ಬೆಂಗಳೂರು: ಕನ್ನಡದ ಜನಪ್ರಿಯ ಸಿನಿಮಾ ‘ಅಮೃತವರ್ಷಿಣಿ’ (Amruthavarshini 2) ಬಿಡುಗಡೆಯಾಗಿ ಸುಮಾರು ಮೂರು ದಶಕಗಳ ಬಳಿಕ ಅದರ ಎರಡನೇ ಭಾಗ ತೆರೆಗೆ ಬರಲು ಸಿದ್ಧವಾಗುತ್ತಿದೆ. ಬಿ.ಎಸ್. ಸುಧೀಂದ್ರ ಹಾಗೂ ಆರ್. ನವೀನ್ ನಿರ್ಮಾಣದಲ್ಲಿ, ದಿನೇಶ್ ಬಾಬು ನಿರ್ದೇಶನದಲ್ಲಿ ‘ಅಮೃತವರ್ಷಿಣಿ 2’ ಚಿತ್ರ ಮೂಡಿಬರಲಿದೆ. ಜನವರಿ 14ರ ಸಂಕ್ರಾಂತಿ ಹಬ್ಬದಂದು ಚಿತ್ರದ ಚಿತ್ರೀಕರಣ ಆರಂಭವಾಗಲಿದ್ದು, ಕೊಡೈಕೆನಾಲ್ ಹಾಗೂ ಬೆಂಗಳೂರಿನಲ್ಲಿ ಶೂಟಿಂಗ್ ನಡೆಯಲಿದೆ.
1997ರಲ್ಲಿ ತೆರೆಕಂಡಿದ್ದ ‘ಅಮೃತವರ್ಷಿಣಿ’ ಚಿತ್ರದಲ್ಲಿ ರಮೇಶ್ ಅರವಿಂದ್, ಸುಹಾಸಿನಿ ಹಾಗೂ ಶರತ್ ಬಾಬು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದರು. ಭಾವನಾತ್ಮಕ ಕಥೆ, ಮನಮುಟ್ಟುವ ಸಂಗೀತ ಮತ್ತು ಕಲಾವಿದರ ಅಭಿನಯದಿಂದ ಈ ಸಿನಿಮಾ ಪ್ರೇಕ್ಷಕರ ಮೆಚ್ಚುಗೆ ಗಳಿಸಿತ್ತು. ಇಂದಿಗೂ ಕನ್ನಡ ಸಿನಿಪ್ರೇಮಿಗಳ ಮನಸ್ಸಿನಲ್ಲಿ ಈ ಚಿತ್ರ ವಿಶೇಷ ಸ್ಥಾನ ಪಡೆದಿದೆ.
ಈಗ ಚಿತ್ರದ ಎರಡನೇ ಭಾಗದಲ್ಲಿ ಮೂಲ ಚಿತ್ರದ ಪ್ರಮುಖ ಕಲಾವಿದರಾದ ರಮೇಶ್ ಅರವಿಂದ್ ಹಾಗೂ ಸುಹಾಸಿನಿ ಮತ್ತೆ ಒಟ್ಟಿಗೆ ಅಭಿನಯಿಸುತ್ತಿದ್ದಾರೆ. ವಿಶೇಷವೆಂದರೆ, ಮೊದಲ ಭಾಗವನ್ನು ನಿರ್ದೇಶಿಸಿದ್ದ ದಿನೇಶ್ ಬಾಬು ಅವರೇ ‘ಅಮೃತವರ್ಷಿಣಿ 2’ಕ್ಕೂ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.ಇದನ್ನೂ ಓದಿ: ‘ಹಲ್ಕಾ ಡಾನ್’ ಚಿತ್ರದ ಮಾಸ್ ಫಸ್ಟ್ ಕಟ್ ಟೀಸರ್ ರಿಲೀಸ್; ರಗಡ್ ಲುಕ್ ನಲ್ಲಿ ಪ್ರಮೋದ್
ಇನ್ನು ಜನಪ್ರಿಯ ನಟರಾದ ರಾಮಕೃಷ್ಣ ಹಾಗೂ ತಾರಾ ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಉಳಿದ ತಾರಾಬಳಗ ಮತ್ತು ತಾಂತ್ರಿಕ ವರ್ಗದ ಬಗ್ಗೆ ಚಿತ್ರತಂಡ ಸದ್ಯದಲ್ಲೇ ಮಾಹಿತಿ ಹಂಚಿಕೊಳ್ಳಲಿದೆ.
ಸುಮಾರು 30 ವರ್ಷಗಳ ಬಳಿಕ ‘ಅಮೃತವರ್ಷಿಣಿ’ ಚಿತ್ರದ ಜೋಡಿಯನ್ನು ಮತ್ತೆ ತೆರೆಮೇಲೆ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. ಹಳೆಯ ಚಿತ್ರದ ಭಾವನಾತ್ಮಕ ಸೊಗಡಿನೊಂದಿಗೆ ಹೊಸ ಕಥೆಯನ್ನು ಹೇಗೆ ಕಟ್ಟಿಕೊಡಲಿದ್ದಾರೆ ಎಂಬ ಕುತೂಹಲವೂ ಮೂಡಿದೆ.ಇದನ್ನೂ ಓದಿ: ವಾಹನಗಳ ಮೈಲೇಜ್ ಕಡಿಮೆ ಆಗ್ತಿರೋದು ಎಥೆನಾಲ್ ಮಿಶ್ರಣದಿಂದಲ್ಲ, ಬೆಂಗಳೂರಿನ ರಸ್ತೆಗುಂಡಿಗಳಿಂದ: ಆರ್ ಅಶೋಕ್
