ಪಾಟ್ನ: ಹೊಸದಾಗಿ ಖರೀದಿಸಿದ ಎಸ್‌ಯುವಿ ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್ (Mahindra Scorpio Classic) ಕಾರನ್ನ ಕಳ್ಳರಿಂದ ರಕ್ಷಿಸಲು ಬಿಹಾರದ ವ್ಯಕ್ತಿ ಮಾಡಿದ ಮಾಸ್ಟರ್ ಪ್ಲ್ಯಾನ್ ಸದ್ಯ ಸೋಷಿಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.
ಹೌದು. ಹೊಸ ಕಾರನ್ನ ಕಳ್ಳರಿಂದ ರಕ್ಷಿಸಲು ಬಿಹಾರದ ವ್ಯಕ್ತಿಯೊಬ್ಬ (Bihar Man) ಕ್ರೇನ್ ಬಳಸಿ ಮನೆಯ 2ನೇ ಮಹಡಿಯ ಮೇಲ್ಛಾವಣಿಗೆ ಏರಿಸಿರುವ ಘಟನೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಬಿಹಾರದ ಗೋಪಾಲಗಂಜ್‌ನ (Gopalganj) ಮನೋಜ್ ಯಾದವ್ ಇತ್ತೀಚೆಗೆ ಮಹೀಂದ್ರಾ ಸ್ಕಾರ್ಪಿಯೊ ಕ್ಲಾಸಿಕ್ ಕಾರನ್ನ ಖರೀದಿಸಿದ್ದರು. ಅವರು ಉದ್ಯೋಗ ನಿಮಿತ್ತ ಇಸ್ರೇಲ್‌ನಲ್ಲಿದ್ದು, ತಮ್ಮ ಕಾರಿನ ಜವಾಬ್ದಾರಿಯನ್ನ ಲಕನಿಗೆ ವಹಿಸಿದ್ದರು. ಆದರೆ ಕೆಲ ಸಮಯದ ಬಳಿಕ ಚಾಲಕ ಕೆಲಸ ತೊರೆದಿದ್ದರಿಂದ ಕಾರಿನ ಸುರಕ್ಷತೆ ಬಗ್ಗೆ ಕುಟುಂಬದವರಿಗೆ ಆತಂಕ ಉಂಟಾಗಿತ್ತು.

ಈ ಹಿನ್ನೆಲೆಯಲ್ಲಿ ಕಾರನ್ನು ಮನೆಯ ಹೊರಗೆ ನಿಲ್ಲಿಸುವ ಬದಲು ಮೇಲ್ಛಾವಣಿಯಲ್ಲೇ ಇರಿಸಲು ಕುಟುಂಬ ನಿರ್ಧರಿಸಿದೆ. ಬಳಿಕ ಕ್ರೇನ್ ತರಿಸಿ ಕಾರನ್ನು ಅದರ ಸಹಾಯದಿಂದ ನಿಧಾನವಾಗಿ ಮೇಲೆತ್ತಿ 2 ಅಂತಸ್ತಿನ ಮನೆಯ ಮೇಲ್ಛಾವಣಿಗೆ ಕೊಂಡೊಯ್ದು ಇಳಿಸಲಾಗಿದೆ. ಈ ದೃಶ್ಯವನ್ನ ಸ್ಥಳೀಯರು ಚಿತ್ರೀಕರಿಸಿದ್ದು, ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.
ವೈರಲ್ ವಿಡಿಯೊದಲ್ಲಿ ಕ್ರೇನ್‌ಗೆ ಕಾರನ್ನು ನೇತುಹಾಕಿ ಮೇಲಕ್ಕೆ ಎತ್ತುತ್ತಿರುವುದು ಹಾಗೂ ಬಳಿಕ ಮನೆಯ ಮೇಲ್ಛಾವಣಿಯಲ್ಲಿ ಎಚ್ಚರಿಕೆಯಿಂದ ಇಳಿಸುತ್ತಿರುವುದು ಕಂಡುಬರುತ್ತದೆ. ಮನೆಯ ಮೇಲ್ಛಾವಣಿಯಲ್ಲಿ ಸ್ಕಾರ್ಪಿಯೊ ಎಂಬ ಈ ದೃಶ್ಯ ಇದೀಗ ಆನ್‌ಲೈನ್‌ನಲ್ಲಿ ಚರ್ಚೆಗೆ ಕಾರಣವಾಗಿದೆ.
