– ಯುವತಿಯ ತಂದೆ, ನೆರೆಹೊರೆಯವರ ಮೇಲೆ ಕೇಸ್ ದಾಖಲು
– ಮದುವೆ ಫಿಕ್ಸ್ ಆಗಿದ್ದಕ್ಕೆ ಮನೆಗೆ ನುಗ್ಗಿ ಹುಚ್ಚಾಟ
ನವದೆಹಲಿ: ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ (Delhi Influencer) ಒಬ್ಬರನ್ನು ಹುಚ್ಚನಂತೆ ಪ್ರೀತಿಸುತ್ತಿದ್ದ ಅಭಿಮಾನಿಯೊಬ್ಬ, ಆಕೆಯ ಮನೆಗೆ ನುಗ್ಗಿ ಮದುವೆಯಾಗುವಂತೆ ಒತ್ತಾಯಿಸಿ ಪ್ರಾಣ ಕಳೆದುಕೊಂಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ.
ಯುವಕನ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಇನ್ಫ್ಲುಯೆನ್ಸರ್ ತಂದೆ ಮತ್ತು ನೆರೆಹೊರೆಯವರನ್ನು ಪೊಲೀಸರು ಬಂಧಿಸಿದ್ದಾರೆ.
ಮೃತ ಯುವಕನನ್ನು ಉತ್ತರ ಪ್ರದೇಶದ ಘಾಜಿಪುರ ಮೂಲದ ಅಭಿನವ್ ಎಂದು ಗುರುತಿಸಲಾಗಿದೆ. ಚೆನ್ನೈನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಈತ, ಇನ್ಸ್ಟಾಗ್ರಾಮ್ನಲ್ಲಿ 6 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿರುವ ನೇಹಾ ಬಿಶ್ತ್ ಎಂಬ ಇನ್ಫ್ಲುಯೆನ್ಸರ್ನ ಕಟ್ಟಾ ಅಭಿಮಾನಿಯಾಗಿದ್ದ. ನೇಹಾ ಅವರ ರೀಲ್ಸ್ಗಳನ್ನು ನೋಡುತ್ತಾ ಆಕೆಯ ಮೇಲೆ ಪ್ರೀತಿ ಬೆಳೆಸಿಕೊಂಡಿದ್ದ ಅಭಿನವ್, ಕೆಲವು ತಿಂಗಳ ಹಿಂದೆಯಷ್ಟೇ ಆಕೆಯ ಮನೆಗೂ ಭೇಟಿ ನೀಡಿದ್ದ.
ಇತ್ತೀಚೆಗೆ ನೇಹಾ ಬಿಶ್ತ್ ತಮ್ಮ ನಿಶ್ಚಿತಾರ್ಥ ಹಾಗೂ ಮದುವೆಯ ವೀಡಿಯೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ನೇಹಾ ಬೇರೊಬ್ಬರನ್ನು ಮದುವೆಯಾಗುತ್ತಿರುವುದನ್ನು ಸಹಿಸದ ಅಭಿನವ್, ನವೆಂಬರ್ 7ರಂದು ನೇರವಾಗಿ ಚೆನ್ನೈನಿಂದ ದೆಹಲಿಗೆ ಬಂದಿದ್ದಾನೆ. ಪೂರ್ವ ದೆಹಲಿಯ ಮಧು ವಿಹಾರ್ನಲ್ಲಿರುವ ನೇಹಾ ಅವರ ಮನೆಗೆ ಮದ್ಯದ ನಶೆಯಲ್ಲಿ ಬಲವಂತವಾಗಿ ನುಗ್ಗಿದ ಆತ, “ನನ್ನನ್ನೇ ಮದುವೆಯಾಗಬೇಕು” ಅಂತ ಗಲಾಟೆ ಮಾಡಿದ್ದಾನೆ.
ಅಸಲಿಗೆ ಅಭಿನವ್ ಯಾರು ಅನ್ನೋದೇ ನೇಹಾ ಅವರಿಗೆ ಗೊತ್ತಿರಲಿಲ್ಲ. ಆತನ ಹುಚ್ಚಾಟದಿಂದ ಕೋಪಗೊಂಡ ನೇಹಾ ಕುಟುಂಬಸ್ಥರು ಮತ್ತು ನೆರೆಹೊರೆಯವರು, ಪೊಲೀಸರಿಗೆ ಮಾಹಿತಿ ನೀಡುವ ಮುನ್ನ ಅಭಿನವ್ ಮೇಲೆ ಹಿಗ್ಗಾಮುಗ್ಗಾ ಹಲ್ಲೆ ನಡೆಸಿದ್ದಾರೆ.ಇದನ್ನೂ ಓದಿ: ಮಹಾರಾಣಿ ಪಟ್ಟದಿಂದ ಕಳಪೆಗೆ – ಬಿಗ್ಬಾಸ್ ಇತಿಹಾಸದಲ್ಲೇ ಮೊದಲ ಬಾರಿಗೆ ಮೂವರು ಜೈಲುಪಾಲು
ಪೊಲೀಸರು ಸ್ಥಳಕ್ಕೆ ಬಂದಾಗ ಅಭಿನವ್ ಬೆನ್ನು ಮತ್ತು ಬಲಗಾಲಿಗೆ ಗಂಭೀರ ಗಾಯಗಳಾಗಿತ್ತು. ತಕ್ಷಣ ಆತನನ್ನು ರಾಜೀವ್ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆತ ಸಾವನ್ನಪ್ಪಿದ್ದಾನೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ನೇಹಾ ತಂದೆ ವೀರೇಂದ್ರ ಬಿಶ್ತ್ ಮತ್ತು ನೆರೆಹೊರೆಯವರನ್ನು ಬಂಧಿಸಿದ್ದಾರೆ. ಹಲ್ಲೆಯಲ್ಲಿ ಭಾಗಿಯಾದ ಇತರರಿಗಾಗಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ.ಇದನ್ನೂ ಓದಿ: ಶೆಟ್ಟಿಹಳ್ಳಿ ಗ್ರಾಮದ ಕಾಫಿತೋಟದಲ್ಲಿ ನಿಂತ 32 ಆನೆಗಳು – ಡ್ರೋನ್ ಕ್ಯಾಮೆರಾದಲ್ಲಿ ಕಾಡಾನೆ ಹಿಂಡು ಪ್ರತ್ಯಕ್ಷ
