ಬೆಳಗಾವಿ: ಲಕ್ಷ್ಮಣ ಸವದಿ(Laxman Savadi) ಅವರಿಗೆ ಸ್ಥಾನಮಾನ ನೀಡಿದ ಬೆನ್ನಲ್ಲೇ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಅವರು ತಮ್ಮ ಮತ್ತೋರ್ವ ಆಪ್ತ ನಾಯಕನಿಗೆ ಮಹತ್ವದ ಹುದ್ದೆ ಕರುಣಿಸಿದ್ದಾರೆ.
ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದ ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಆಸೀಫ್ ಸೇಠ್(Asif Sait) ಅವರಿಗೆ ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ (ಬುಡಾ – BUDA) ಅಧ್ಯಕ್ಷ ಸ್ಥಾನ ನೀಡಲಾಗಿದ್ದು, ಆ ಮೂಲಕ ಅಸಮಾಧಾನ ಶಮನಗೊಳಿಸಿದ್ದಾರೆ.
ಅಲ್ಪಸಂಖ್ಯಾತ ಕೋಟಾದಡಿ ತಮಗೆ ಸಂಪುಟದಲ್ಲಿ ಸಚಿವ ಸ್ಥಾನ ನೀಡಬೇಕೆಂದು ಆಸೀಫ್ ಸೇಠ್ ತೀವ್ರ ಪಟ್ಟುಹಿಡಿದಿದ್ದರು. ಇದಕ್ಕಾಗಿ ನಾಲ್ಕೈದು ಬಾರಿ ದೆಹಲಿಗೆ ತೆರಳಿ ಹೈಕಮಾಂಡ್ ಮಟ್ಟದಲ್ಲೂ ಭಾರಿ ಲಾಬಿ ನಡೆಸಿದ್ದರು. ಇವರ ಬೆಂಬಲಕ್ಕೆ ನಿಂತಿದ್ದ ಕಿತ್ತೂರು ಕರ್ನಾಟಕ ಭಾಗದ ಮುಸ್ಲಿಂ ಧರ್ಮಗುರುಗಳು ಹಾಗೂ ಮುಸ್ಲಿಂ ಸಮಾಜದ ಮುಖಂಡರು ಬೆಳಗಾವಿಯಲ್ಲಿ ಬೃಹತ್ ಸಮಾವೇಶ ನಡೆಸಿ ಸೇಠ್‌ಗೆ ಮಂತ್ರಿ ಸ್ಥಾನ ನೀಡುವಂತೆ ಸರ್ಕಾರವನ್ನು ಆಗ್ರಹಿಸಿದ್ದರು.
ಪ್ರಸ್ತುತ ಸಚಿವ ಸಂಪುಟದಲ್ಲಿ ಸ್ಥಾನ ಹೊಂದಾಣಿಕೆ ಕಷ್ಟವಾದ ಹಿನ್ನೆಲೆಯಲ್ಲಿ, ತಮ್ಮ ಆಪ್ತ ಶಾಸಕರನ್ನು ಸಮಾಧಾನಪಡಿಸಲು ಡಿ.ಕೆ. ಶಿವಕುಮಾರ್ ಅವರು ‘ಬುಡಾ’ ಅಧ್ಯಕ್ಷ ಸ್ಥಾನದ ಸೂತ್ರ ಹೆಣೆದು ಅಸಮಾಧಾನ ತಣಿಸಿದ್ದಾರೆ. ಇದನ್ನೂ ಓದಿ: ರಾತ್ರೋರಾತ್ರಿ ದಿಢೀರ್ ದೆಹಲಿಗೆ ಆಗಮಿಸಿದ ನಾಗೇಂದ್ರ
