ತಿರುವನಂತಪುರ: ಕೇರಳ ವಿಧಾನಸಭೆಯ ಅಧಿವೇಶನವು (Kerala Assembly Session) ಗುರುವಾರ(ಮೇ 21) ಆರಂಭಗೊಂಡಿದ್ದು, ನೂತನ ಶಾಸಕರ ಪ್ರಮಾಣ ವಚನ ಸ್ವೀಕಾರ ಸಮಾರಂಭ ಜರುಗಿತು. ಈ ವೇಳೆ ಗಡಿಭಾಗವಾದ ಕಾಸರಗೋಡು ಜಿಲ್ಲೆಯ ಮಂಜೇಶ್ವರ ಕ್ಷೇತ್ರದ ಶಾಸಕ (Manjeshwar MLA) ಎ.ಕೆ.ಎಂ. ಅಶ್ರಫ್ (A.K.M. Ashraf) ಅವರು ಕನ್ನಡ(Kannada) ಭಾಷೆಯಲ್ಲೇ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಇಡೀ ಸಭೆಯ ಗಮನ ಸೆಳೆದಿದ್ದಾರೆ ಮತ್ತು ಕನ್ನಡಿಗರ ಮನ ಗೆದ್ದಿದ್ದಾರೆ.
ಹದಿನಾರನೇ ಕೇರಳ ವಿಧಾನಸಭೆಯ ಸದಸ್ಯರಾಗಿ ಅಧಿಕಾರ ವಹಿಸಿಕೊಂಡ ಯುಡಿಎಫ್ (UDF) ಮೈತ್ರಿಕೂಟದ ಶಾಸಕ ಅಶ್ರಫ್ ತಮ್ಮ ಪ್ರಮಾಣ ವಚನದ ವೀಡಿಯೊವನ್ನು ಅಧಿಕೃತ ಫೇಸ್‌ಬುಕ್ ಪುಟದಲ್ಲಿ ಹೆಮ್ಮೆಯಿಂದ ಹಂಚಿಕೊಂಡಿದ್ದಾರೆ.
ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಸಂದೇಶ ಬರೆದಿರುವ ಎ.ಕೆ.ಎಂ. ಅಶ್ರಫ್, “ಜನಪರ ಕಾಳಜಿ ಮತ್ತು ಜನರ ನಿರೀಕ್ಷೆಗಳ ಸಾಕ್ಷಾತ್ಕಾರದ ಸಂಕಲ್ಪದೊಂದಿಗೆ, ಭಾರತ ಸಂವಿಧಾನದ ಉದಾತ್ತ ಮೌಲ್ಯಗಳನ್ನು ಎತ್ತಿಹಿಡಿದು, ಇಂದು ಹದಿನಾರನೇ ಕೇರಳ ವಿಧಾನಸಭೆಯ ಸದಸ್ಯನಾಗಿ ಪ್ರಮಾಣ ವಚನ ಸ್ವೀಕರಿಸಿ ಅಧಿಕಾರ ವಹಿಸಿಕೊಂಡಿದ್ದೇನೆ” ಎಂದು ತಿಳಿಸಿದ್ದಾರೆ.
ತಮ್ಮ ಗೆಲುವಿಗೆ ಕಾರಣರಾದ ಮತದಾರರನ್ನು ಸ್ಮರಿಸಿದ ಅವರು, “ನನ್ನ ಮೇಲೆ ಅಪಾರ ವಿಶ್ವಾಸವಿಟ್ಟು ಈ ಮಹತ್ತರ ಜವಾಬ್ದಾರಿಯನ್ನು ನೀಡಿದ ನನ್ನ ಮಂಜೇಶ್ವರ ಕ್ಷೇತ್ರದ ಪ್ರೀತಿಯ ಜನತೆಗೆ ಹಾಗೂ ಮತದಾರರಿಗೆ ಹೃತ್ಪೂರ್ವಕ ಕೃತಜ್ಞತೆಗಳು. ನಾಡಿನ ಸರ್ವತೋಮುಖ ಅಭಿವೃದ್ಧಿ ಮತ್ತು ಜನರ ಒಳಿತಿನ ವಿಷಯದಲ್ಲಿ ನಾನು ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳುವುದಿಲ್ಲ. ಸದಾ ನಿಮ್ಮ ಸೇವಕನಾಗಿ ನಿಮ್ಮೊಂದಿಗೇ ಜೊತೆಯಾಗಿರುತ್ತೇನೆ. ನಿಮ್ಮೆಲ್ಲರ ಪ್ರೀತಿ, ಆಶೀರ್ವಾದ, ಬೆಂಬಲ ಮತ್ತು ಪ್ರಾರ್ಥನೆಗಳು ಸದಾ ನನ್ನ ಮೇಲಿರಲಿ” ಎಂದು ವಿನಂತಿಸಿಕೊಂಡಿದ್ದಾರೆ.
ಕೇರಳದ ಗಡಿಭಾಗವಾದ ಕಾಸರಗೋಡು ಮತ್ತು ಮಂಜೇಶ್ವರದ ಸುತ್ತಮುತ್ತ ಭಾರಿ ಸಂಖ್ಯೆಯಲ್ಲಿ ಕನ್ನಡ ಮಾತನಾಡುವ ಜನರು ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿದ್ದಾರೆ. ಕೇರಳ ವಿಧಾನಸಭೆಯಂತಹ ಉನ್ನತ ವೇದಿಕೆಯಲ್ಲಿ ಮಲಯಾಳಂ ಭಾಷೆಯ ಮಧ್ಯೆಯೂ ತಮ್ಮ ಮಾತೃಭಾಷೆ ಹಾಗೂ ಗಡಿಭಾಗದ ಜನರ ಭಾಷೆಯಾದ ಕನ್ನಡದಲ್ಲೇ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಅಶ್ರಫ್ ಅವರು ಗಡಿನಾಡ ಕನ್ನಡಿಗರ ಅಸ್ಮಿತೆಯನ್ನು ಎತ್ತಿಹಿಡಿದಿದ್ದಾರೆ. ಶಾಸಕರ ಈ ನಡೆಗೆ ಕರ್ನಾಟಕ ಹಾಗೂ ಕೇರಳದ ಗಡಿಭಾಗದಾದ್ಯಂತ ವ್ಯಾಪಕ ಶ್ಲಾಘನೆ ವ್ಯಕ್ತವಾಗುತ್ತಿದೆ.
ಮಂಜೇಶ್ವರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (IUML) ಅಭ್ಯರ್ಥಿ ಎ.ಕೆ.ಎಂ. ಅಶ್ರಫ್ ತಮ್ಮ ಪ್ರತಿಸ್ಪರ್ಧಿ ಬಿಜೆಪಿಯ ಕೆ. ಸುರೇಂದ್ರನ್ ಅವರನ್ನು 29,252 ಮತಗಳ ಭಾರಿ ಅಂತರದಿಂದ ಸೋಲಿಸಿ ಕ್ಷೇತ್ರವನ್ನು ಉಳಿಸಿಕೊಂಡಿದ್ದರು. ಎ.ಕೆ.ಎಂ. ಅಶ್ರಫ್ 96,948 ಮತಗಳನ್ನು ಪಡೆದರೆ ಕೆ. ಸುರೇಂದ್ರನ್ 67,696 ಮತ ಪಡೆದಿದ್ದರು. ಸಿಪಿಎಂ ಅಭ್ಯರ್ಥಿ ಕೆ.ಆರ್. ಜಯಾನಂದ 21,212 ಮತ ಗಳಿಸಿದ್ದರು.

