ಬೆಂಗಳೂರು: ಬೆಂಗಳೂರಿನಲ್ಲಿ ಲಾಲ್ ಬಾಗ್ (Lalbagh) ಮೂಲಕ ಸುರಂಗ ಮಾರ್ಗ (Tunnel Road) ಯೋಜನೆಗೆ ಸರ್ಕಾರ ಕೊಕ್ ಕೊಟ್ಟ ಬೆನ್ನಲ್ಲೇ ಅಭಿಯಾನಕ್ಕೆ ಬೆಂಬಲ ನೀಡಿದ ವಾಕರ್ಸ್ಗಳಿಗೆ ಸಂಸದ ತೇಜಸ್ವಿ ಸೂರ್ಯ (Tejasvi Surya) ಧನ್ಯವಾದ ಹೇಳಿದ್ದಾರೆ.
ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಮುಕ್ತಿ ಹಾಡಲು ಹೆಬ್ಬಾಳದಿಂದ ಸಿಲ್ಕ್ ಬೋರ್ಡ್ ಜಂಕ್ಷನ್ವರೆಗೆ ಸುರಂಗ ಮಾರ್ಗ ನಿರ್ಮಿಸಲು ರಾಜ್ಯ ಸರ್ಕಾರ ನಿರ್ಧರಿತ್ತು. ಲಾಲ್ಬಾಗ್ ಮೂಲಕ ಸುರಂಗ ಮಾರ್ಗ ಹಾದುಹೋಗುವ ಕುರಿತಾಗಿ ಸಾರ್ವಜನಿಕ ವಲಯದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಈ ಬೆನ್ನಲ್ಲೇ ಲಾಲ್ಬಾಗ್ನಲ್ಲಿ ಸುರಂಗ ಮಾರ್ಗ ನಿರ್ಮಿಸುವುದಿಲ್ಲ ಅಂತಾ ಕೃಷ್ಣ ಬೈರೇಗೌಡ ಹೇಳುವ ಮೂಲಕ ವಿವಾದಕ್ಕೆ ತೆರೆ ಎಳೆದಿದ್ದರು. ಇದೀಗ ಸಂಸದ ತೇಜಸ್ವಿ ಸೂರ್ಯ ಸುರಂಗ ಯೋಜನೆಗೆ ವಿರೋಧಿಸಿ ಅಭಿಯಾನಕ್ಕೆ ಬೆಂಬಲ ನೀಡಿದ ವಾಕರ್ಸ್ಗಳಿಗೆ ಧನ್ಯವಾದ ಹೇಳಿದ್ದಾರೆ. ಲಾಲ್ಬಾಗ್ಗೆ ಬೆಳಗ್ಗೆ ಭೇಟಿ ನೀಡಿ ವಾಕರ್ಸ್ಗಳೊಂದಿಗೆ ಸಂವಾದ ನಡೆಸಿದರು. ವಾಕರ್ಸ್ ಜೊತೆ ಸಂವಾದ ನಡೆಸಿ ಸಂತಸ ವ್ಯಕ್ತಪಡಿಸಿದರು. ಸಂಸದ ತೇಜಸ್ವಿ ಸೂರ್ಯಗೆ ಹಿರಿಯ ನಟ ಪ್ರಕಾಶ್ ಬೆಳವಾಡಿ ಸಾಥ್ ಕೊಟ್ಟರು.
ಲಾಲ್ಬಾಗ್ನಲ್ಲಿ ವಾಕರ್ಸ್ಗಳ ಜೊತೆ ಸಂವಾದ ಬಳಿಕ ಮಾಧ್ಯಮಗಳಿಗೆ ಸಂಸದ ತೇಜಸ್ವಿ ಸೂರ್ಯ ಪ್ರತಿಕ್ರಿಯಿಸಿ ಲಾಲ್ಬಾಗ್ನ ಸಸ್ಯ ಕಾಶಿ ಅಂತಾರೆ. ಸರ್ಕಾರ ಜನಕ್ಕೆ ಬೇಡವಾದ, ಸರ್ಕಾರಕ್ಕೆ ಬೇಕಾದ ಟನಲ್ ಮಾಡಲು ಹೊರಟಿದ್ದರು. ನಗರದ ಜನರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು. ಈಗ ಸರ್ಕಾರ ಲಾಲ್ಬಾಗ್ ಬಿಟ್ಟು ಮಾಡುತ್ತೇವೆ ಅಂದಿದ್ದಾರೆ. ಬೆಂಗಳೂರಿನ ಜನಕ್ಕೆ ಮತ್ತು ಲಾಲ್ಬಾಗ್ ವಾಕರ್ಸ್ಗಳಿಗೆ ಧನ್ಯವಾದ ತಿಳಿಸುತ್ತೇವೆ. ಲಾಲ್ಬಾಗ್ ಬೆಂಗಳೂರು ಇತಿಹಾಸದ ಭಾಗವಾಗಿದೆ. 2037ರ ಇಸವಿಗೆ ಬೆಂಗಳೂರಿಗೆ 500 ವರ್ಷ ಆಗಲಿದೆ. ನಮ್ಮ ಕೆರೆಗಳು, ಸಾರಿಗೆ, ಜೀವನ ಶೈಲಿಯ ಬಗ್ಗೆ ಚರ್ಚೆ ಮಾಡಬೇಕಿದೆ. ಜಪಾನ್ ಮಾದರಿಯಲ್ಲಿ ಸಾರಿಗೆ ವ್ಯವಸ್ಥೆ ಮಾಡಲು ಹೇಳಿದ್ದೆ. ಈಗ ಸಿಎಂ ಜಪಾನ್ ಮಾದರಿ ಮಾಡುತ್ತೇವೆ ಎಂದಿದ್ದಾರೆ. ನಮಗೆ ಖುಷಿ ಇದೆ, ಅದನ್ನು ಪ್ರಾರಂಭಿಸಿ ಎಂದು ಮನವಿ ಮಾಡುತ್ತೇನೆ ಎಂದರು.
ಇನ್ನು ಸುರಂಗ ರಸ್ತೆ ಯೋಜನೆಗೆ ಸರ್ಕಾರ ಪರ್ಯಾಯ ವ್ಯವಸ್ಥೆಗೆ ಪ್ಲಾನ್ ಮಾಡಿರುವ ವಿಚಾರಕ್ಕೆ ಸಾರ್ವಜನಿಕರು ಕೂಡ ಸಂತಸ ವ್ಯಕ್ತಪಡಿಸಿದ್ದಾರೆ.


