ಶಿವಮೊಗ್ಗ: ಮಹಿಷಿ ಸಮೀಪದ ತುಂಗಾನದಿಯಲ್ಲಿ ಬೆಂಗಳೂರಿನ ನಾಲ್ವರು ಕಾನೂನು ವಿದ್ಯಾರ್ಥಿಗಳು ನಾಪತ್ತೆಯಾಗಿದ್ದಾರೆ.
ಕಾರ್ತಿಕ್ (31), ನಕುಲ್ (19), ಪವನ್ (30) ಹಾಗೂ ಚೇತನ್ (19) ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ದುರ್ದೈವಿಗಳು. ನಕುಲ್ ಮೃತದೇಹ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
ಬೆಂಗಳೂರಿನ ಕತ್ರಿಗುಪ್ಪೆಯಿಂದ ಮದುವೆ ಸಮಾರಂಭಕ್ಕಾಗಿ ಸ್ನೇಹಿತರ ತಂಡ ಶಿವಮೊಗ್ಗ ನಗರಕ್ಕೆ ಬಂದಿತ್ತು. ಅಲ್ಲಿಂದ ಗೂಗಲ್ನಲ್ಲಿ ಸ್ಥಳವೊಂದನ್ನು ನೋಡಿಕೊಂಡು ಎರಡು ಟಿಟಿಯಲ್ಲಿ ತೀರ್ಥಹಳ್ಳಿ ಕಡೆಗೆ ಬಂದಿದ್ದರು ಎನ್ನಲಾಗಿದೆ. ಮಹಿಷಿಯಲ್ಲಿ ನೀರಿಗಿಳಿದ ಒಬ್ಬಾತ ಮುಳುಗಿದ್ದು, ಆತನನ್ನು ರಕ್ಷಿಸಲು ತೆರಳಿದ ಮೂವರು ಕೂಡ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಗ್ನಿಶಾಮಕದಳ ಸಿಬ್ಬಂದಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಈಶ್ವರ್ ಮಲ್ಪೆ ಕೂಡ ಸ್ಥಳಕ್ಕೆ ಆಗಮಿಸಿದ್ದಾರೆ.
