ವಿಜಯಪುರ: ಕಬ್ಬಿಗೆ 3,600 ರೂ.ಯ ಬೇಡಿಕೆ ಇತ್ತು, ನಾವು 3,700 ರೂ. ಕೊಟ್ಟಿದ್ದೇವೆ. ನಾನು ಸಹ ರೈತ, ರೈತರ ಸಂಕಷ್ಟ ಗೊತ್ತಿದೆ. ಸಕ್ಕರೆ ಕಾರ್ಖಾನೆಗಳ ಸಂಕಷ್ಟವು ಗೊತ್ತಿದೆ. ಭೀಮಾತೀರದ ರೈತರಿಗೆ ಅನುಕೂಲವಾಗಲಿ ಎಂದು ಡಿಮ್ಯಾಂಡ್ಗಿಂತ ಜಾಸ್ತಿ ದರ ನೀಡಿದ್ದೇವೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ್ (Yashvantarayagowda Patil) ಹೇಳಿದರು.
ವಿಜಯಪುರದಲ್ಲಿ (Vijayapura) ಮಾತನಾಡಿದ ಅವರು, ಇನ್ನು ಇತಿಹಾಸದಲ್ಲೇ ಬೇಡಿಕೆಗಿಂತ ಜಾಸ್ತಿ ದರ ನೀಡಿದ್ದೇವೆ. ಬರಗಾಲದಲ್ಲಿ ರೈತರಿಗೆ ಅನುಕೂಲವಾಗಲಿ ಎಂದು ಈ ರೀತಿ ಮಾಡಿದ್ದೇವೆ. ಇದು ರೈತ ವರ್ಗದಲ್ಲಿ ಸಂತಸ ಮೂಡಿಸಿದೆ. ಕಾರ್ಖಾನೆಯಿಂದಲೇ ಟನ್ಗೆ 3,700 ರೂ. ನೀಡ್ತಿದ್ದೇವೆ. ಮಳೆ ಇದ್ರೆ ಕಬ್ಬಿಗೆ ಇಳುವರಿ ಬರ್ತಿತ್ತು. ಬರದಿಂದ ಇಳುವರಿ ಕಡಿಮೆ ಇದೆ. ವೈಜ್ಞಾನಿಕವಾಗಿ ಎಲ್ಲವನ್ನೂ ವಿಚಾರ ಮಾಡಿ ಕಬ್ಬಿನ ದರ ನಿಗದಿ ಮಾಡಿದ್ದೇವೆ ಎಂದರು. ಇದನ್ನೂ ಓದಿ: ಕಬ್ಬಿನ ಬೆಂಬಲ ಬೆಲೆಗೆ ಆಗ್ರಹಿಸಿ ಬೆಳಗಾವಿ ಅಧಿವೇಶನ ಸಮಯಯಲ್ಲೇ ಉಗ್ರ ಹೋರಾಟಕ್ಕೆ ಚೂನಪ್ಪ ಪೂಜೇರಿ ಕರೆ
ಭೀಮಾನದಿಗೆ ನೀರು ಬಿಡುವ ಬಗ್ಗೆ ಮಹಾರಾಷ್ಟ್ರ ಸರ್ಕಾರಕ್ಕೆ ಮನವಿ ಮಾಡ್ತೇನೆ. ದಸೂರು, ಉಮರಜ್, ನಿವರಗಿವರೆಗೆ ಆದ್ರೂ ನೀರು ಬರಬೇಕಿತ್ತು. ಗಡಿಯ ಬ್ಯಾರೇಜ್ಗೆ ತಂದು ನೀರು ನಿಲ್ಲಿಸಿದ್ದಾರೆ, ಇದು ನೋವಾಗಿದೆ. ಅಲ್ಲಿ ಇನ್ನೂ 27 ಟಿಎಂಸಿ ನೀರು ಇದೆ. 7 ಟಿಎಂಸಿ ಕೊಡಬೇಕಿದೆ. ಇಂಡಿ ಬ್ಯಾರೇಜ್ಗೆ ಬರಲು 7 ಟಿಎಂಸಿ ಬೇಕು, 7 ಟಿಎಂಸಿ ಬಿಡಬೇಕಿತ್ತು. ನಾನು ಮಹಾರಾಷ್ಟ್ರ ಅಧಿಕಾರಿಗಳಿಗೆ ಮಾತನಾಡಿದ್ದೇನೆ. ಡಿಸೆಂಬರ್, ಮಾರ್ಚ್ನಲ್ಲಿ ನೀರು ಹರಿಸ್ತಿವಿ ಎಂದಿದ್ದಾರೆ. ನೀರು ಕೊಟ್ಟರೆ ರೈತರು ಬದುಕುತ್ತಾರೆ ಎಂದು ತಿಳಿಸಿದರು.
