ಬೆಂಗಳೂರು: ಕಿರುತೆರೆಯ ಜನಪ್ರಿಯ ಅಮೃತಧಾರೆ(Amruthadhare) ಧಾರಾವಾಹಿಯ ಮೂಲಕ ಮನೆಮಾತಾಗಿದ್ದ ಜೈದೇವ್ ಖ್ಯಾತಿಯ ರಾಣವ್ ಗೌಡ(Ranav Gowda) ಹಾಗೂ ಮಲ್ಲಿ ಪಾತ್ರಧಾರಿ ರಾಧಾ ಭಗವತಿ(Radha Bhagavathi) ಅವರು ಗುರುವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಧಾರಾವಾಹಿ ಸೆಟ್ನಲ್ಲಿ ಚಿಗುರಿದ ಇವರ ಪ್ರೀತಿ, ಇದೀಗ ಗುರು-ಹಿರಿಯರ ಸಮ್ಮುಖದಲ್ಲಿ ವಿವಾಹ ಬಂಧನದ ಮೂಲಕ ಹೊಸ ಅಧ್ಯಾಯ ಆರಂಭಿಸಿದೆ.
ಬೆಂಗಳೂರಿನ ಎಂ.ಆರ್. ಕನ್ವೆನ್ಷನ್ ಹಾಲ್ನಲ್ಲಿ ಗುರುವಾರ ಬೆಳಿಗ್ಗೆ 8:45 ರಿಂದ 9:45ರ ಶುಭ ಮುಹೂರ್ತದಲ್ಲಿ ಶಾಸ್ತ್ರೋಕ್ತವಾಗಿ ಧಾರೆ ಶಾಸ್ತ್ರ ನೆರವೇರಿತು. ಕುಟುಂಬಸ್ಥರು, ಆಪ್ತರು ಹಾಗೂ ಬಂಧು-ಮಿತ್ರರ ಆಶೀರ್ವಾದದೊಂದಿಗೆ ರಾಣವ್ ಮತ್ತು ರಾಧಾ ಸಪ್ತಪದಿ ತುಳಿದು ಅಧಿಕೃತವಾಗಿ ಸತಿಪತಿಗಳಾದರು. ಬುಧವಾರ ಸಂಜೆ ಈ ಜೋಡಿಯ ಅದ್ಧೂರಿ ಆರತಕ್ಷತೆ ಸಮಾರಂಭ ಜರುಗಿತ್ತು.
ಕಿರುತೆರೆ ಹಾಗೂ ಹಿರಿತೆರೆ ಎರಡರಲ್ಲೂ ಗುರುತಿಸಿಕೊಂಡಿರುವ ಈ ನವಜೋಡಿಯ ವಿವಾಹ ಸಂಭ್ರಮಕ್ಕೆ ಸ್ಯಾಂಡಲ್ವುಡ್ ಹಾಗೂ ಕಿರುತೆರೆಯ ಹಲವು ತಾರೆಯರು ಮತ್ತು ಗಣ್ಯರು ಆಗಮಿಸಿ ಶುಭ ಹಾರೈಸಿದ್ದಾರೆ.
‘ಅಮೃತಧಾರೆ’ ಧಾರಾವಾಹಿಯಲ್ಲಿ ಒಟ್ಟಿಗೆ ನಟಿಸುವಾಗಲೇ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಕಳೆದ ಫೆಬ್ರವರಿಯಲ್ಲಿ ಈ ಜೋಡಿಯ ನಿಶ್ಚಿತಾರ್ಥದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದವು. ವಿಶೇಷವೆಂದರೆ, ತಮ್ಮ ಪ್ರೀತಿಗೆ ಸಾಕ್ಷಿಯಾದ ‘ಅಮೃತಧಾರೆ’ ಧಾರಾವಾಹಿಯ ಸುಂದರ ನೆನಪನ್ನು ಈ ಜೋಡಿ ತಮ್ಮ ಮದುವೆಯ ಆಮಂತ್ರಣ ಪತ್ರದಲ್ಲೂ ವಿಶೇಷವಾಗಿ ಉಲ್ಲೇಖಿಸಿತ್ತು. ಇದೀಗ ರೀಲ್ ಜೋಡಿ ರಿಯಲ್ ಲೈಫ್ನಲ್ಲೂ ಒಂದಾಗಿದ್ದು, ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಮಳೆ ಸುರಿಸುತ್ತಿದ್ದಾರೆ.
