ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ (Sting Operation Case) ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕಿ ಕೃಪಾ ಆಳ್ವ (Kripa Alva) ಸೇರಿದಂತೆ ಆರು ಮಂದಿ ಆರೋಪಿಗಳಿಗೆ ಇದೀಗ ಬಂಧನದ ಭೀತಿ ಎದುರಾಗಿದೆ.
ಈ ಪ್ರಕರಣದಲ್ಲಿ ಕೃಪಾ ಆಳ್ವ, ಖಾಸಗಿ ಚಾನೆಲ್ ಮಾಲೀಕ ಹಾಗೂ ಪ್ರಜ್ವಲ್ ಪ್ರಸಾದ್, ಚಂದನ್ ಎಚ್.ಎಸ್, ಕೆ.ವಿ ಪ್ರಶಾಂತ್ ಕುಮಾರ್ ಮತ್ತು ವಿನೋದ್ ಕುಮಾರ್ ಅವರು ಈಗಾಗಲೇ ತನಿಖಾಧಿಕಾರಿಗಳ ಮುಂದೆ ಎರಡು-ಮೂರು ಬಾರಿ ಹಾಜರಾಗಿ ವಿಚಾರಣೆ ಎದುರಿಸಿದ್ದಾರೆ. ಆದಾಗ್ಯೂ, ಆರೋಪಿಗಳು ಸಲ್ಲಿಸಿದ್ದ ಮಧ್ಯಂತರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ನಿನ್ನೆ ಬೆಂಗಳೂರಿನ 66ನೇ ಸಿಸಿಎಚ್ ನ್ಯಾಯಾಲಯ ವಜಾಗೊಳಿಸಿ ಆದೇಶ ಹೊರಡಿಸಿದೆ.
ಸೆಷನ್ಸ್ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಂಡಿರುವ ಹಿನ್ನೆಲೆ, ಯಾವುದೇ ಕ್ಷಣದಲ್ಲಿ ಬಂಧನವಾಗುವ ಆತಂಕದಲ್ಲಿರುವ ಈ ಆರು ಮಂದಿ ಆರೋಪಿಗಳು ಇದೀಗ ಕಾನೂನು ಹೋರಾಟದ ಮುಂದಿನ ಹಂತವಾಗಿ ಹೈಕೋರ್ಟ್ ಮೊರೆ ಹೋಗಲು ಸಿದ್ಧತೆ ನಡೆಸಿದ್ದಾರೆ. 66ನೇ ಸಿಸಿಎಚ್ ನ್ಯಾಯಾಲಯದ ಆದೇಶವನ್ನ ಪ್ರಶ್ನಿಸಿ ಇಂದು ಹೈಕೋರ್ಟ್ನಲ್ಲಿ ಜಾಮೀನು ಅರ್ಜಿ ಸಲ್ಲಿಸುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.

