– ಮ್ಯಾಜಿಕ್ 6.. ಲೆಕ್ಕಾಚಾರ ಏನು?
ನವದೆಹಲಿ: ಇಂದಿನಿಂದ ಕದನ ಕುತೂಹಲಕಾರಿ ವಿಶೇಷ ಅಧಿವೇಶನ ಆರಂಭವಾಗಲಿದೆ. ಇಡೀ ದೇಶದ ಚಿತ್ತ ಸೋಮವಾರದಿಂದ ಆರಂಭವಾಗುವ 4 ದಿನದ ವಿಶೇಷ ಅಧಿವೇಶನ ಮೇಲೆ ನೆಟ್ಟಿದೆ. ದೇಶದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿರುವ ಕ್ಷೇತ್ರ ಮರುವಿಂಗಡಣೆ ಮಸೂದೆಯನ್ನು (Delimitation Bill) ಅಧಿವೇಶನದಲ್ಲಿ ಕೇಂದ್ರ ಸರ್ಕಾರ ಮಂಡಿಸಲಿದೆ.
ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಸಂವಿಧಾನ ತಿದ್ದುಪಡಿ ಮಸೂದೆಯನ್ನು ಪರಿಗಣನೆ ಮತ್ತು ಅಂಗೀಕಾರಕ್ಕಾಗಿ 2026 ರ ಡಿಲಿಮಿಟೇಶನ್ (ಎರಡನೇ) ಮಸೂದೆಯನ್ನು ಮಂಡಿಸಲಿದ್ದಾರೆ. ಇದನ್ನೂ ಓದಿ: ಕ್ಷೇತ್ರ ಪುನರ್ವಿಂಗಡಣೆ ಜಾರಿಗೆ ಬಂದರೆ ದೇಶದಲ್ಲಿ ಪ್ರಜಾಪ್ರಭುತ್ವ ಸತ್ತಂತೆ: ರಾಹುಲ್ ಗಾಂಧಿ
ಏನಿದು ಮಸೂದೆ?
ಎಲ್ಲಾ ರಾಜ್ಯಗಳ ಲೋಕಸಭಾ ಸ್ಥಾನಗಳಲ್ಲಿ ಶೇಕಡಾ 50ರಷ್ಟು ಹೆಚ್ಚಳ, ಜೊತೆಗೆ 1971ರ ಜನಗಣತಿಯ ಆಧಾರದ ಮೇಲೆ ಅಸ್ತಿತ್ವದಲ್ಲಿರುವ ಅಂತಾರಾಜ್ಯ ಕ್ಷೇತ್ರಗಳ ಅನುಪಾತವನ್ನು ಹಾಗೆಯೇ ಉಳಿಸಿಕೊಳ್ಳುವುದನ್ನು ಈ ಮಸೂದೆ ಪ್ರಸ್ತಾಪಿಸುತ್ತದೆ. ಈ ಮಸೂದೆಯು ಲೋಕಸಭೆಯ ಸದಸ್ಯ ಬಲವನ್ನು 850ಕ್ಕೆ ಏರಿಸಲು ಮತ್ತು ರಾಜ್ಯ ವಿಧಾನಸಭೆಗಳ ಗರಿಷ್ಠ ಮಿತಿಯನ್ನು 500ರಿಂದ 650 ಸ್ಥಾನಗಳಿಗೆ ಹೆಚ್ಚಿಸಲು ಸಂವಿಧಾನದ 170ನೇ ವಿಧಿಗೆ ತಿದ್ದುಪಡಿ ತರಲಿದೆ.
ಕರ್ನಾಟಕದಲ್ಲಿ ಎಷ್ಟು ಹೆಚ್ಚಳ?
ಕ್ಷೇತ್ರ ಮರುವಿಂಗಡಣೆ ಮಸೂದೆ ಅಂಗೀಕಾರವಾದರೆ 2011ರ ಜನಗಣತಿ ಆಧರಿಸಿ ರಾಜ್ಯಗಳಲ್ಲಿ ಶೇ.50 ರಷ್ಟು ಸಂಸತ್ ಕ್ಷೇತ್ರಗಳು ಹೆಚ್ಚಲಿವೆ. 6.10 ಕೋಟಿ ಜನಸಂಖ್ಯೆ ಹೊಂದಿರುವ ಕರ್ನಾಟಕದಲ್ಲಿ ಪ್ರಸ್ತುತ ಇರುವ 28 ಕ್ಷೇತ್ರಗಳ ಸಂಖ್ಯೆ 42ಕ್ಕೆ ಏರಲಿದೆ. ಅಂದರೆ, 14 ಕ್ಷೇತ್ರಗಳು ಹೆಚ್ಚಳ ಆಗಲಿವೆ.
ಏಪ್ರಿಲ್ನಲ್ಲಿ ಹಿನ್ನಡೆ
ಕ್ಷೇತ್ರ ಮರುವಿಂಗಡಣೆ ಮಸೂದೆಗೆ ಏಪ್ರಿಲ್ನಲ್ಲಿ ಹಿನ್ನಡೆಯಾಗಿತ್ತು. ಬಹುಮತಕ್ಕೆ 54 ಮತಗಳ ಕೊರತೆಯಿಂದಾಗಿ ಸರ್ಕಾರವು ಮೊದಲ ಬಾರಿಗೆ ಮಸೂದೆಯನ್ನು ಅಂಗೀಕರಿಸುವಲ್ಲಿ ಸೋಲು ಕಂಡಿತ್ತು. ಈ ಹಿನ್ನೆಲೆ ಕೆಲ ಬದಲಾವಣೆಯೊಂದಿಗೆ ಹೊಸ ಮಸೂದೆ ಮಂಡನೆಗೆ ಕೇಂದ್ರ ಸರ್ಕಾರ ಸಿದ್ಧವಾಗಿದೆ. ಇದನ್ನೂ ಓದಿ: ʻಇಂಡಿʼ ನಾಯಕರ ಕೊನೇ ಪ್ರಯತ್ನವೂ ವಿಫಲ – ಕೇಂದ್ರ ಲಿಖಿತ ಭರವಸೆ ಕೊಟ್ಟಿದೆ; ಡಿಎಂಕೆ ನಿಲುವು ಸ್ಪಷ್ಟಪಡಿಸಿದ ಸ್ಟಾಲಿನ್
ಲೆಕ್ಕಾಚಾರ ಏನು?
ಮಸೂದೆ ಅಂಗೀಕಾರಕ್ಕೆ 360 ಮತಗಳ ಅನಿವಾರ್ಯ
354 ಮತ ಹೊಂದಿರುವ ಎನ್ಡಿಎಗೆ 6 ಮತ ಕೊರತೆ
ಆದ್ರೆ 371 ಸಂಸದರ ಬೆಂಬಲ ಪಡೆಯಲು ಪ್ಲ್ಯಾನ್
ಹೆಚ್ಚುವರಿ 8 ಸಂಸದರು ಬೆಂಬಲ ನೀಡುವ ನಿರೀಕ್ಷೆ
ಸಂಸತ್ಗೆ ಮೂವರು ಸಂಸದರು ಗೈರು ಸಂಭವ
ಜೈಲಿನಲ್ಲಿರುವ ಸಂಸದ ಅಮೃತ್ ಪಾಲ್ ಸಿಂಗ್ (ಪಂಜಾಬ್ನ ಖದೂರ್ ಸಾಹಿಬ್ ಪಕ್ಷೇತರ ಸಂಸದ. ಎನ್ಎಸ್ಎ ಆಕ್ಟ್ ಕೇಸ್ನಲ್ಲಿ ಅಸ್ಸಾಂ ಜೈಲಿನಲ್ಲಿದ್ದಾರೆ)
ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ಸಸ್ಪೆಂಡ್ (ಕಳೆದ ಅಧಿವೇಶನದಲ್ಲಿ ಅಮಾನತು)
ತಿಹಾರ್ ಜೈಲಿನಲ್ಲಿ ಬಾರಾಮುಲ್ಲ ಎಂಪಿ ಶೇಖ್ ರಶೀದ್ (ಟೆರರ್ ಫಂಡಿಂಗ್ ಆರೋಪ; ಎನ್ಎಸ್ಎ ಆಕ್ಟ್ನಡಿ ತಿಹಾರ್ ಜೈಲಿನಲ್ಲಿದ್ದಾರೆ)
ಈ ಮೂವರು ಗೈರಾದ್ರೆ ಬಹುಮತ 357ಕ್ಕೆ ಕುಸಿತ
ಮಸೂದೆ ಪರ ಯಾರು?
ಎನ್ಡಿಎ: 321
ಡಿಎಂಕೆ: 22
ಎನ್ಸಿಪಿ (ಎಸ್ಪಿ): 8
ವೈಎಸ್ಆರ್ ಕಾಂಗ್ರೆಸ್: 4
ಒಟ್ಟು: 355
ಮಸೂದೆ ವಿರುದ್ಧ ಯಾರು?
ಇಂಡಿಯಾ ಮೈತ್ರಿಕೂಟ: 171
ಎಎಪಿ: 3
ಸ್ಪಷ್ಟ ನಿಲುವು ತಳೆಯದೇ ಇರುವವರು
ಜೆಎಂಎಂ: 3
ಸ್ವತಂತ್ರರು: 3
ಝಡ್ಪಿಎಂ: 1
ಎಐಎಂಐಎಂ: 1
ಎಎಸ್ಪಿ: 1
ಶರದ್ ಪವಾರ್ ಅವರ ಎನ್ಸಿಪಿ (ಎಸ್ಪಿ), ಎನ್ಸಿಪಿಐ, ಡಿಎಂಕೆ ಕೂಡ ಮಸೂದೆಗೆ ಬೆಂಬಲ ಘೋಷಿಸಿವೆ. ವೈಎಸ್ಆರ್ ಕಾಂಗ್ರೆಸ್ ಮತ್ತು ಬಿಆರ್ಎಸ್ ಪಕ್ಷಗಳೂ ಮಸೂದೆ ಪರವಾಗಿ ಮತ ಹಾಕುವ ನಿರೀಕ್ಷೆಯಿದೆ. ಮಸೂದೆ ಪಾಸಾಗಲು ವಿಶೇಷ ಬಹುಮತದ (ಮೂರನೇ ಎರಡರಷ್ಟು) ಅಗತ್ಯವಿದೆ. ಹಾಲಿ 540 ಸದಸ್ಯರ ಪೈಕಿ ಸುಮಾರು 360 ಮತಗಳು ಬೇಕು. ಎನ್ಡಿಎ ಹಾಗೂ ಬೆಂಬಲಿತ ಪಕ್ಷಗಳ ಸಂಖ್ಯೆ ಸದ್ಯ 354ರ ಆಸುಪಾಸಿನಲ್ಲಿ ಇದೆ. ಗೈರುಹಾಜರಿ ಮತ್ತು ನಿರೀಕ್ಷಿತ ಅಚ್ಚರಿ ಮತಗಳು ಫಲಿತಾಂಶ ನಿರ್ಧರಿಸಲಿವೆ. ಸಿಪಿಐ, ಶಿವಸೇನಾ (ಯುಬಿಟಿ) ಮಸೂದೆಯನ್ನು ವಿರೋಧಿಸಿವೆ. ಜೆಎಂಎಂ ತನ್ನ ನಿಲುವನ್ನು ಶೀಘ್ರದಲ್ಲೇ ತಿಳಿಸುವುದಾಗಿ ಹೇಳಿದೆ.
ಇಂಡಿ ಮೈತ್ರಿಕೂಟದಲ್ಲಿ ಅಲ್ಲೋಲ ಕಲ್ಲೋಲ
ಸದ್ಯ ಎನ್ಡಿಎ ಬಳಿ ಇರುವುದು 354 ಮತಗಳು ಮಾತ್ರ. ಈಗಾಗಲೇ ಡಿಎಂಕೆ, ಎನ್ಸಿಪಿ (ಎಸ್ಪಿ), ವೈಎಸ್ಆರ್ಸಿಪಿ, ಜೆಎಂಎಂ ಬೆಂಬಲ ಸಿಕ್ಕಿದೆ. ಅಂದ್ಹಾಗೆ ಕಳೆದ ಮೂರು ದಿನಗಳ ಅವಧಿಯಲ್ಲಿ 6 ಪಕ್ಷಗಳ ಬೆಂಬಲ ಸಿಕ್ಕಿದೆ. ಹೆಚ್ಚುವರಿ 38 ಸಂಸದರ ಬೆಂಬಲವನ್ನು ಮೋದಿ ಸರ್ಕಾರ ಪಡೆದುಕೊಂಡಿದೆ. ಇದರಿಂದ ಇಂಡಿ ಮೈತ್ರಿಕೂಟದಲ್ಲಿ ಅಲ್ಲೋಲ ಕಲ್ಲೋಲ ಉಂಟಾಗಿದೆ. ಇನ್ನು ಒಂದು ವೇಳೆ ವಿಪಕ್ಷಗಳ ಕೆಲವು ಸಂಸದರು ಸಭಾತ್ಯಾಗ ಮಾಡಿದರೆ, ಬಹುಮತದ ಮ್ಯಾಜಿಕ್ ನಂಬರ್ ಕುಸಿದು ಎನ್ಡಿಎಗೆ ವರದಾನವಾಗಲಿದೆ. ಇತ್ತ ಪ್ರಧಾನಿ ಮೋದಿ ನೇತೃತ್ವದಲ್ಲಿ ಅಮಿತ್ ಶಾ, ನಬೀನ್ ಸೇರಿ ಪ್ರಮುಖ ನಾಯಕರ ಸಭೆ ನಡೆದಿದ್ದು, ಮಸೂದೆ ಅಂಗೀಕಾರಕ್ಕೆ ಬೇಕಾಗುವ ರಣತಂತ್ರದ ಬಗ್ಗೆ ಚರ್ಚೆ ನಡೆಸಿದ್ದಾರೆ. ಪ್ರಧಾನಿ ಮೋದಿ ಮಾತನಾಡಿ, ನಮಗೆ ಪಕ್ಷದ ಹಿತಾಸಕ್ತಿಯು ದೇಶದ ಹಿತಾಸಕ್ತಿಗಿಂತ ದೊಡ್ಡದು. ಆದರೆ ಕೆಲವರಿಗೆ ಪಕ್ಷದ ಹಿತವೇ ಮುಖ್ಯವಾಗಿದೆ. ನಮ್ಮ ಆತ್ಮಬಲ ಆಜೇಯವಾಗಿದೆ. ದೇಶದ ಭವಿಷ್ಯಕ್ಕಾಗಿ ಈ ಸಂಕಲ್ಪವನ್ನು ಪೂರ್ಣಗೊಳಿಸಬೇಕಾಗಿದೆ ಎಂದಿದ್ದಾರೆ. ಇದನ್ನೂ ಓದಿ: PUBLiC TV Explainer | ದೇಶದಲ್ಲಿ ಓರ್ವ ಸಂಸದನಿಗೆ 26.3 ಲಕ್ಷ ಜನ – ಅಮೆರಿಕಕ್ಕಿಂತ 3.3 ಪಟ್ಟು ಹೆಚ್ಚು!
ಸ್ಟಾಲಿನ್ ಮನವೊಲಿಕೆ ವಿಫಲ
ಕ್ಷೇತ್ರ ಮರುವಿಂಗಡಣೆ ಮಸೂದೆಗೆ ಘೋಷಿಸಿರುವ ಬೆಂಬಲ ಮರುಪರಿಶೀಲಿಸುವಂತೆ ಎಂ.ಕೆ.ಸ್ಟಾಲಿನ್ ಮನವೊಲಿಸಲು ಇಂಡಿ ಒಕ್ಕೂಟದ ನಾಯಕರು ಭಾನುವಾರ ಚೆನ್ನೈಗೆ ಭೇಟಿ ನೀಡಿ ಕೊನೆ ಕ್ಷಣದ ಕಸರತ್ತು ನಡೆಸಿದರು. ಮಲ್ಲಿಕಾರ್ಜುನ್ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಡಿ.ಕೆ.ಶಿವಕುಮಾರ್, ರೇವಂತ್ ರೆಡ್ಡಿ, ವಿ.ಡಿ.ಸತೀಶನ್, ಮಮತಾ ಬ್ಯಾನರ್ಜಿ ಸೇರಿದಂತೆ ಅನೇಕ ನಾಯಕರು ಇದ್ದರು. ಆದರೆ, ಸ್ಟಾಲಿನ್ ಮನವೊಲಿಸುವಲ್ಲಿ ವಿಫಲರಾದರು. ಮಸೂದೆ ಬೆಂಬಲಿಸುವ ತಮ್ಮ ನಿಲುವಿಗೆ ಬದ್ಧ ಎಂದು ಸ್ಟಾಲಿನ್ ಸ್ಪಷ್ಟಪಡಿಸಿದರು.

