ರಾಮನಗರ: ಜೆಡಿಎಸ್ (JDS) ಯುವಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿಯವರು (Nikhil Kumaraswamy) ಈ ಹಿಂದೆ ಪ್ರವೇಶ ನಿರಾಕರಿಸಿದ್ದ ಬಿಸಿಲು ಮಾರಮ್ಮನ ದೇವಸ್ಥಾನಕ್ಕೆ ಇಂದು ಭೇಟಿಕೊಟ್ಟಿದ್ದಾರೆ. ಈ ವೇಳೆ ಗ್ರಾಮಸ್ಥರು ಅದ್ಧೂರಿಯಾಗಿ ಸ್ವಾಗತ ಕೋರಿದ್ದಾರೆ
ಗ್ರಾಮದ ಪ್ರವೇಶ ದ್ವಾರದಲ್ಲಿ ಬೃಹತ್ ಮೂಸಂಬಿ ಹಾರ ಹಾಕಿ, ತಮಟೆ, ನಗಾರಿ ಭಾರಿಸಿ, ಆರತಿ ಬೆಳಗಿ ಸ್ವಾಗತ ಕೋರಿದ್ದಾರೆ. ಎತ್ತಿನ ಗಾಡಿಯಲ್ಲಿ ಮೆರವಣಿಗೆ ಮಾಡಿ ದೇವಾಲಯಕ್ಕೆ ಕರೆದುಕೊಂಡು ಬಂದಿದ್ದಾರೆ. ದಾರಿಯುದ್ದಕ್ಕೂ ಜನ ಜೈಕಾರ ಹಾಕಿದ್ದಾರೆ. ಇದನ್ನೂ ಓದಿ: ನಿಖಿಲ್ಗೆ ದೇಗುಲ ಪ್ರವೇಶ ನಿರಾಕರಣೆ ವಿವಾದ; ಕಾಂಗ್ರೆಸ್ ಕಾರ್ಯಕರ್ತರಿಂದ ಬಹಿರಂಗ ಕ್ಷಮೆಯಾಚನೆ
ದೇವರ ದರ್ಶನ ಪಡೆದು ಮಾತನಾಡಿದ ಅವರು, ದೇವರ ದರ್ಶನಕ್ಕೆ ತಡೆಯೊಡ್ಡಿದ್ದ ಆ ಸಣ್ಣ ಘಟನೆಯಿಂದ ಕ್ಷೇತ್ರಕ್ಕೆ ಕಪ್ಪುಚುಕ್ಕೆ ಬಂದಂತಾಗಿತ್ತು. ಇಂದು ಗ್ರಾಮದ ತಾಯಂದಿರು ಆ ಕಳಂಕವನ್ನು ಸಂಪೂರ್ಣವಾಗಿ ತೊಳೆದಿದ್ದಾರೆ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ರಾಜಕೀಯ ಬೆರೆಸಬಾರದು. ಇಬ್ಬರು-ಮೂವರು ವ್ಯಕ್ತಿಗಳ ಸಣ್ಣತನಕ್ಕೆ ಹೆಚ್ಚು ಮಹತ್ವ ಕೊಡುವುದು ಬೇಡ ಎಂದರು.
ನಮ್ಮ ರಾಜ್ಯದಲ್ಲಿ ಇಂತಹ ಘಟನೆಗಳು ಮರುಕಳಿಸಬಾರದು. ನಾನು ರಾಮನಗರ ಬಿಟ್ಟು ಹೋಗಿರೋದಾದರೂ ಎಲ್ಲಿ? ನಾನು ನಿರಂತರವಾಗಿ ಇಲ್ಲೇ ಇದ್ದೇನೆ. ಪಕ್ಷಕ್ಕಾಗಿ ಚನ್ನಪಟ್ಟಣದಲ್ಲಿ ಸ್ಪರ್ಧಿಸಿದೆ. ಕುಮಾರಣ್ಣ ಸಂಸದರಾಗಿ, ಕೇಂದ್ರ ಸಚಿವರಾಗಿ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ದೇವೇಗೌಡರ 64 ವರ್ಷಗಳ ರಾಜಕೀಯ ಹಾಗೂ ಈ ಜಿಲ್ಲೆಯೊಂದಿಗಿನ 30-40 ವರ್ಷಗಳ ಬಾಂಧವ್ಯವನ್ನು ಪ್ರಾಮಾಣಿಕವಾಗಿ ಮುಂದುವರಿಸುತ್ತೇವೆ ಎಂದು ಹೇಳಿದರು.
ನ. 13ರಂದು ನಿಖಿಲ್ ದೇವಾಲಯ ಪ್ರವೇಶಕ್ಕೆ ಕಾಂಗ್ರೆಸ್ ಕಾರ್ಯಕರ್ತರು ತಡೆಯೊಡ್ಡಿದ್ದರು. ದೇವಾಲಯದ ಬಾಗಿಲು ಹಾಕಿ ಪ್ರವೇಶಕ್ಕೆ ನಿರಾಕರಿಸಿದ್ದರು. ಇದರಿಂದ ಅವರು ದೇವರ ದರ್ಶನ ಪಡೆಯದೇ ವಾಪಸ್ ತೆರಳಿದ್ದರು. ಇದನ್ನೂ ಓದಿ: ನಿಖಿಲ್ ಕುಮಾರಸ್ವಾಮಿಗೆ ದೇಗುಲ ದಿಗ್ಬಂಧನ – ʻಕೈʼ ಕಾರ್ಯಕರ್ತರಿಂದ ದೇವಾಲಯಕ್ಕೆ ಬೀಗ!
