ಶಿವಮೊಗ್ಗ: ಇನ್ಸ್ಟಾಗ್ರಾಮ್ ಮತ್ತು ಯೂಟ್ಯೂಬ್ನಲ್ಲಿ ಬಂದ ಆನ್ಲೈನ್ ಹೂಡಿಕೆ ಜಾಹೀರಾತು ನಂಬಿ, ಹೆಚ್ಚಿನ ಲಾಭದ ಆಸೆಗೆ ಬಿದ್ದ ಶಿವಮೊಗ್ಗದ ಉದ್ಯಮಿಯೊಬ್ಬರು (Scam) ಬರೋಬ್ಬರಿ 1.20 ಕೋಟಿ ರೂ. ಕಳೆದುಕೊಂಡಿದ್ದಾರೆ. ಈ ಸಂಬಂಧ ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
2024ರ ಏಪ್ರಿಲ್ನಲ್ಲಿ ಉದ್ಯಮಿ ಇನ್ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ವೀಕ್ಷಿಸುತ್ತಿದ್ದಾಗ ಕಂಪನಿಯೊಂದರ ಹೆಸರಿನಲ್ಲಿ ಪ್ರಕಟವಾಗಿದ್ದ ಹೂಡಿಕೆ ಜಾಹೀರಾತು ಗಮನಿಸಿದ್ದರು. ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದರೆ ದೊಡ್ಡ ಮೊತ್ತದ ಲಾಭ ಸಿಗಲಿದೆ ಎಂದು ಜಾಹೀರಾತಿನಲ್ಲಿ ಹೇಳಲಾಗಿತ್ತು. ಇದನ್ನು ನಂಬಿದ ಉದ್ಯಮಿ, ಜಾಹೀರಾತಿನಲ್ಲಿದ್ದ ಲಿಂಕ್ ಕ್ಲಿಕ್ ಮಾಡಿ ತಮ್ಮ ಹೆಸರು ಮತ್ತು ಮೊಬೈಲ್ ಸಂಖ್ಯೆ ನೀಡಿ ಐಡಿ ಹಾಗೂ ಪಾಸ್ವರ್ಡ್ ಸೃಷ್ಟಿಸಿಕೊಂಡಿದ್ದರು.
ವಂಚಕರು ನೀಡಿದ್ದ ಯುಪಿಐ ಐಡಿ, ಕ್ಯೂಆರ್ ಕೋಡ್ ಹಾಗೂ ಬ್ಯಾಂಕ್ ಖಾತೆಗಳ ಮೂಲಕ ಉದ್ಯಮಿ ಹಣ ವರ್ಗಾಯಿಸಲು ಆರಂಭಿಸಿದ್ದರು. ಹಣ ಹೂಡಿಕೆ ಮಾಡಿದ ಬಳಿಕ ಆ್ಯಪ್ನಲ್ಲಿ ಹೂಡಿಕೆ ಮಾಡಿದ ಮೊತ್ತದ ಜೊತೆಗೆ ಲಾಭಾಂಶವೂ ಕಾಣಿಸುತ್ತಿತ್ತು. ಇದನ್ನು ನಿಜವಾದ ಲಾಭವೆಂದು ನಂಬಿದ ಉದ್ಯಮಿ ಮತ್ತಷ್ಟು ಹಣ ಹೂಡಿಕೆ ಮಾಡಿದ್ದರು.
2024ರ ಏಪ್ರಿಲ್ 1ರಿಂದ 2025ರ ಆಗಸ್ಟ್ 3ರವರೆಗೆ ತಮ್ಮ ಮತ್ತು ಸ್ನೇಹಿತರ ಬ್ಯಾಂಕ್ ಖಾತೆಗಳಿಂದ ಹಂತ ಹಂತವಾಗಿ ಒಟ್ಟು 1,20,08,500 ರೂ. ವರ್ಗಾಯಿಸಿದ್ದಾರೆ. ಇದನ್ನೂ ಓದಿ: ಪಂಜಾಬ್ನಲ್ಲಿ ಡ್ರಗ್ಸ್ ವಿರೋಧಿ ಹೋರಾಟಗಾರನ ಹತ್ಯೆ; ಆರೋಪಿ ಅರೆಸ್ಟ್, ಅಂಗಡಿ ನೆಲಸಮ
ಆ್ಯಪ್ನಲ್ಲಿ ಕಾಣಿಸುತ್ತಿದ್ದ ಹಣ ಮತ್ತು ಲಾಭಾಂಶವನ್ನು ತಮ್ಮ ಬ್ಯಾಂಕ್ ಖಾತೆಗೆ ಹಿಂಪಡೆಯಲು ಉದ್ಯಮಿ ಪ್ರಯತ್ನಿಸಿದಾಗ ಅವಕಾಶ ನೀಡಲಾಗಿಲ್ಲ. ಬಳಿಕ ಅವರ ಐಡಿಯನ್ನೇ ಬ್ಲಾಕ್ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ತಾನು ವಂಚನೆಗೆ ಒಳಗಾಗಿರುವುದನ್ನು ಅರಿತ ಉದ್ಯಮಿ ತಡವಾಗಿ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಸಂಬಂಧ ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಇದನ್ನೂ ಓದಿ: ಚೆನ್ನಾಗಿ ಆಡಿದವರನ್ನೇ ಕ್ಯಾಪ್ಟನ್ಸಿ ಓಟದಿಂದ ತೆಗೆಯೋದು ಸರಿಯಲ್ಲ – ಆಸಿಯಾ ಪರ ನಿಂತ ಸ್ಯಾಂಡಿ

