– ಕಾಡಾನೆ ಕಳೇಬರ ಪತ್ತೆ; ಎರಡು ದಂತ ಮಾಯ
ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತ (Bandipur Tiger Reserve) ಪ್ರದೇಶದಲ್ಲಿ ವನ್ಯಜೀವಿಗಳ ಸುರಕ್ಷತೆ ಬಗ್ಗೆ ಗಂಭೀರ ಪ್ರಶ್ನೆಗಳು ಎದ್ದಿವೆ. ಮದ್ದೂರು ವನ್ಯಜೀವಿ ವಲಯದಲ್ಲಿ ಕಳ್ಳಬೇಟೆಗಾರರು ಹಾಕಿದ್ದ ಉರುಳಿಗೆ ಸಿಲುಕಿ ಎರಡು ವರ್ಷದ ಹುಲಿ ಮೃತಪಟ್ಟಿದೆ. ಇದೇ ವಲಯದಲ್ಲಿ ಆನೆಯ ಕಳೇಬರವೂ ಪತ್ತೆಯಾಗಿದ್ದು, ಆನೆಯ ಎರಡೂ ದಂತಗಳು ನಾಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಹುಲಿ ಸಾವಿನ ಘಟನೆ ನಡೆದು ವಾರ ಕಳೆದರೂ ಮಾಹಿತಿ ಬಹಿರಂಗವಾಗದಿರುವುದಕ್ಕೆ ಪರಿಸರವಾದಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಕರಣದ ತನಿಖೆಗೆ ಅರಣ್ಯ ಇಲಾಖೆ ವಿಶೇಷ ತಂಡ ರಚಿಸಿದ್ದು, ಗಸ್ತು ವ್ಯವಸ್ಥೆಯಲ್ಲೂ ಲೋಪವಾಗಿದೆಯೇ ಎಂಬುದರ ಪರಿಶೀಲನೆ ಆರಂಭಿಸಿದೆ. ಇದನ್ನೂ ಓದಿ: ಶಿವಮೊಗ್ಗ | ಆನ್ಲೈನ್ ಹೂಡಿಕೆ ಜಾಹೀರಾತು ನಂಬಿ 1.20 ಕೋಟಿ ಕಳೆದುಕೊಂಡ ಉದ್ಯಮಿ
ಇದು ಬಂಡೀಪುರದ ಕಾಡಿನಲ್ಲಿ ವನ್ಯಜೀವಿಗಳ ಸುರಕ್ಷತೆಯನ್ನೇ ಪ್ರಶ್ನಿಸುವ ಬೆಳವಣಿಗೆಯಾಗಿದೆ. ಬಂಡೀಪುರ ಹುಲಿ ಸಂರಕ್ಷಿತಾರಣ್ಯದ ಮದ್ದೂರು ವನ್ಯಜೀವಿ ವಲಯದ ಹೊಂಗಳ್ಳಿ ಬೀಟ್ನಲ್ಲಿ ಕಳ್ಳಬೇಟೆಗಾರರು ಹಾಕಿದ್ದ ಉರುಳಿಗೆ ಸಿಲುಕಿ ಸುಮಾರು ಎರಡು ವರ್ಷದ ಹುಲಿ ಮೃತಪಟ್ಟಿದೆ. ಒಂದು ವಾರದ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ. ಇದೇ ಮದ್ದೂರು ವಲಯದ ಕರಡಿಕಲ್ಲು ಗುಡ್ಡದಲ್ಲಿ ಮತ್ತೊಂದು ಆತಂಕಕಾರಿ ಪ್ರಕರಣ ಬೆಳಕಿಗೆ ಬಂದಿದೆ. ಆನೆಯ ಕಳೇಬರ ಪತ್ತೆಯಾಗಿದೆ. ಹುಲಿ ಹಾಗೂ ಆನೆ ಮೃತದೇಹಗಳು ಕೊಳತ ಸ್ಥಿತಿಯಲ್ಲಿ ಪತ್ತೆಯಾಗಿವೆ. ಆನೆಯ ಎರಡೂ ದಂತಗಳು ನಾಪತ್ತೆಯಾಗಿವೆ.
ಆನೆಯ ದಂತಗಳು ಹೇಗೆ ನಾಪತ್ತೆಯಾದವು? ಕಾಡಿನೊಳಗೆ ಆನೆ ಮೃತಪಟ್ಟ ಬಳಿಕ ದಂತಗಳನ್ನು ಯಾರಾದರೂ ಕದ್ದೊಯ್ದರೇ? ಅಥವಾ ಕಳೇಬರ ಪತ್ತೆಯಾಗುವ ಮೊದಲೇ ಕಳ್ಳಬೇಟೆ ನಡೆದಿತ್ತೇ? ಈ ಪ್ರಶ್ನೆಗಳು ಸಹಜವಾಗಿಯೇ ಕೇಳಿಬರುತ್ತಿವೆ. ಹುಲಿ ಉರುಳಿಗೆ ಸಿಲುಕಿ ಮೃತಪಟ್ಟಿರುವುದು, ಮತ್ತೊಂದೆಡೆ ಆನೆಯ ಎರಡೂ ದಂತಗಳು ನಾಪತ್ತೆಯಾಗಿರುವ ಘಟನೆಗಳು ಕಾಡಿನಲ್ಲಿ ಕಳ್ಳಬೇಟೆಗಾರರ ಚಟುವಟಿಕೆಗಳ ಬಗ್ಗೆ ಅನುಮಾನ ಮೂಡಿಸಿವೆ. ಇದನ್ನೂ ಓದಿ: ವರದಕ್ಷಿಣೆ ಕಿರುಕುಳ ಆರೋಪ; ಇಬ್ಬರು ಮಕ್ಕಳನ್ನು ಕಾಲುವೆಗೆ ಎಸೆದು ತಾಯಿ ಆತ್ಮಹತ್ಯೆ
ವನ್ಯಜೀವಿಗಳ ಅಸಹಜ ಸಾವಿನ ಬಗ್ಗೆ ಗೌಪ್ಯತೆ ಕಾಪಾಡಿಕೊಂಡಿರುವ ಬಗ್ಗೆ ಸಮರ್ಥನೆ ಮಾಡಿಕೊಂಡಿರುವ ಬಂಡೀಪುರ ಅರಣ್ಯಾಧಿಕಾರಿಗಳು ಕಳ್ಳಬೇಟೆಗಾರರು ಎಚ್ಚೆತ್ತುಕೊಳ್ಳುವ ಸಾಧ್ಯತೆ ಇರುವ ಕಾರಣ ಮಾಹಿತಿ ಬಹಿರಂಗಪಡಿಸಿರಲಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಉರುಳಿಗೆ ಸಿಲುಕಿ ಹುಲಿ ಸಾವನ್ನಪ್ಪಿರುವ ಬಗ್ಗೆ ತನಿಖೆ ನಡೆಸಿ ವರದಿ ನೀಡಲು ಎಸಿಎಫ್ ನೇತೃತ್ವದಲ್ಲಿ ತಂಡ ರಚಿಸಲಾಗಿದ್ದು ಎಲ್ಲಾ ಆಯಾಮಗಳಲ್ಲು ತನಿಖೆ ನಡೆಸಲು ಸೂಚಿಸಲಾಗಿದೆ. ಆನೆ ಸಾವು ಹಾಗು ದಂತ ನಾಪತ್ತೆಯಾಗಿರುವ ಬಗ್ಗೆಯು ಮಾಹಿತಿ ಕಲೆ ಹಾಕಲಾಗುತ್ತಿದೆ. ಮೃತ ಆನೆಯ ಮೂಳೆಗಳನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು ಆನೆ ಕೊಂದು ದಂತ ಅಪಹರಿಸಲಾಗಿದೆಯಾ? ಅಥವಾ ಸಹಜವಾಗಿ ಮೃತಪಟ್ಟ ಆನೆಯ ದಂತ ಅಪಹರಿಸಲಾಗಿದೆಯಾ? ಎಂಬುದು ತಿಳಿದುಬರಲಿದೆ ಎಂದು ಅವರ ಅಧಿಕಾರಿಗಳು ಹೇಳುತ್ತಿದ್ದಾರೆ.

