– ಕೇಂದ್ರ ಸರ್ಕಾರ ಅನುದಾನ ಕೊಟ್ಟಿಲ್ಲ, ನಿಮ್ಮ ಕಷ್ಟ ನಾವೇ ಕೇಳಬೇಕು
– ಭದ್ರಾ ನೀರು ಹರಿಸಿದ್ದು ನಾನೇ ಎನ್ನುವುದಕ್ಕೆ ನಿಮ್ಮ ಕಣ್ಣೇ ಸಾಕ್ಷಿ ಎಂದ ಸಿಎಂ
ಚಿತ್ರದುರ್ಗ: ಬರಪೀಡಿತ ಹಿರಿಯೂರು ಕ್ಷೇತ್ರದ ಜನರ ಕಷ್ಟ ಕೇಳಲು ಕೇಂದ್ರ ಸರ್ಕಾರ (Central Govt) ಅನುದಾನ ನೀಡಿಲ್ಲ. ನಿಮ್ಮ ಕಷ್ಟಗಳನ್ನ ನಾವೇ ಕೇಳಬೇಕು, ಪರಿಹಾರ ಕೊಡಬೇಕು. ಬರದ ನಾಡಿಗೆ ನೀರು ಕೊಡುವ ಕೆಲಸವನ್ನ ಬಿಜೆಪಿ ಮತ್ತು ಜೆಡಿಎಸ್ನವರು ಮಾಡಿದ್ದರೆ ಅವರಿಗೆ ಶರಣಾಗುತ್ತಿದ್ದೆ ಎಂದು ಸಿಎಂ ಡಿಕೆ ಶಿವಕುಮಾರ್ (DK Sivakumar) ಹೇಳಿದರು.
ಹಿರಿಯೂರಿನಲ್ಲಿ ನಡೆದ ಪ್ರಜಾಸೇವಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಚಿತ್ರದುರ್ಗದ (Chitradurga) ಸಂಸದ ಗೋವಿಂದ ಕಾರಜೋಳ ಅವರು ಖಾಲಿ ಡಬ್ಬದಂತಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ಏನು ಮಾತನಾಡಿಲ್ಲ, ಅನುದಾನವನ್ನೂ ತಂದಿಲ್ಲ. ನಾನು ಅಭಿವೃದ್ಧಿ ಮಾಡಿಲ್ಲ ಎಂದಾದ್ರೆ ಜನರು ನನ್ನನ್ನು ಪ್ರಶ್ನಿಸಲಿ ಎಂದರು.
ಇಂದು ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ನೆಹರೂ ಮೈದಾನದಲ್ಲಿ ದೀಪ ಬೆಳಗುವ ಮೂಲಕ ‘ಪ್ರಜಾಸೇವೆ’ ಅಭಿಯಾನಕ್ಕೆ ಚಾಲನೆ ನೀಡಿ, ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದೆ.
ಸರ್ಕಾರವೇ ಜನರ ಬಳಿಗೆ ತೆರಳಿ, ಅವರ ಸಮಸ್ಯೆಗಳನ್ನು ನೇರವಾಗಿ ಆಲಿಸಿ, ಸ್ಥಳದಲ್ಲೇ ಪರಿಹಾರ ಕಲ್ಪಿಸುವ ಉದ್ದೇಶದೊಂದಿಗೆ ಈ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಜನರ ಅಗತ್ಯಗಳಿಗೆ ಆಡಳಿತ ಸ್ಪಂದಿಸಬೇಕು, ಜನಸಾಮಾನ್ಯರಿಗೂ ಸರ್ಕಾರಕ್ಕೂ ನಡುವಿನ ಅಂತರ ಕಡಿಮೆಯಾಗಬೇಕು. ಜನರ ವಿಶ್ವಾಸಕ್ಕೆ ತಕ್ಕಂತೆ ಜನಪರ ಆಡಳಿತ ನೀಡುವ ನಿಟ್ಟಿನಲ್ಲಿ ನಮ್ಮ ಪ್ರಯತ್ನ ನಿರಂತರವಾಗಿದೆ.
ಈ ಸಂದರ್ಭದಲ್ಲಿ ಸಚಿವರಾದ ಶ್ರೀ ರಘುಮೂರ್ತಿ, ಶ್ರೀ ಜಮೀರ್ ಅಹ್ಮದ್ ಖಾನ್, ಶ್ರೀ ಎನ್. ಚಲುವರಾಯಸ್ವಾಮಿ, ಶ್ರೀ ಹೆಚ್.ಸಿ.ಬಾಲಕೃಷ್ಣ, ರಾಜ್ಯಸಭಾ ಸದಸ್ಯರಾದ ಶ್ರೀ ಜಿ.ಸಿ.ಚಂದ್ರಶೇಖರ್, ಶಾಸಕರಾದ ಶ್ರೀ ಹೆಚ್.ಡಿ. ರಂಗನಾಥ್, ಶ್ರೀ ಬಿ.ಜಿ. ಗೋವಿಂದಪ್ಪ, ಶ್ರೀ ಎನ್.ವೈ. ಗೋಪಾಲಕೃಷ್ಣ, ಶ್ರೀ ಕೆ.ಸಿ. ವೀರೇಂದ್ರ ಪಪ್ಪಿ, ವಿಧಾನ ಪರಿಷತ್ ಸದಸ್ಯರಾದ ಶ್ರೀ ಡಿ.ಟಿ. ಶ್ರೀನಿವಾಸ್, ಮಾಜಿ ಸಂಸದರಾದ ಶ್ರೀ ಬಿ.ಎನ್. ಚಂದ್ರಪ್ಪ, ಮಾಜಿ ಸಚಿವರಾದ ಶ್ರೀ ಹೆಚ್. ಆಂಜನೇಯ, ಮಾಜಿ ಶಾಸಕರಾದ ಶ್ರೀಮತಿ ಪೂರ್ಣಿಮಾ ಶ್ರೀನಿವಾಸ್, ಕಾಂಗ್ರೆಸ್ ಮುಖಂಡರಾದ ಶ್ರೀ ಸುಹಾಸ್ ಸುಧಾಕರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
— DK Shivakumar (@DKShivakumar) November 21, 2026
ಬಿಜೆಪಿಯವರ (BJP) ವಿಚಾರ ನಮಗೆ ಬೇಡ. ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ (BY Election) ಕುಮಾರಸ್ವಾಮಿ ಅವರ ಮಗ ಮತ್ತು ಬಸವರಾಜ ಬೊಮ್ಮಾಯಿ ಅವರ ಮಗ ಗೆದ್ದಿದ್ದಾರೆಯೇ? ಜನರಿಗೆ ನಂಬಿಕೆ ಮುಖ್ಯ. ಮರಕ್ಕೆ ಬೇರು ಎಷ್ಟು ಮುಖ್ಯವೋ, ರಾಜಕಾರಣಕ್ಕೆ ಜನರ ವಿಶ್ವಾಸ ಅಷ್ಟೇ ಮುಖ್ಯ. ಹಿರಿಯೂರು ಜನರಿಗೆ ಕಾಂಗ್ರೆಸ್ ಮೇಲೆ ಅಪಾರ ನಂಬಿಕೆ ಇದೆ ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನ ಪ್ರಸ್ತಾಪಿಸಿದ ಅವರು, ನಿಮಗೆ ಉಚಿತ ವಿದ್ಯುತ್ ಸಿಗುತ್ತಿದೆಯೇ? ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಬರುತ್ತಿದೆಯೇ? ಮನೆಯ ಯಜಮಾನಿಗೆ ಪ್ರತಿ ತಿಂಗಳು 2 ಸಾವಿರ ರೂಪಾಯಿ ತಲುಪುತ್ತಿದೆಯೇ ಎಂದು ಪ್ರಶ್ನಿಸಿದರು. ನಮ್ಮ ಮತ್ತು ನಿಮ್ಮ ಸಂಬಂಧ ದೇವರು ಹಾಗೂ ಭಕ್ತರ ನಡುವಿನ ಸಂಬಂಧದಂತಿದೆ. ಅಮ್ಮನ ಮೂಲ ಪ್ರೀತಿ, ದೇವರ ನೆನಪಿನ ಮೂಲ ಭಕ್ತಿ. ಜನರ ನಂಬಿಕೆಗಿಂತ ದೊಡ್ಡದು ಯಾವುದೂ ಇಲ್ಲ ಎಂದರು.
ಭದ್ರಾ ನೀರು ಹರಿಸಿದ್ದು ನಾನೇ ಎನ್ನುವುದಕ್ಕೆ ನಿಮ್ಮ ಕಣ್ಣೇ ಸಾಕ್ಷಿ
ಹಿರಿಯೂರು ಕ್ಷೇತ್ರದ ಅಭಿವೃದ್ಧಿ ವಿಚಾರವಾಗಿ ಮಾತನಾಡಿದ ಸಿಎಂ, ಬಿಜೆಪಿಯವರು ಕೇಂದ್ರದಿಂದ 5,300 ಕೋಟಿ ರೂಪಾಯಿ ಅನುದಾನ ತರಲು ಪ್ರಯತ್ನಿಸಬೇಕು. ಜೆಡಿಎಸ್ನವರು ಕಾಡುಗೊಲ್ಲ ಸಮುದಾಯಕ್ಕೆ ಸರ್ಟಿಫಿಕೇಟ್ ಕೊಡಿಸುವ ಕೆಲಸ ಮಾಡಬೇಕು. ಭದ್ರಾ ನೀರು ಹರಿಸಿದ್ದು ನಾನೇ ಎನ್ನುವುದಕ್ಕೆ ನಿಮ್ಮ ಕಣ್ಣೇ ಸಾಕ್ಷಿ. ಸಣ್ಣ ನೀರಾವರಿ ಇಲಾಖೆಯಿಂದ 244 ಕೋಟಿ ರೂಪಾಯಿ ವೆಚ್ಚ ಮಾಡಿ ಕೆರೆಗಳನ್ನು ತುಂಬಿಸಿದ್ದೇವೆ ಎಂದು ತಿಳಿಸಿದರು.
ನಮಗೆ ಅಧಿಕಾರ ಬಂದ ದಿನವೇ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ್ದೇವೆ. ಕೆಲ ಫಲಾನುಭವಿಗಳ ಫೋನ್ ನಂಬರ್ ಹಾಗೂ ಬ್ಯಾಂಕ್ ಖಾತೆ ಸಂಖ್ಯೆಯಲ್ಲಿ ವ್ಯತ್ಯಾಸಗಳಿರುವುದರಿಂದ ಯೋಜನೆಯ ಹಣ ತಲುಪುವಲ್ಲಿ ಸಮಸ್ಯೆಯಾಗಿದೆ. ಫಲಾನುಭವಿಗಳು ಸರಿಯಾದ ಖಾತೆ ಸಂಖ್ಯೆ ನೀಡಬೇಕು. ಪರಿಶೀಲನೆ ನಡೆಸಿ ಅರ್ಹರಿಗೆ ಯೋಜನೆ ತಲುಪಿಸುವುದು ನನ್ನ ಗುರಿ. ರೈತರಿಗಾಗಿ ನೇಗಿಲ ಯೋಗಿ ಯೋಜನೆ ಜಾರಿಗೊಳಿಸಿದ್ದೇವೆ. ಸರ್ಕಾರದಿಂದ ತೇಗದ ಸಸಿಗಳನ್ನು ನೀಡುತ್ತೇವೆ. ಅವುಗಳನ್ನು ಮಕ್ಕಳಂತೆ ಜೋಪಾನವಾಗಿ ಬೆಳೆಸಬೇಕು. ಕೆಲ ವರ್ಷಗಳ ಬಳಿಕ ಅವು ಲಕ್ಷಾಂತರ ರೂಪಾಯಿ ಆದಾಯ ತಂದುಕೊಡಲಿವೆ. ನನಗೆ ಮತ್ತು ಸಿದ್ದರಾಮಯ್ಯ ಅವರ ನಾಯಕತ್ವಕ್ಕೆ ನೀವು ಆಶೀರ್ವಾದ ಮಾಡಿದ್ದೀರಿ. ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಚೆಂದ ಎಂದು ಹೇಳಿದರು.
ಬರದ ನಾಡಿಗೆ ನೀರು ಕೊಡುವ ಕೆಲಸವನ್ನು ಜೆಡಿಎಸ್ ಮತ್ತು ಬಿಜೆಪಿ ಮಾಡಿದ್ದರೆ ಅವರಿಗೆ ಶರಣಾಗುತ್ತಿದ್ದೆ. ಹಿರಿಯೂರಿನ ಜನರು ನಿಮ್ಮ ಊರಿಗೆ ಬರದಂತೆ ಬಹಿಷ್ಕಾರ ಹಾಕುವ ಪರಿಸ್ಥಿತಿ ಬರಬಾರದು ಎಂದು ಬಿಜೆಪಿ ಮತ್ತು ಜೆಡಿಎಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ನಿವೇಶನ ರಹಿತರಿಗೆ 30×40 ಅಳತೆಯ ನಿವೇಶನ ನೀಡಲು ಆದೇಶಿಸಲಾಗಿದೆ. ಮನೆ ಮಹಿಳೆಯರ ಹೆಸರಿನಲ್ಲಿ ಜಂಟಿ ಖಾತೆ ಮಾಡಿಕೊಡಲಾಗುವುದು. ವಿಶೇಷ ಯೋಜನೆಗಳ ಫಲಾನುಭವಿಗಳಾಗುವ ಅವಕಾಶವನ್ನ ಜನರು ಬಳಸಿಕೊಳ್ಳಬೇಕು. ಅದೃಷ್ಟಲಕ್ಷ್ಮಿ ನಿಮ್ಮ ಮನೆ ಬಾಗಿಲಿಗೆ ಬಂದಿದ್ದಾಳೆ. ನಾನು ಮಾಡಿದ ಕೆಲಸಕ್ಕೆ ಕೂಲಿ ಕೇಳಲು ಬಂದಿದ್ದೇನೆ. ಡಿಕೆ ಶಿವಕುಮಾರ್ ಮಾಡಿದ ಕೆಲಸಕ್ಕೆ ಜನರು ಕೂಲಿ ನೀಡಬೇಕು ಎಂದು ಮನವಿ ಮಾಡಿದರು.
ಇನ್ನೂ 2 ಟಿಎಂಸಿ ನೀರಿಗೆ ಮನವಿ: ಚಲುವರಾಯಸ್ವಾಮಿ
ಇದೇ ವೇಳೆ, ಹಿರಿಯೂರು ಕ್ಷೇತ್ರಕ್ಕೆ ಇನ್ನೂ ಎರಡು ಟಿಎಂಸಿ ನೀರು ಹರಿಸುವಂತೆ ಉಸ್ತುವಾರಿ ಸಚಿವ ಟಿ. ರಘುಮೂರ್ತಿ ಮನವಿ ಮಾಡಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವ ಚಲುವರಾಯಸ್ವಾಮಿ, ಈ ಪ್ರಸ್ತಾವನೆಗೆ ಕೆಲವು ಜಿಲ್ಲೆಗಳ ಮುಖಂಡರಿಂದ ವಿರೋಧ ವ್ಯಕ್ತವಾಗಿದೆ. ಈ ಕುರಿತು ಐಸಿಸಿ ಸಭೆ ಕರೆದು ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

