ಬೆಂಗಳೂರು: ಗೌರವಧನ ಹೆಚ್ಚಳಕ್ಕೆ ಆಗ್ರಹಿಸಿ 13 ದಿನಗಳಿಂದ ಆಶಾ ಕಾರ್ಯಕರ್ತೆಯರು ನಡೆಸುತ್ತಿದ್ದ ನಿರಂತರ ಹೋರಾಟಕ್ಕೆ ಕೊನೆಗೂ ಮಣಿದಿರುವ ರಾಜ್ಯ ಸರ್ಕಾರ, ಮಾಸಿಕ 2,000 ರೂ. ಗೌರವಧನ ಹೆಚ್ಚಳ ಮಾಡುವ ಸಂಬಂಧ ಅಧಿಕೃತ ಲಿಖಿತ ಟಿಪ್ಪಣಿಯನ್ನು ಹೊರಡಿಸಿದೆ.
ಮೌಖಿಕ ಭರವಸೆಗೆ ಒಪ್ಪದೆ ಲಿಖಿತ ಆದೇಶಕ್ಕಾಗಿ ಪಟ್ಟು ಹಿಡಿದು ಆಶಾ ಕಾರ್ಯಕರ್ತೆಯರು ಪ್ರತಿಭಟನೆ ಮುಂದುವರಿಸಿದ್ದ ಹಿನ್ನೆಲೆಯಲ್ಲಿ, ಇಂದು ಮುಖ್ಯಮಂತ್ರಿಗಳ ಕಾರ್ಯದರ್ಶಿ ಎಸ್.ಎಸ್. ನಕುಲ್ ಅವರು ಈ ಕುರಿತು ಅಧಿಕೃತ ಟಿಪ್ಪಣಿ ಹೊರಡಿಸಿದ್ದಾರೆ.
ನವೆಂಬರ್ 28ರಂದು ಮುಖ್ಯಮಂತ್ರಿಗಳು ಆಶಾ ಕಾರ್ಯಕರ್ತೆಯರ ಪ್ರತಿನಿಧಿಗಳೊಂದಿಗೆ ಸವಿವರವಾದ ಸಭೆ ನಡೆಸಿ ಅವರ ಮನವಿಗಳನ್ನು ಆಲಿಸಿದ್ದರು. ಈ ವೇಳೆ ಮಾಸಿಕ ಗೌರವಧನವನ್ನು 2,000 ರೂ.ಹೆಚ್ಚಿಸಲು ನಿರ್ಧರಿಸಲಾಗಿತ್ತು.
ಹೆಚ್ಚಳದ ಜಾರಿ ದಿನಾಂಕದ ಕುರಿತು ಕಾರ್ಯಕರ್ತೆಯರ ಮನವಿಯನ್ನು ಸಕಾರಾತ್ಮಕವಾಗಿ ಪರಿಗಣಿಸಿರುವ ಸಿಎಂ, 2027ರ ಜನವರಿ 1ರಿಂದ ಅನ್ವಯವಾಗುವಂತೆ ಈ ಹೆಚ್ಚಳವನ್ನು ಜಾರಿಗೊಳಿಸಲು ಒಪ್ಪಿಗೆ ಸೂಚಿಸಿದ್ದಾರೆ.
ಜನವರಿ 1ರಿಂದಲೇ ಗೌರವಧನ ಹೆಚ್ಚಳ ಜಾರಿಗೆ ಬರುವಂತೆ ಅಗತ್ಯ ಪ್ರಕ್ರಿಯೆಗಳನ್ನು ಆದ್ಯತೆಯ ಮೇರೆಗೆ ಪ್ರಾರಂಭಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಮುಖ್ಯಮಂತ್ರಿಗಳ ಕಚೇರಿಯಿಂದ ನಿರ್ದೇಶನ ನೀಡಲಾಗಿದೆ.
