ಚಂಡೀಗಢ: ಡ್ರಗ್ಸ್ ವಿರೋಧಿ ಹೋರಾಟಗಾರ ಪರವಿಂದರ್ ಸಿಂಗ್ ಝೋಟಾ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಅಶ್ವನಿ ಕುಮಾರ್ನನ್ನು ಪೊಲೀಸರು ಬಂಧಿಸಿದ್ದಾರೆ.
ರಾಜಸ್ಥಾನದ ಸಾಲಾಸರ್ನಲ್ಲಿ ಆರೋಪಿಯನ್ನು ಬಂಧಿಸಲಾಗಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.
ಪಂಜಾಬ್ನ ಮಾನ್ಸಾದಲ್ಲಿ ಅಕ್ಟೋಬರ್ 13ರಂದು ಈ ಹತ್ಯೆ ನಡೆದಿತ್ತು. ಮೆಡಿಕಲ್ ಸ್ಟೋರ್ನಲ್ಲಿ ನಿಷೇಧಿತ ಔಷಧಿಗಳ ಅಕ್ರಮ ಮಾರಾಟದ ವಿಚಾರವಾಗಿ ಪರವಿಂದರ್ ಸಿಂಗ್ ಝೋಟಾ ಮತ್ತು ಮೆಡಿಕಲ್ ಸ್ಟೋರ್ ಮಾಲೀಕ ಅಶ್ವನಿ ಕುಮಾರ್ ನಡುವೆ ವಾಗ್ವಾದ ನಡೆದಿತ್ತು ಎನ್ನಲಾಗಿದೆ. ಈ ವೇಳೆ ನಡೆದ ಗುಂಡಿನ ದಾಳಿಯಲ್ಲಿ ಝೋಟಾ ಮೃತಪಟ್ಟಿದ್ದರು.
ಘಟನೆಯ ಬಳಿಕ ಅಶ್ವನಿ ಕುಮಾರ್ ಸ್ಥಳದಿಂದ ಪರಾರಿಯಾಗಿದ್ದ. ಆರೋಪಿಗೆ ಪರಾರಿಯಾಗಲು ಸಹಾಯ ಮಾಡಿದ ಆರೋಪದ ಮೇಲೆ ಆತನ ಸೋದರಸಂಬಂಧಿ ವಿಪಿನ್ನನ್ನು ಪೊಲೀಸರು ಬಂಧಿಸಿದ್ದರು. ಆದರೆ, ಅಶ್ವನಿ ತಲೆಮರೆಸಿಕೊಂಡಿದ್ದರಿಂದ ಆತನ ಬಂಧನಕ್ಕಾಗಿ ಹಲವು ಪೊಲೀಸ್ ತಂಡಗಳನ್ನು ರಚಿಸಲಾಗಿತ್ತು. ಇದೀಗ ರಾಜಸ್ಥಾನದ ಸಾಲಾಸರ್ನಲ್ಲಿ ಆತನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ಅಂಜನಾದ್ರಿ ಬೆಟ್ಟದಿಂದ ಮುಜರಾಯಿ ಇಲಾಖೆಯ ಸಿಬ್ಬಂದಿ ಹೊರಕ್ಕೆ – ಎಲ್ಲ ಕಚೇರಿಗಳಿಗೆ ಬೀಗ ಜಡಿದ ವಿದ್ಯಾದಾಸ್ ಬಾಬಾ
ಪರವಿಂದರ್ ಸಿಂಗ್ ಝೋಟಾ ಹತ್ಯೆ ಪ್ರಕರಣದಲ್ಲಿ ನ್ಯಾಯ ಸಿಗುವವರೆಗೆ ಹಾಗೂ ಪ್ರಮುಖ ಆರೋಪಿಯನ್ನು ಬಂಧಿಸುವವರೆಗೆ ಅಂತ್ಯಕ್ರಿಯೆ ನಡೆಸುವುದಿಲ್ಲ ಎಂದು ಪ್ರತಿಭಟನಾಕಾರರು ಘೋಷಿಸಿದ್ದರು. ಹತ್ಯೆಯನ್ನು ಖಂಡಿಸಿ ಅಕ್ಟೋಬರ್ 15ರಂದು ಪಂಜಾಬ್ ಬಂದ್ಗೂ ಕರೆ ನೀಡಲಾಗಿತ್ತು.ಇದನ್ನೂ ಓದಿ: ವರದಕ್ಷಿಣೆ ಕಿರುಕುಳ ಆರೋಪ; ಇಬ್ಬರು ಮಕ್ಕಳನ್ನು ಕಾಲುವೆಗೆ ಎಸೆದು ತಾಯಿ ಆತ್ಮಹತ್ಯೆ
ಹತ್ಯೆಯ ಸುದ್ದಿ ತಿಳಿಯುತ್ತಿದ್ದಂತೆ ಮಾನ್ಸಾ ಪಟ್ಟಣದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಸ್ಥಳೀಯರು ಹಾಗೂ ಝೋಟಾ ಬೆಂಬಲಿಗರು ಆರೋಪಿಗೆ ಸೇರಿದ ಮೆಡಿಕಲ್ ಶಾಪ್ ಅನ್ನು ಧ್ವಂಸಗೊಳಿಸಿದ್ದಾರೆ. ಇದರ ಬೆನ್ನಲ್ಲೇ ಸ್ಥಳೀಯ ಆಡಳಿತವು ಅಕ್ರಮ ನಿರ್ಮಾಣದ ಕಾರಣವನ್ನು ಉಲ್ಲೇಖಿಸಿ ಆರೋಪಿಯ ಅಂಗಡಿ ಮತ್ತು ಮನೆಯ ಕೆಲವು ಭಾಗಗಳನ್ನು ಬುಲ್ಡೋಜರ್ ಮೂಲಕ ನೆಲಸಮಗೊಳಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.

