ಚಿಕ್ಕಬಳ್ಳಾಪುರ: ಜಿಲ್ಲಾಡಳಿತದ ಕೇಂದ್ರ ಸ್ಥಾನವಾಗಿರುವ ಚಿಕ್ಕಬಳ್ಳಾಪುರ (Chikkaballapura) ನಗರಕ್ಕೇ ಚಿರತೆ ಲಗ್ಗೆ ಇಟ್ಟಿದ್ದು, ಸಾರ್ವಜನಿಕರಲ್ಲಿ ಆತಂಕ ಮನೆಮಾಡಿದೆ.
ಚಿಕ್ಕಬಳ್ಳಾಪುರ ನಗರದ ಜನನಿಬಿಡ ಬಿಬಿ ರಸ್ತೆಯ ಕಟ್ಟಡವೊಂದರ ಮೇಲೆ ಚಿರತೆ (Leopard) ಕಾಣಿಸಿಕೊಂಡು ನಾಯಿಯನ್ನ ಬೇಟೆಯಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ನಗರದ ವಾಪಸಂದ್ರದ ಮಯುಗ ಬೇಕರಿ ಮುಂಭಾಗದಲ್ಲಿರುವ ಕಟ್ಟಡದ ಮೇಲೆ ಭಾನುವಾರ ತಡರಾತ್ರಿ ಸುಮಾರು 2.45ರ ವೇಳೆಗೆ ಚಿರತೆ ಕಾಣಿಸಿಕೊಂಡಿದೆ. ಕಟ್ಟಡದ ಮೇಲೆ ಇದ್ದ ನಾಯಿಯನ್ನು ಬೇಟೆಯಾಡಿದ ಚಿರತೆ, ಬಳಿಕ ಮೆಟ್ಟಿಲುಗಳ ಮೂಲಕ ಕೆಳಗಿಳಿದು ಹೋಗಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಚಿರತೆ ಕಟ್ಟಡದ ಮೇಲೆ ಓಡಾಡುತ್ತಿದ್ದ ವೇಳೆ ಸುತ್ತಮುತ್ತಲಿನ ನಾಯಿಗಳು ಜೋರಾಗಿ ಬೊಗಳಿವೆ. ಸಿಸಿಟಿವಿ ದೃಶ್ಯಗಳು ಇದೀಗ ಸ್ಥಳೀಯರಲ್ಲಿ ಆತಂಕ ಮೂಡಿಸಿವೆ. ಈಗಾಗಲೇ ಚಿಕ್ಕಬಳ್ಳಾಪುರ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಚಿರತೆ ಹಾವಳಿ ಹೆಚ್ಚಾಗಿರುವ ಬೆನ್ನಲ್ಲೇ, ಇದೀಗ ನಗರದ ಮುಖ್ಯರಸ್ತೆಯಲ್ಲೇ ಚಿರತೆ ಕಾಣಿಸಿಕೊಂಡಿರುವುದು ಜನರ ನಿದ್ದೆಗೆಡಿಸಿದೆ.
ಅದರಲ್ಲೂ ಜನವಸತಿ ಪ್ರದೇಶಕ್ಕೆ ಚಿರತೆ ಪ್ರವೇಶಿಸಿರುವುದರಿಂದ ರಾತ್ರಿ ವೇಳೆ ಸಂಚರಿಸಲು ಸಾರ್ವಜನಿಕರು ಭಯಪಡುವಂತಾಗಿದೆ. ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಚಿರತೆಯ ಚಲನವಲನ ಪತ್ತೆಹಚ್ಚಿ, ಬೋನು ಇರಿಸಿ ಸೆರೆಹಿಡಿಯಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

