನ್ನ ಸ್ಥಗಿತಗೊಳಿಸಲಾಯಿತು.
