– 58.83 ಕೋಟಿ ರೂ. ಮೌಲ್ಯದ ವಸ್ತುಗಳ ಪ್ರದರ್ಶನ
ನವದೆಹಲಿ: ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್(Arvind Kejriwal) ಅವರ ವಿವಾದಿತ ಶೀಷ್ ಮಹಲ್(Sheesh Mahal) ನಿವಾಸದ ಬಾಗಿಲನ್ನು ದೆಹಲಿ ಸರ್ಕಾರ ಶುಕ್ರವಾರ ಮಾಧ್ಯಮಗಳಿಗಾಗಿ ತೆರೆದಿದೆ.
ಪೀಠೋಪಕರಣ ಅಂಗಡಿಗಳಲ್ಲಿ ಮಂಚ, ಕುರ್ಚಿ, ಕರ್ಟನ್.. ಇತ್ಯಾದಿಗಳಿಗೆ ಸ್ಟ್ಯಾಂಡ್ ಹಾಕಿ ದರಗಳನ್ನು ಹಾಕಲಾಗುತ್ತದೆಯೋ ಅದೇ ರೀತಿಯಾಗಿ ನಿವಾಸ ಒಳಗಡೆ ಇರುವ ಮಂಚ, ಚಯರ್, ಬೆಡ್ ಇತ್ಯಾದಿಗಳಿಗೆ ದರ ಇರುವ ಸ್ಟ್ಯಾಂಡ್ ಇಡಲಾಗಿದೆ.
ಈ ಬಂಗಲೆಯ ನವೀಕರಣ ಮತ್ತು ಪೀಠೋಪಕರಣಗಳಿಗೆ ಒಟ್ಟು 58.83 ಕೋಟಿ ರೂಪಾಯಿ ವೆಚ್ಚವಾಗಿದೆ ಎಂದು ಅಂದಾಜಿಸಲಾಗಿದೆ. ಸಾರ್ವಜನಿಕರ ಹಣವನ್ನು ದುಬಾರಿ ಬೆಲೆಯ ವಸ್ತುಗಳ ಖರೀದಿಗೆ ಬಳಸಲಾಗಿದೆ ಎಂದು ಬಿಜೆಪಿ ಈ ಹಿಂದೆ ಆರೋಪಿಸಿತ್ತು. ಮುಂದಿನ ದಿನಗಳಲ್ಲಿ ಟಿಕೆಟ್ ವ್ಯವಸ್ಥೆಯ ಮೂಲಕ ಸಾರ್ವಜನಿಕರಿಗೂ ಈ ಬಂಗಲೆ ವೀಕ್ಷಣೆಗೆ ಅವಕಾಶ ಕಲ್ಪಿಸಲು ಸರ್ಕಾರ ಯೋಜಿಸಿದೆ.
शीश महल का हर कमरा, हर सामान का सच – इटली की चिमनी, साउथ कोरिया का फ्रिज, बेल्जियम की क्रॉकरी, चार लाख की मसाज टेबल
watch: https://t.co/RL2VgT8H0E— Kapil Mishra (@KapilMishra_IND) November 27, 2026
ಯಾವುದಕ್ಕೆ ಎಷ್ಟು ರೂ.?
* 11.56 ಲಕ್ಷ ರೂ. ಮೌಲ್ಯದ ತೂಗು ದೀಪ (Chandelier)
* 5.47 ಲಕ್ಷ ರೂ. ಬೆಲೆಯ ಸೋಫಾ
* 5.58 ಲಕ್ಷ ರೂ. ವೆಚ್ಚದ ಕುರ್ಚಿಗಳು
* 6.79 ಲಕ್ಷ ರೂ. ಮೌಲ್ಯದ ಸೆಂಟ್ರಲ್ ಟೇಬಲ್
* 5.69 ಲಕ್ಷ ರೂ. ಬೆಲೆಯ ಕರ್ಟನ್ಗಳು (ಪರದೆಗಳು)
* 8 ಬೆಡ್ರೂಮ್ಗಳು, 12 ಶೌಚಾಲಯಗಳು, ಬಾತ್, ಸ್ಪಾ, ದುಬಾರಿ ಕಾರ್ಪೆಟ್ಗಳು ಹಾಗೂ 5 ಒಎಲ್ಇಡಿ (OLED) ಟಿವಿಗಳು.
*7.02 ಲಕ್ಷ ರೂ. ಮೌಲ್ಯದ ಆಹಾರ ಸಾಗಿಸಲು ಲಿಫ್ಟ್
20 ರೂ. ಟಿಕೆಟ್:
ಮೊದಲು ಮಾಧ್ಯಮಗಳಿಗೆ ಮತ್ತು ನಂತರ ಸಾರ್ವಜನಿಕರಿಗೆ ಬಂಗಲೆ ಪ್ರವೇಶಕ್ಕೆ ಅವಕಾಶ ನೀಡಲಾಗುವುದು ಎಂದು ಲೋಕೋಪಯೋಗಿ ಇಲಾಖೆ (PWD) ಸಚಿವ ಪರ್ವೇಶ್ ವರ್ಮಾ ಗುರುವಾರ ಘೋಷಿಸಿದ್ದರು. ಈ ವಾರದಲ್ಲೇ ಆನ್ಲೈನ್ ಬುಕಿಂಗ್ ವ್ಯವಸ್ಥೆ ಆರಂಭವಾಗುವ ನಿರೀಕ್ಷೆಯಿದೆ. ಅಧಿಕಾರಿಗಳ ಪ್ರಕಾರ, ಪ್ರವೇಶ ಟಿಕೆಟ್ ದರ ಸುಮಾರು 20 ರೂಪಾಯಿ ಇರಲಿದ್ದು, ಹಿರಿಯ ನಾಗರಿಕರು ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ ನೀಡುವ ಸಾಧ್ಯತೆಯಿದೆ.
ಕಪಿಲ್ ಮಿಶ್ರಾ ವಾಗ್ದಾಳಿ:
ಇಂದಿನಿಂದ ದೆಹಲಿ ಮತ್ತು ದೇಶದ ಜನರು ಈ ‘ಶೀಷ್ ಮಹಲ್’ ಅನ್ನು ನೋಡಬಹುದು. ಮಾಧ್ಯಮಗಳ ಕ್ಯಾಮೆರಾಗಳ ಮೂಲಕ ಕೇಜ್ರಿವಾಲ್ ನಡೆಸಿದ ಭ್ರಷ್ಟಾಚಾರ ಮತ್ತು ಲೂಟಿಯ ಕರಾಳ ಮುಖವನ್ನು ಇಡೀ ದೇಶ ನೋಡಲಿದೆ ಎಂದು ದೆಹಲಿ ಸಚಿವ ಕಪಿಲ್ ಮಿಶ್ರಾ ಹೇಳಿದ್ದಾರೆ. ಬಂಗಲೆಗೆ ವಿಯೆಟ್ನಾಂನಿಂದ ಮಾರ್ಬಲ್ ಹಾಗೂ ವಿದೇಶಗಳಿಂದ ಪಾತ್ರೆಗಳು ಮತ್ತು ಟೇಬಲ್ಗಳನ್ನು ಆಮದು ಮಾಡಿಕೊಳ್ಳಲಾಗಿದೆ. ಕಳ ಮಹಡಿಯಿಂದ ಮೇಲಿನ ಮಹಡಿಗೆ ಆಹಾರ ಸಾಗಲು ಲಿಫ್ಟ್ ವ್ಯವಸ್ಥೆ ಸಹ ಮನೆಯಲ್ಲಿದೆ. ಕೋವಿಡ್-19 ಸಾಂಕ್ರಾಮಿಕದ ಸಮಯದಲ್ಲಿ ದೆಹಲಿ ಜನರು ಸಂಕಷ್ಟದಲ್ಲಿದ್ದಾಗ ಕೇಜ್ರಿವಾಲ್ ತಮ್ಮ ನಿವಾಸಕ್ಕಾಗಿ ಇಷ್ಟೊಂದು ಅದ್ದೂರಿ ವೆಚ್ಚ ಮಾಡಿದ್ದಾರೆ ಎಂದು ಅವರು ಆರೋಪಿಸಿದರು.
ಖಾಸಗಿ ಕಂಪನಿಗೆ ನಿರ್ವಹಣೆ ಹೊಣೆ
ಸಾರ್ವಜನಿಕರ ವೀಕ್ಷಣೆಗೆ ಸೀಮಿತ ಅವಧಿಯವರೆಗೆ ಮಾತ್ರ ಅವಕಾಶವಿರಲಿದೆ. ಆ ಬಳಿಕ ಈ ಬಂಗಲೆಯನ್ನು ಖಾಸಗಿ ಹಾಸ್ಪಿಟಾಲಿಟಿ ಕಂಪನಿಗೆ ಹಸ್ತಾಂತರಿಸುವ ಯೋಜನೆ ರೂಪಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇಲ್ಲಿ ಸರ್ಕಾರಿ ಸಮ್ಮೇಳನಗಳು, ಔತಣಕೂಟಗಳು ಮತ್ತು ಸಭೆಗಳನ್ನು ಆಯೋಜಿಸಲು ಪ್ರಸ್ತಾವನೆ ಸಿದ್ಧಪಡಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Delhi: The Delhi government opens former Chief Minister and AAP National Convenor Arvind Kejriwal’s residence, ‘Sheesh Mahal’, to the public, displaying the cost of the curtains https://t.co/pcUUhow0Hm
— IANS (@ians_india) November 27, 2026
ಏನಿದು ವಿವಾದ?
2015ರಿಂದ 2024ರವರೆಗೆ ದೆಹಲಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕೇಜ್ರಿವಾಲ್ ಅವರು 6, ಫ್ಲಾಗ್ಸ್ಟಾಫ್ ರಸ್ತೆಯಲ್ಲಿರುವ ಈ ಬಂಗಲೆಯಲ್ಲಿ ವಾಸವಿದ್ದರು. 2025ರ ಫೆಬ್ರವರಿ ವಿಧಾನಸಭಾ ಚುನಾವಣಾ ಪ್ರಚಾರದ ವೇಳೆ ಬಿಜೆಪಿ ಈ ಬಂಗಲೆಗೆ ಶೀಷ್ ಮಹಲ್ ಎಂದು ಹೆಸರಿಟ್ಟು ದೊಡ್ಡ ಮಟ್ಟದ ಪ್ರಚಾರ ನಡೆಸಿತ್ತು. ಕೇಜ್ರಿವಾಲ್ ಕುಟುಂಬ ಬಂಗಲೆ ಖಾಲಿ ಮಾಡಿದ ಬಳಿಕ ಲೋಕೋಪಯೋಗಿ ಇಲಾಖೆ ಸಂಪೂರ್ಣ ಲೆಕ್ಕಪರಿಶೋಧನೆ ನಡೆಸಿದ್ದು, ಸದ್ಯ ಬಂಗಲೆಯ ಸ್ವಚ್ಛತೆ ಮತ್ತು ನಿರ್ವಹಣೆಗಾಗಿ ಸುಮಾರು 10 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
2020ರ ಕೋವಿಡ್ ಸಮಯದಲ್ಲಿ ಈ ಹಳೆಯ ಬಂಗಲೆಯ ಮೇಲ್ಛಾವಣಿಯ ಭಾಗ ಕುಸಿದಿದ್ದರಿಂದ ನವೀಕರಣ ಕಾರ್ಯವನ್ನು ಕೈಗೆತ್ತಿಕೊಳ್ಳಲಾಯಿತು. ಆದರೆ ಕೇವಲ ದುರಸ್ತಿಯ ಬದಲು ಸಾರ್ವಜನಿಕರ ತೆರಿಗೆ ಹಣದಲ್ಲಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಬಂಗಲೆಯನ್ನು ಅರಮನೆಯಂತೆ ಮರುನಿರ್ಮಾಣ ಮಾಡಲಾಗಿದೆ ಎಂದು ಬಿಜೆಪಿ ಆರೋಪಿಸಿತ್ತು.
ಬಂಗಲೆಯ ನವೀಕರಣಕ್ಕೆ ವಿದೇಶದಿಂದ ತರಿಸಿದ ದುಬಾರಿ ಅಮೃತಶಿಲೆ, ಲಕ್ಷಾಂತರ ರೂಪಾಯಿ ಬೆಲೆಯ ಸ್ವಯಂಚಾಲಿತ ಪರದೆಗಳು, ದುಬಾರಿ ಬೆಲೆಯ ತೂಗುದೀಪ, ಐಷಾರಾಮಿ ಒಳಾಂಗಣ ವಿನ್ಯಾಸಗಳನ್ನು ಬಳಸಲಾಗಿದೆ
ಆರಂಭದಲ್ಲಿ 7.91 ಕೋಟಿ ವೆಚ್ಚದಲ್ಲಿ ನವೀಕರಣ ಮಾಡಲು ಕೇಜ್ರಿವಾಲ್ ಸರ್ಕಾರ ಮುಂದಾಗಿತ್ತು. ಆದರೆ ಅಲಂಕಾರಿಕ ಮತ್ತು ಪುರಾತನ ಶೈಲಿಯ ವಸ್ತುಗಳಿಗೆ 18.88 ಕೋಟಿ ಖರ್ಚು ಮಾಡಲಾಗಿತ್ತು. ಆರಂಭದಲ್ಲಿ 45 ಕೋಟಿ ಎಂದು ಹೇಳಲಾಗಿದ್ದರೂ, ನಂತರದ ಪಿಡಬ್ಲ್ಯೂಡಿ (PWD) ಮಾಹಿತಿಗಳ ಪ್ರಕಾರ ಒಟ್ಟು ಐಷಾರಾಮಿ ನವೀಕರಣಕ್ಕೆ 56 ಕೋಟಿಯಿಂದ 58.83 ಕೋಟಿ ರೂ. ವೆಚ್ಚ ಮಾಡಿದ್ದ ವಿಚಾರ ಬೆಳಕಿಗೆ ಬಂದಿತ್ತು.
