ಬಿಗ್ ಬಾಸ್ ಕನ್ನಡ ಸೀಸನ್ 13ರ ಗ್ರ್ಯಾಂಡ್ ಓಪನಿಂಗ್ ಆಗಿದೆ. ದೊಡ್ಮನೆಗೆ 2ನೇ ಬಾರಿಗೆ ಖ್ಯಾತ ನಿರ್ದೇಶಕ, ನಟ ಓಂ ಪ್ರಕಾಶ್ ಅವರ ಎಂಟ್ರಿಯಾಗಿದೆ.
ದೊಡ್ಮನೆಗೆ 2ನೇ ಬಾರಿಗೆ ಬಂದ ಓಂ ಪ್ರಕಾಶ್ ಅವರ ಕಾಲೆಳೆದಿದ್ದಾರೆ ಕಿಚ್ಚ ಸುದೀಪ್. ಟೆಸ್ಟ್ ಕ್ರಿಕೆಟ್‌ನಲ್ಲಿ ಸೆಕೆಂಡ್ ಇನ್ನಿಂಗ್ಸ್‌ಗೆ ಬಂದಿದ್ದೀರಾ ಅಂತ ಕಿಚ್ಚ ಕಿಚಾಯಿಸಿದರು. ತನ್ನಂತಹ ಸ್ಟಾರ್ ನಟರಿಗೆ ನಿರ್ದೇಶನ ಮಾಡಿದ ಪ್ರತಿಭೆ ಎಂದು ಬಣ್ಣಿಸಿದರು.
ಓಂ ಪ್ರಕಾಶ್ ಅವರು ಬಿಗ್ ಬಾಸ್ ಸೀಸನ್ 4ರಲ್ಲೇ ಮೊದಲ ಬಾರಿಗೆ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದಾರೆ. ಆಗ ಮನೆಯಿಂದ ಎಲಿಮಿನೇಟ್ ಆಗಿರಲಿಲ್ಲ. ಅನಾರೋಗ್ಯದ ಸಮಸ್ಯೆಯಿಂದ ಎಂಟ್ರಿಯಾದ ಕೆಲ ದಿನಗಳಲ್ಲೇ ವಾಪಸ್ ಆಗಿದ್ದರು. ಈಗ ದೊಡ್ಮನೆಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಲಿದ್ದಾರೆ.
ನಿರ್ದೇಶಕನನ್ನು ಸ್ವಾಗತಿಸಿದ ಸುದೀಪ್, ಓಂ ಪ್ರಕಾಶ್ ರಾವ್ ಅವರದ್ದೇ ಒಂದು ವಿಡಿಯೋ ಹಾಕಿ ತೋರಿಸಿದರು. ಸಿನಿಮಾ ನಿರ್ದೇಶನದ ವೇಳೆ ಓಂ ಪ್ರಕಾಶ್ ಅವರು ಟೆನ್ಷನ್‌ನಲ್ಲಿ ತಲೆ ಕೆರೆದುಕೊಳ್ಳುತ್ತಿದ್ದ ವಿಡಿಯೋ ಅದಾಗಿತ್ತು. ‘ಸಿನಿಮಾ ಶೂಟಿಂಗ್ ಸೀಕ್ವೆನ್ಸ್, ಡೈಲಾಗ್‌ನಲ್ಲಿ ಪ್ರಾಬ್ಲಮ್ ಆದ್ರೆ ಹಾಗೆ ತಲೆ ಕೆರೆದುಕೊಳ್ತೀನಿ. ಆಗ ನನಗೆ ನೆಮ್ಮದಿ’ ಅಂತ ಓಂ ಪ್ರಕಾಶ್ ಸ್ಪಷ್ಟನೆ ನೀಡಿದ್ದಾರೆ.
ದೊಡ್ಮನೆಗೆ ಎಂಟ್ರಿ ವೇಳೆ ಕಿಚ್ಚ ಸುದೀಪ್ ಅವರ ‘ಉಸಿರೇ.. ಉಸಿರೇ..’ ಹಾಡಿಗೆ ಪತ್ನಿ ಜೊತೆ ಓಂ ಪ್ರಕಾಶ್ ಮಸ್ತ್ ಸ್ಟೆಪ್ ಹಾಕಿದರು. ನಿರ್ದೇಶಕನ ಆಗಮನವು ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿಸಿದೆ.
