ಬಾಲಿವುಡ್ ನಟ ಶಾರುಖ್ ಖಾನ್ (Shah Rukh Khan)ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಒಂದು ಇನ್ಸ್ಟಾಗ್ರಾಂ ರೀಲ್ ವಿಚಾರವಾಗಿ ಗರಂ ಆಗಿದ್ದಾರೆ. ಅನಂತ್ ಅಂಬಾನಿ ಜೊತೆಗಿನ ಹಳೆಯ ವಿಡಿಯೋವೊಂದನ್ನು ತಪ್ಪಾಗಿ ಬಿಂಬಿಸಿ ರೀಲ್ ಮಾಡಿದ್ದಕ್ಕಾಗಿ, ಕಂಟೆಂಟ್ ಕ್ರಿಯೇಟರ್ ಸುವಿಗ್ಯ ಶರ್ಮಾ (Suvigya Sharma) ಎಂಬುವವರಿಗೆ ಶಾರುಖ್ ಖಾನ್ ತಂಡ ಮಾನಹಾನಿ ನೋಟಿಸ್ ಕಳುಹಿಸಿದೆ.
ಅನಂತ್ ಅಂಬಾನಿ ಅವರು ಸದ್ಗುರು ಜೊತೆ ಮಾತನಾಡುತ್ತಿದ್ದ ವೇಳೆ, ಅಲ್ಲೇ ಇದ್ದ ಶಾರುಖ್ ಖಾನ್ ಅವರಿಗೆ ಮೌನವಾಗಿರುವಂತೆ ಸೂಚಿಸಲಾಗಿತ್ತು ಎಂಬರ್ಥದ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಈ ರೀಲ್ನಲ್ಲಿ ಮಾಡಿರುವ ಆರೋಪಗಳು ಸಂಪೂರ್ಣ ಸುಳ್ಳು, ಜನರ ದಾರಿ ತಪ್ಪಿಸುವಂತಹದ್ದು ಮತ್ತು ಶಾರುಖ್ ಖಾನ್ ಅವರ ಗೌರವಕ್ಕೆ ಧಕ್ಕೆ ತರುವಂತಹದ್ದಾಗಿದೆ ಎಂದು ಅವರ ಲೀಗಲ್ ಟೀಮ್ ಆಕ್ಷೇಪ ವ್ಯಕ್ತಪಡಿಸಿದೆ.
ನವೆಂಬರ್ 23ರಂದು ಈ ಲೀಗಲ್ ನೋಟಿಸ್ ನೀಡಲಾಗಿದ್ದು, ಇದರಲ್ಲಿ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 356 ಅನ್ನು ಉಲ್ಲೇಖಿಸಲಾಗಿದೆ. ವಿವಾದಿತ ರೀಲ್ ಅನ್ನು ತಕ್ಷಣವೇ ಸೋಶಿಯಲ್ ಮೀಡಿಯಾದಿಂದ ಡಿಲೀಟ್ ಮಾಡಬೇಕು ಮತ್ತು ಇಂತಹ ಸುಳ್ಳು ಹೇಳಿಕೆಗಳನ್ನು ಮತ್ತೆ ಎಲ್ಲಿಯೂ ಶೇರ್ ಮಾಡಬಾರದು ಎಂದು ಖಡಕ್ ಎಚ್ಚರಿಕೆ ನೀಡಲಾಗಿದೆ. ಅಲ್ಲದೆ, ವಿಡಿಯೋಗೆ ಸಂಬಂಧಿಸಿದ ಮೂಲ ದೃಶ್ಯಗಳು ಹಾಗೂ ದಾಖಲೆಗಳನ್ನು ಹಾಗೆಯೇ ಉಳಿಸಿಕೊಳ್ಳುವಂತೆ ಸೂಚಿಸಿ, 48 ಗಂಟೆಗಳ ಒಳಗೆ ಕೈಗೊಂಡ ಕ್ರಮದ ಬಗ್ಗೆ ಲಿಖಿತ ಉತ್ತರ ನೀಡುವಂತೆ ನೋಟಿಸ್ನಲ್ಲಿ ಆಗ್ರಹಿಸಲಾಗಿದೆ.ಇದನ್ನೂ ಓದಿ: ಸಕಲೇಶಪುರದಿಂದ ಮತ್ತೆ ಮೂಡಿಗೆರೆಯತ್ತ ಹೆಜ್ಜೆ ಹಾಕಿದ ಭೀಮ
ಇನ್ನೊಂದೆಡೆ, ಶಾರುಖ್ ಖಾನ್ ಕಳುಹಿಸಿರುವ ಈ ಲೀಗಲ್ ನೋಟಿಸ್ಗೆ ಕಂಟೆಂಟ್ ಕ್ರಿಯೇಟರ್ ಸುವಿಗ್ಯ ಶರ್ಮಾ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಸಂವಿಧಾನ ನೀಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ಪ್ರಸ್ತಾಪಿಸಿರುವ ಅವರು, ಶಾರುಖ್ ಖಾನ್ ತಂಡಕ್ಕೆ ತಿರುಗೇಟು ನೀಡಿದ್ದಾರೆ. ಸದ್ಯ ಈ ವಿವಾದ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ.ಇದನ್ನೂ ಓದಿ: ಮಹಿಷಿ ಬಳಿ ತುಂಗಾ ನದಿಯಲ್ಲಿ ಬೆಂಗಳೂರಿನ ನಾಲ್ವರು ಕಾನೂನು ವಿದ್ಯಾರ್ಥಿಗಳು ನಾಪತ್ತೆ
