– ಆಟಗಾರರ ಮೊಬೈಲ್‌ಗಳನ್ನು ವಶಕ್ಕೆ ಪಡೆದ ಕ್ರಿಕೆಟ್ ಬೋರ್ಡ್
ಲಂಡನ್: ಕಳೆದ ತಿಂಗಳು ಲಾರ್ಡ್ಸ್ ಟೆಸ್ಟ್ ನಲ್ಲಿ ಪಾಕಿಸ್ತಾನ ತಂಡ ಹೀನಾಯವಾಗಿ ಸೋಲು ಅನುಭವಿಸಿದ ಬಳಿಕ ಮತ್ತೊಂದು ವಿವಾದ ಸ್ಫೋಟಗೊಂಡಿದೆ. ಪಾಕಿಸ್ತಾನ ಕ್ರಿಕೆಟ್‌ನಲ್ಲಿ ಮ್ಯಾಚ್ ಫಿಕ್ಸಿಂಗ್ (Match Fixing) ಆರೋಪ ಕೇಳಿಬಂದಿದ್ದು, PCB (ಪಾಕಿಸ್ತಾನ ಕ್ರಿಕೆಟ್ ಮಂಡಳಿ) ಆಂತರಿಕ ಶಿಸ್ತಿನ ವಿಚಾರಣೆ ಆರಂಭಿಸಿದೆ ಎಂದು ವರದಿಯಾಗಿದೆ.
ಕಳೆದ ತಿಂಗಳು ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದ ಪಾಕಿಸ್ತಾನ (Pakistan) ಪುರುಷರ ಕ್ರಿಕೆಟ್ ತಂಡ ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿತ್ತು. ಅದ್ರಲ್ಲೂ ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ (Lord’s Stadium) ಆ.27 ರಂದು ನಡೆದ ಕೊನೆಯ ಟೆಸ್ಟ್ ಪಂದ್ಯದಲ್ಲಿ ಪಾಕ್ 194 ರನ್‌ಗಳ ಅಂತರದಿಂದ ಸೋಲು ಕಂಡಿತ್ತು. ಸರಣಿ ಅಂತಿಮ ಟೆಸ್ಟ್‌ಗೂ ಮುನ್ನವೇ ತಂಡದಲ್ಲಿ ಭಾರೀ ಬದಲಾವಣೆ ಕೂಡ ಮಾಡಲಾಗಿತ್ತು. 7 ಆಟಗಾರರನ್ನ ತಂಡದಿಂದ ಕೈಬಿಡಲಾಗಿತ್ತು. ಇದರ ಜೊತೆಗೆ ಕೋಚಿಂಗ್ ಸಿಬ್ಬಂದಿಯ ಇಬ್ಬರು ಸದಸ್ಯರನ್ನೂ ತೆಗೆದುಹಾಕಲಾಯಿತು.

PCB ವಕ್ತಾರ ಅಮೀರ್ ಮಿರ್ ಅವರು ಸೆಪ್ಟೆಂಬರ್ 7ರಂದು ತನಿಖೆ ಆರಂಭಿಸಿರುವುದನ್ನ ಖಚಿತಪಡಿಸಿದ್ದಾರೆ. ತಂಡದೊಳಗಿನ ಶಿಸ್ತು ಮತ್ತು ನಡವಳಿಕೆಗೆ ಸಂಬಂಧಿಸಿದ ಮಾಧ್ಯಮ ವರದಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಶಿಸ್ತು ಮತ್ತು ನಡವಳಿಕೆಗೆ ಸಂಬಂಧಿಸಿದ ಮಾಧ್ಯಮ ವರದಿಗಳ ಹಿನ್ನೆಲೆಯಲ್ಲಿ PCB ಆಂತರಿಕ ಶಿಸ್ತು ತನಿಖೆಯನ್ನು ಆರಂಭಿಸಿದೆ. ಈ ವಿಷಯವನ್ನು ಮಂಡಳಿಯ ನಿಯಮಾವಳಿಗಳ ಪ್ರಕಾರ ಪರಿಶೀಲಿಸಲಾಗುತ್ತಿದೆ. ಸಂಬಂಧಪಟ್ಟ ಎಲ್ಲರಿಗೂ ತಮ್ಮ ವಿಚಾರ ಮಂಡಿಸಲು ಸೂಕ್ತ ಅವಕಾಶ ನೀಡಲಾಗುತ್ತದೆ ಎಂದಿದ್ದಾರೆ ಅಮೀರ್. ಆದ್ರೆ ತನಿಖೆ ಯಾವ ನಿರ್ದಿಷ್ಟ ಆರೋಪಕ್ಕೆ ಸಂಬಂಧಿಸಿದೆ ಅಥವಾ ಯಾವ ಆಟಗಾರನ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ ಎಂಬುದನ್ನು PCB ಗೌಪ್ಯವಾಗಿಟ್ಟಿದೆ.
ಪಾಕ್ ತಂಡದಲ್ಲಿ ಬಿಗ್ ಚೇಂಜ್
ಇಂಗ್ಲೆಂಡ್ ವಿರುದ್ಧದ ಮೊದಲ 2 ಟೆಸ್ಟ್‌ಗಳಲ್ಲಿ ಪಾಕಿಸ್ತಾನ ಹೀನಾಯ ಸೋಲು ಅನುಭವಿಸಿತ್ತು. ಮೊದಲ ಟೆಸ್ಟ್‌ನಲ್ಲಿ ಇನ್ನಿಂಗ್ಸ್ ಮತ್ತು 103 ರನ್‌ಗಳ ಸೋಲು ಕಂಡಿದ್ದ ಪಾಕಿಸ್ತಾನ, ಲಾರ್ಡ್ಸ್‌ನಲ್ಲಿ ನಡೆದ ಎರಡನೇ ಟೆಸ್ಟ್‌ನಲ್ಲಿ 194 ರನ್‌ಗಳಿಂದ ಸೋತಿತ್ತು. ಈ ಸೋಲುಗಳ ಬಳಿಕ PCB ತಂಡದಲ್ಲಿ ದೊಡ್ಡ ಮಟ್ಟದ ಬದಲಾವಣೆ ಮಾಡಿತು. ಮೊಹಮ್ಮದ್ ರಿಜ್ವಾನ್, ಸಲ್ಮಾನ್ ಅಲಿ ಆಗಾ, ಇಮಾಮ್-ಉಲ್-ಹಕ್, ಅಲಿ ಉಸ್ಮಾನ್, ಖುರ್ರಮ್ ಶಹಜಾದ್, ಆಮಿರ್ ಜಮಾಲ್ ಮತ್ತು ಮುಹಮ್ಮದ್ ಅವೈಸ್ ಜಾಫರ್ ಅವರನ್ನ ತಂಡದಿಂದ ಕೈಬಿಡಲಾಯಿತು. ಇದರ ಜೊತೆಗೆ ಮುಖ್ಯ ಕೋಚ್ ಸರ್ಫರಾಜ್ ಅಹ್ಮದ್ ಹಾಗೂ ಬೌಲಿಂಗ್ ಕೋಚ್ ಉಮರ್ ಗುಲ್ ಅವರನ್ನೂ ಸಹ ಹುದ್ದೆಯಿಂದ ತೆಗೆದುಹಾಕಲಾಯಿತು.

ಅವರ ಸ್ಥಾನಕ್ಕೆ 7 ಬದಲಿ ಆಟಗಾರರನ್ನು ತಂಡಕ್ಕೆ ಸೇರಿಸಲಾಗಿದೆ. ಇವರಲ್ಲಿ ಸೈಮ್ ಅಯೂಬ್ ಮತ್ತು ಅಬ್ದುಲ್ಲಾ ಫಜಲ್ ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದ್ದಾರೆ. ಉಳಿದ ಐವರು ಆಟಗಾರರು ಇನ್ನೂ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿಲ್ಲ. ಹೊಸ ಸೇರ್ಪಡೆಗಳಲ್ಲಿ ವೇಗದ ಬೌಲಿಂಗ್ ಆಲ್‌ರೌಂಡರ್‌ಗಳಾದ ರಝಾವುಲ್ಲಾ ಖಾನ್ ಮತ್ತು ಮೊಹಮ್ಮದ್ ಇಮ್ರಾನ್, ಎಡಗೈ ಸ್ಪಿನ್ನರ್ ಅರಾಫತ್ ಮಿನ್ಹಾಸ್, ವಿಕೆಟ್‌ಕೀಪರ್ ಸಾದ್ ಬೈಗ್ ಹಾಗೂ ಎಡಗೈ ವೇಗದ ಬೌಲರ್ ಮೊಹಮ್ಮದ್ ಇಮ್ರಾನ್ ಜೂನಿಯರ್ ಸೇರಿದ್ದಾರೆ.
ಮ್ಯಾಚ್ ಫಿಕ್ಸಿಂಗ್ ಆರೋಪ ಮತ್ತೆ ಮುನ್ನೆಲೆಗೆ
PCB ಆರಂಭಿಸಿರುವ ಆಂತರಿಕ ತನಿಖೆಯ ಹಿನ್ನೆಲೆ ಪಾಕಿಸ್ತಾನ ಕ್ರಿಕೆಟ್‌ನಲ್ಲಿ ಮ್ಯಾಚ್ ಫಿಕ್ಸಿಂಗ್ ಆರೋಪಗಳು ಮತ್ತೆ ಹುಟ್ಟಿಕೊಂಡಿವೆ. ಪಾಕ್‌ನ ಸ್ಥಳೀಯ ಮಾಧ್ಯಮಗಳ ವರದಿ ಪ್ರಕಾರ, ತಂಡದಲ್ಲಿನ ಇತ್ತೀಚಿನ ಭಾರೀ ಬದಲಾವಣೆಗಳು ಕೇವಲ ಆಟಗಾರರ ಪ್ರದರ್ಶನಕ್ಕೆ ಸೀಮಿತವಾಗಿರದೇ, ಇನ್ನೂ ಅನೇಕ ಕಾರಣಗಳಿರಬಹುದು ಎಂಬ ಚರ್ಚೆ ಹುಟ್ಟಿಕೊಂಡಿವೆ. ಮತ್ತೊಂದು ಕಡೆ ಕೆಲ ಆಟಗಾರರು ತಮ್ಮ ಮೊಬೈಲ್ ಫೋನ್‌ಗಳನ್ನು ಪಿಸಿಬಿಗೆ ಒಪ್ಪಿಸಿದ್ದು, ಅಂತಿಮ ಟೆಸ್ಟ್ ಮುಗಿಯುವವರೆಗೆ ಪಿಸಿಬಿ ವಶದಲ್ಲಿರಲಿವೆ ಎಂದು ತಿಳಿದು ಬಂದಿದೆ. ಇದು ಮ್ಯಾಚ್‌ಫಿಕ್ಸಿಂಗ್ ವದಂತಿಗಳಿಗೆ ಪುಷ್ಠಿ ನೀಡಿವೆ.
2010ರ ಲಾರ್ಡ್ಸ್ ಸ್ಪಾಟ್ ಫಿಕ್ಸಿಂಗ್ ಪ್ರಕರಣದ ನೆನಪು
ಸದ್ಯದ ಮಟ್ಟಿಗೆ ಪಾಕಿಸ್ತಾನ ಕ್ರಿಕೆಟ್‌ನಲ್ಲಿನ ಬೆಳವಣಿಗೆಗಳು 2010ರಲ್ಲಿ ಲಾರ್ಡ್ಸ್‌ನಲ್ಲೇ ನಡೆದ ಪಾಕಿಸ್ತಾನದ ಕುಖ್ಯಾತ ಸ್ಪಾಟ್ ಫಿಕ್ಸಿಂಗ್ ಪ್ರಕರಣವನ್ನ ಮತ್ತೆ ನೆನಪಿಸಿವೆ. 2010ರಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನದ ಅಂದಿನ ನಾಯಕ ಸಲ್ಮಾನ್ ಬಟ್, ವೇಗದ ಬೌಲರ್‌ಗಳಾದ ಮೊಹಮ್ಮದ್ ಆಸಿಫ್ ಮತ್ತು ಮೊಹಮ್ಮದ್ ಆಮಿರ್ ಅವರು ಬುಕ್ಕರ್‌ನಿಂದ ಹಣ ಪಡೆದು ಪೂರ್ವನಿಗದಿತ ಸಮಯದಲ್ಲಿ ಉದ್ದೇಶಪೂರ್ವಕವಾಗಿ ನೋ-ಬಾಲ್‌ಗಳನ್ನ ಎಸೆದ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಸಾಬೀತಾಗಿದ್ದರು.
ಆದ್ರೆ ಇದ್ಯಾವುದರ ಸುಳಿವು ಬಿಟ್ಟುಕೊಡದ ಪಾಕಿಸ್ತಾನ ಕ್ರಿಕೆಟ್ ಮಂಡಳಿ, ವದಂತಿಗಳಿಗೆ ಕಿವಿಗೊಡದಂತೆ ಮನವಿ ಮಾಡಿದೆ. ಆದ್ರೆ ಮ್ಯಾಚ್‌ಫಿಕ್ಸಿಂಗ್ ಆರೋಪದ ಬಗ್ಗೆ ಅಧಿಕೃತ ಹೇಳಿಕೆ ನೀಡಲು ನಿರಾಕರಿಸಿದೆ.
