– ನಿನ್ನೆ ಪಿಜಿ ಕಟ್ಟಡ ಕುಸಿದು 7 ಮಂದಿ ಸಾವು
ಬೆಂಗಳೂರು: ದೆಹಲಿ ಸತ್ಯ ನಿಕೇತನದಲ್ಲಿ ಕಟ್ಟಡ ಕುಸಿದು 7 ಮಂದಿ ಮೃತಪಟ್ಟಿರುವ ಪೇಯಿಂಗ್ ಗೆಸ್ಟ್ (PG) ವಸತಿ ಕಟ್ಟಡಕ್ಕೆ ಸಂಬಂಧಿಸಿದ ಬಾಡಿಗೆ ಒಪ್ಪಂದದ ಪ್ರತಿ ಇದೀಗ ಬೆಳಕಿಗೆ ಬಂದಿದೆ. ಈ ಒಪ್ಪಂದದ ಅಡಿಯಲ್ಲಿ ವಿದ್ಯಾರ್ಥಿಗಳು (PG Student) ವಾಸಿಸುತ್ತಿದ್ದ ರೀತಿಯ ಬಗ್ಗೆ ಹಲವು ಪ್ರಶ್ನೆಗಳು ಎದ್ದಿವೆ.
ಒಪ್ಪಂದದ ಪ್ರತಿಯಲ್ಲಿ ʻPG ಆಡಳಿತವು ಬಾಡಿಗೆದಾರರಿಗೆ ಸಂಭವಿಸಬಹುದಾದ ಯಾವುದೇ ಸಾವು-ನೋವು ಅಥವಾ ಅಪಾಯಕ್ಕೆ ಹೊಣೆಗಾರರಾಗಿರುವುದಿಲ್ಲʼ ಎಂಬುದನ್ನು ಸ್ಪಷ್ಟವಾಗಿ ಉಲ್ಲೇಖಿಸಿರುವುದು ಬೆಳಕಿಗೆ ಬಂದಿದೆ. ಹೌದು. ಬಾಡಿಗೆ ಅಗ್ರಿಮೆಂಟ್ನಲ್ಲಿ (PG Rent Agreement) ʻಯಾವುದೇ ಸಾವು-ನೋವು ಅಥವಾ ನನಗೆ ಸಂಭವಿಸುವ ಅಪಾಯಕ್ಕೆ PG ಆಡಳಿತ ಜವಾಬ್ದಾರರಲ್ಲʼ ಎಂದು ಉಲ್ಲೇಖಿಸಲಾಗಿದೆ.

5 ಅಂತಸ್ತಿನ ಕಟ್ಟಡ ಕುಸಿದು, ಅದರಲ್ಲಿ ವಾಸಿಸುತ್ತಿದ್ದ ವಿದ್ಯಾರ್ಥಿಗಳು ಅವಶೇಷಗಳಡಿ ಸಿಲುಕಿದ ಹಿನ್ನೆಲೆಯಲ್ಲಿ ಈ ಷರತ್ತು ಇದೀಗ ಮಹತ್ವ ಪಡೆದುಕೊಂಡಿದೆ. ಕಟ್ಟಡ ಕುಸಿತದ ವೇಳೆ ಹಲವರು ಅವಶೇಷಗಳಡಿ ಸಿಲುಕಿದ್ದರು. ಈವರೆಗೆ 11 ವಿದ್ಯಾರ್ಥಿಗಳನ್ನ ರಕ್ಷಿಸಲಾಗಿದ್ದು, 7 ಮಂದಿ ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ಘೋಷಿಸಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ನ್ಯಾಯ ಸಂಹಿತೆ (BNS)ಯ ಸಂಬಂಧಿತ ಸೆಕ್ಷನ್ಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದ್ದು, ಕಟ್ಟಡ ಮಾಲೀಕ ಹರಿರಾಮ್ನನ್ನೂ ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದೆ.
