– ಅವ್ರು ಮಹಿಳಾ ಆಯೋಗ ಅಂತಾರೆ, ನಾನು ಪುರುಷ ಆಯೋಗಕ್ಕೆ ಹೋಗಬೇಕು ಅಷ್ಟೇ!
– ʻಪಬ್ಲಿಕ್ ಟಿವಿʼ ಜೊತೆಗೆ ಬಿಗ್ ಬಾಸ್ನಿಂದ ಕಿಕ್ಔಟ್ ಆದ ಮಂಜು ಮಾತು
ಕಳೆದ ವಾರವಷ್ಟೇ ಬಿಗ್ಬಾಸ್ ಮನೆಯಿಂದ ದಿಢೀರ್ ಕಿಕ್ಔಟ್ ಆಗಿದ್ದ ಮಾಡರ್ನ್ ಮಹಾಕವಿ ಮಂಜ (Modern Mahakavi Manja), ಇದೇ ಮೊದಲ ಬಾರಿಗೆ ʻಪಬ್ಲಿಕ್ ಟಿವಿʼ ಜೊತೆಗೆ ಮಾತನಾಡಿದ್ದಾರೆ. ಸಹ ಸ್ಪರ್ಧಿಗಳ ವಿರುದ್ಧ ಅನುಚಿತ ಪದ ಬಳಕೆ ಮಾಡಿದ ಆರೋಪದ ಹಿನ್ನೆಲೆ ದೊಡ್ಮನೆ ತಂಡ ಮಂಜು ಅವರನ್ನ ಮನೆಯಿಂದ ಹೊರಗೆ ಹಾಕಿತ್ತು. ಇದೀಗ ಮನೆಯಿಂದ ಹೊರಬಂದ ಬಳಿಕ ತಮ್ಮ ನಡೆ, ಮಾತು ಹಾಗೂ ಸ್ಪರ್ಧಿಗಳ ವರ್ತನೆ ಬಗ್ಗೆ ಮಂಜು ಹಲವು ವಿಚಾರಗಳನ್ನ ಹಂಚಿಕೊಂಡಿದ್ದಾರೆ.
ಬಿಗ್ಬಾಸ್ (Bigg Boss Kannada) ಮನೆಯಿಂದ ಹೊರಬಂದಿದ್ದಕ್ಕೆ ಬೇಸರವಿದೆ. ಆದರೆ, ಜೀವನ ಇಲ್ಲಿಗೇ ನಿಂತಿಲ್ಲ ಅಂತ ಮಂಜು ಹೇಳಿದ್ದಾರೆ. ನಾವು ತಪ್ಪು ಮಾಡಿದಾಗ ಎಲ್ಲರೂ ಬಂದು ಬೈದು ಹೇಳುತ್ತಾರೆ. ಆದರೆ, ನನ್ನ ಎದುರಿರುವವರು ಹೇಗೆ ನಡೆದುಕೊಳ್ಳುತ್ತಾರೆ ಎಂಬುದರ ಮೇಲೆ ನನ್ನ ಪ್ರತಿಕ್ರಿಯೆ ಇರುತ್ತದೆ ಎಂದು ತಮ್ಮ ಮಾತುಗಳನ್ನ ಸಮರ್ಥಿಸಿಕೊಂಡಿದ್ದಾರೆ.

ವಿಶೇಷವಾಗಿ ಸಹ ಸ್ಪರ್ಧಿ ಸೌಂದರ್ಯ ಅವರ ವರ್ತನೆಯ ಬಗ್ಗೆ ಮಾತನಾಡಿರುವ ಮಂಜು, ಸೌಂದರ್ಯ (Soundarya Shetty) ಇಂಗ್ಲಿಷ್ನಲ್ಲಿ ಕಚಪಿಚ ಮಾತನಾಡುತ್ತಿದ್ದರು. ಅವರ ವರ್ತನೆಗೆ ತಕ್ಕಂತೆ ತಾನು ಪ್ರತಿಕ್ರಿಯಿಸಿದ್ದೇನೆ. ಸೌಂದರ್ಯ ನನ್ನ ತುಂಬಾ ಟ್ರಿಗರ್ ಮಾಡ್ತಾರೆ. ಆ ಆಟದ ಸಂದರ್ಭದಲ್ಲೇ ನಾನು ಮಾತನಾಡಿದ್ದು, ಕ್ಯಾಮೆರಾ ಅಂತಾ ನಾನು ಸುಮ್ಮನೆ ನಟಿಸೋಕೆ ಹೋಗಿಲ್ಲ ಅಂತಾ ಹೇಳಿದ್ರು.
ಮುಂದುವರಿದು… ಅಲ್ಲಾ ಹೆಣ್ಮಕ್ಕಳೆಲ್ಲ ಮಂಜ ಹಾಗ್ ಮಾತಾಡಿದ, ಹೀಗ್ ಮಾತಾಡಿದ ಅಂತಾ ಹೇಳ್ತೀರಲ್ಲ… ಅವರು ಕೂಡ ನನ್ನನ್ನ ಎಷ್ಟು ಅವಮಾನ ಮಾಡಿದ್ದಾರೆ ಗೊತ್ತಾ? ಅಲ್ಲಿ ಮಹಿಳೆಯರಲ್ಲ ವುಮೆನ್ಸ್ ಕಾರ್ಡ್ ಪ್ಲೇ ಮಾಡಿದ್ದಾರೆ. ನಾನು ಆಟದಲ್ಲಿ ತೊಡೆ ತಟ್ಟಿದ್ದು ಅಷ್ಟೇ. ಆಟಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ಧಳಿದ್ದೆ. ಕಾಮ ಪಿಶಾಚಿ, ಕಾರ್ನರ್ ಸೀಟ್ ಅಂತ ಹೇಳಿದ್ದೆಲ್ಲ ಸಾಮಾನ್ಯವಾಗಿ ಹೇಳಿದ ಮಾತುಗಳು. ಆದರೆ, ಅವರೇ ಅದನ್ನೇ ಮತ್ತೆ ಮತ್ತೆ ಒತ್ತಿ ಹೇಳುತ್ತಿದ್ದರು ಎಂದಿದ್ದಾರೆ.

ಇನ್ನೂ ದೊಡ್ಮನೆಯಲ್ಲಿ ತನ್ನ ವರ್ತನೆ ಬಗ್ಗೆಯೂ ಮಾತನಾಡಿದ ಮಂಜ, ಈಗ ನನಗಿರುವ ತಾಳ್ಮೆ ಅಲ್ಲಿ ಇರಬೇಕಿತ್ತು. ಅದು ನಿಜ. ನಾನೂ ಮನುಷ್ಯನಲ್ಲವೇ? ಅಲ್ಲದೇ, ಎಲ್ಲರೂ ಮಹಿಳಾ ಆಯೋಗ, ಮಹಿಳಾ ಆಯೋಗ ಅಂತಾರೆ. ನಾನು ಪುರುಷ ಆಯೋಗಕ್ಕೆ ಹೋಗಬೇಕು ಅಷ್ಟೇ ಎಂದು ವ್ಯಂಗ್ಯ ಮಾಡಿದ್ದಾರೆ.

