– 1 ವರ್ಷ ನಮ್ಮನ್ನ ಯಾರೂ ಏನೂ ಮಾಡೋಕಾಗಲ್ಲ ಅಂದುಕೊಂಡಿದ್ರೆ ಅದು ನಿಮ್ಮ ಭ್ರಮೆ
ಬೆಂಗಳೂರು: ನೀವು ಇಲ್ಲಿ ಯಾರಿಗೂ ಒಂದು ರೂಪಾಯಿ ಲಂಚ ಕೊಟ್ಟು ಅಧಿಕಾರಕ್ಕೆ ಬಂದಿಲ್ಲ. ನೀವು ಪರ್ಫೆಕ್ಟ್ ಆಗಿ ಕೆಲಸ ಮಾಡಿ. ಈಗ ಹೊಸದಾಗಿ ಬಂದಿದ್ದೇನೆ, 1 ವರ್ಷ ನಮ್ಮನ್ನ ಯಾರೂ ಏನೂ ಮಾಡೋಕಾಗಲ್ಲ ಅಂದುಕೊಂಡಿದ್ರೆ ಅದು ನಿಮ್ಮ ಭ್ರಮೆ. ಸರಿಯಾಗಿ ಕೆಲಸ ಮಾಡಲಿಲ್ಲ ಅಂದ್ರೆ ಒಂದೇ ಗಂಟೆಯೊಳಗೆ ಚೇಂಜ್ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar), ನೂತನ ಕಮಿಷನರೇಟ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಪೊಲೀಸ್ ಅಧಿಕಾರಿಗಳ ಸಭೆಯನ್ನುದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿಗಳು, ನೂತನವಾಗಿ ನೇಮಕ ಆಗಿರುವ ಐವರು ಕಮಿಷನರೇಟ್ಗಳಿಗೆ (Bengaluru Commissionerates) ಎಚ್ಚರಿಸಿದರು.
ಜನಕ್ಕೆ ಪೊಲೀಸ್ ಅಂದ್ರೆ ಭಕ್ತಿನೂ, ಗೌರವವೂ ಇರಬೇಕು, ಭಯನೂ ಇರಬೇಕು. ಅಪರಾಧಿಗಳಿಗೆ ಕಠಿಣ ಶಿಕ್ಷೆ ಆಗಬೇಕು ಅನ್ನೋ ಕಾರಣಕ್ಕೆ 5 ಕಮಿಷನರೇಟ್ ಹುದ್ದೆಗಳನ್ನ ಮಾಡಿದ್ದೇವೆ. ನೀವು ಯಾವ ರೀತಿ ನಡೆದುಕೊಳ್ಳಬೇಕು ಅನ್ನೋ ಮಾರ್ಗದರ್ಶನ ನೀಡಿದ್ದೇವೆ. ಆರ್ಥಿಕ ಅಪರಾಧ, ಟ್ರಾಫಿಕ್, ಕ್ರೈಂ, ದ್ವೇಷ ಭಾಷಣ ಯಾವುದೇ ಇರಬಹುದು, ಸಂಪೂರ್ಣವಾಗಿ ನಿಯಂತ್ರಣ ಮಾಡಬೇಕು. ನಾಗರಿಕ ರಕ್ಷಣೆಯೊಂದಿಗೆ ಅಪರಾಧಗಳು ನಿಯಂತ್ರಣ ಆಗಬೇಕು ಎಂದು ಸಲಹೆ ನೀಡಿದರು.
ʻನ್ಯೂಯಾರ್ಕ್ ಟೈಮ್ಸ್ʼ ಬೆಂಗಳೂರು ಬಗ್ಗೆ ಬರೆಯುತ್ತೆ. ಯಾಕಂದ್ರೆ ಬೆಂಗಳೂರು ಈಗ ಗ್ಲೋಬಲ್ ಸಿಟಿ. ಮುಂಬೈ, ವಿಶಾಖಪಟ್ಟಣ ನಗರಗಳಲ್ಲಿ ಸಮುದ್ರ ಇದ್ದರೂ ಜನ ಬೆಂಗಳೂರು ಕಡೆ ನೋಡ್ತಾರೆ. ನಮಗೆ, ನಮ್ಮ ಸರ್ಕಾರಕ್ಕೆ ಒಳ್ಳೆ ಹೆಸರು ತನ್ನಿ. ನಾನು ಬಯಸೋದು ಅಷ್ಟೇ. ನೀವು ಯಾರಾದರೂ ನಮ್ಮ ಸರ್ಕಾರದ ರಾಜಕೀಯ ಪ್ರತಿನಿಧಿಗಳಿಗೆ 1 ರೂಪಾಯಿ ಲಂಚ ಕೊಟ್ಟು ಈ ಹುದ್ದೆಗೆ ಬಂದಿದ್ದೀರಾ ಹೇಳಿ ನೋಡೋಣ? ನೀವು ಪರ್ಫೆಕ್ಟ್ ಆಗಿ ಕೆಲಸ ಮಾಡಿ. ಈಗ ಹೊಸದಾಗಿ ಬಂದಿದ್ದೇನೆ. 1 ವರ್ಷ ಯಾರೂ ನಮ್ಮನ್ನು ಏನೂ ಮಾಡಲು ಆಗಲ್ಲ ಅಂತಾ ನೀವೇನಾದ್ರೂ ತಿಳಿದುಕೊಂಡದ್ದರೆ ಅದು ಭ್ರಮೆ. ಸರಿಯಾಗಿ ಕೆಲಸ ಮಾಡಲಿಲ್ಲ ಅಂದ್ರೆ ಒಂದೇ ಗಂಟೆಯೊಳಗೆ ಚೇಂಜ್ ಮಾಡುತ್ತೇವೆ ಎಂದು ಎಚ್ಚರಿಕೆ ಕೊಟ್ಟರು.
ಬರೀ ವ್ಯವಹಾರ ಮಾಡ್ಕೊಂಡು ಕೂತಿದ್ದಾರೆ
ಕೆಲವು ಪೊಲೀಸ್ ಇನ್ಸ್ಪೆಕ್ಟರ್ ಬರೀ ವ್ಯವಹಾರ ಮಾಡ್ಕೊಂಡು ಕೂತಿದ್ದಾರೆ. ಅವರ ಕುಟುಂಬ ಸದಸ್ಯರ ಹೆಸರಲ್ಲಿ ಎಕರೆಗಟ್ಟಲೆ ಜಮೀನು ರಿಜಿಸ್ಟರ್ ಮಾಡಿಕೊಂಡಿದ್ದಾರೆ. ಬೇನಾಮಿ ಆಸ್ತಿ ಮಾಡೋದೇ ಅವರ ಕೆಲಸ ಆಗಿದೆ. ನನ್ನತ್ರ ಪ್ರತಿಯೊಂದು ವಿವರ ಇದೆ. ನಿಮಗೆ ಅವಕಾಶ ಕೊಟ್ಟಿದ್ದೇವೆ. ಯಾವುದೇ ಒತ್ತಡಕ್ಕೆ ಮಣಿದು ನಿಮಗೇ ಈ ಜವಾಬ್ದಾರಿ ಕೊಟ್ಟಿಲ್ಲ. ಉತ್ತಮವಾಗಿ ಕೆಲಸ ಮಾಡಿ, ಸೈಬರ್ ಕ್ರೈಂ, ಆನ್ಲೈನ್ ಕ್ರೈಂ, ಡ್ರಗ್ ಮಾಫಿಯಾ ಪರಿಣಾಮಕಾರಿಯಾಗಿ ತಡೆಯಬೇಕು. ಪೊಲೀಸ್ ಸ್ಟೇಷನ್ ರಿಯಲ್ ಎಸ್ಟೇಟ್ ವ್ಯವಹಾರ ಕೇಂದ್ರ ಆಗಬಾರದು ನನಗೆ ಮತ್ತು ನಮ್ಮ ಸರಕಾರಕ್ಕೆ ಗೌರವ ಬರುವ ರೀತಿಯಲ್ಲಿ ಕೆಲಸ ಮಾಡಿ, ಟೀಂ ಬೆಂಗಳೂರಾಗಿ ಕೆಲಸ ಮಾಡಬೇಕು. ಈಗ 5 ಪೊಲೀಸ್ ಕಮಿಷನರೇಟ್ ಮಾಡಿದ್ದೇವೆ. ನಿಮಗೇ ನಿಮ್ಮನ್ನು ಪ್ರೂವ್ ಮಾಡಲು ಉತ್ತಮ ಅವಕಾಶ. ನನಗೆ ಪರ್ಫಾರ್ಮೆನ್ಸ್, ಗವರ್ನನ್ಸ್, ಅಕೌಂಟೆಂಬಿಲಿಟಿ ಬೇಕು ಎಂದು ಖಡಕ್ಕಾಗಿ ಹೇಳಿದರು.
