ರಾಮನಗರ: ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಬಾಲಕಿಯೊಬ್ಬಳಿಗೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ (H D Kumaraswamy) ಅವರು 2.50 ಲಕ್ಷ ಮೌಲ್ಯದ ಆಕ್ಸಿಜನ್ ಕಾನ್ಸೆಂಟ್ರೇಟರ್ ಅನ್ನು ಕೊಡಿಸಿ ಮಾನವೀಯತೆ ಮೆರೆದಿದ್ದಾರೆ.
ರಾಮನಗರ ಜಿಲ್ಲೆಯ ಹಾರೋಹಳ್ಳಿ ತಾಲೂಕಿನ ಮರಳವಾಡಿ ಹೋಬಳಿಯ ಸುಂಡಘಟ್ಟ ಗ್ರಾಮದ ರಾಜಲಕ್ಷ್ಮಿ ಚಂದ್ರು ಅವರ ಪುತ್ರಿಯಾದ 14 ವರ್ಷದ ಕುಮಾರಿ ನವ್ಯಶ್ರೀ ಅವರನ್ನು ಗುರುವಾರ ಬೆಳಗ್ಗೆ ಬೆಂಗಳೂರಿನ ಜೆಪಿ ನಗರದ ತಮ್ಮ ನಿವಾಸಕ್ಕೆ ಕರೆಸಿಕೊಂಡ ಸಚಿವರು, ಆ ಬಾಲಕಿಗೆ ಆಕ್ಸಿಜನ್ ಕಾನ್ಸೆಂಟ್ರೇಟರ್ ಅನ್ನು ಹಸ್ತಾಂತರಿಸಿದರು.
ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಬಾಲಕಿಗೆ ಅತ್ಯುತ್ತಮ ಗುಣಮಟ್ಟದ ಆಕ್ಸಿಜನ್ ಕಾನ್ಸಂಟ್ರೇಟರ್ ಅನ್ನು ಬಳಸಬೇಕು ಎಂದು ವೈದ್ಯರು ಸಲಹೆ ಮಾಡಿದರು. ದುಬಾರಿಯಾದ ಈ ಉಪಕರಣವನ್ನು ಖರೀದಿಸಲು ಸಾಧ್ಯವಾಗದೆ ಬಾಲಕಿಯ ಪೋಷಕರು ಸಚಿವ ಕುಮಾರಸ್ವಾಮಿಯವರ ನೆರವನ್ನು ಕೇಳಿದ್ದರು. ಕಳೆದ ಆಗಸ್ಟ್ 30ರಂದು ಜೆಪಿ ನಗರದ ನಿವಾಸದಲ್ಲಿ ಸಚಿವರನ್ನು ಭೇಟಿಯಾಗಿದ್ದ ಬಾಲಕಿಯ ಪೋಷಕರು ಈ ಬಗ್ಗೆ ತಮ್ಮ ಅಳಲನ್ನು ತೋಡಿಕೊಂಡಿದ್ದರು.ಇದನ್ನೂ ಓದಿ: ಗುಂಡು ಹಾರಿಸಿ ಕ್ಷಣಾರ್ಧದಲ್ಲಿ ಪರಾರಿಯಾಗುವ ನರರಾಕ್ಷಸ – CRPF ಚೆಕ್ಪೋಸ್ಟ್ ಮೇಲೆ ಉಗ್ರ ಲತೀಫ್ ಭಟ್ನಿಂದ ದಾಳಿ ಶಂಕೆ
ತಮ್ಮ ಮಗಳು ಈಗ 9ನೇ ತರಗತಿಯನ್ನು ವ್ಯಾಸಂಗ ಮಾಡುತ್ತಿದ್ದಾಳೆ. ಪ್ರತಿಭಾವಂತೆಯಾದ ಆಕೆ ಅನಾರೋಗ್ಯಕ್ಕೆ ತುತ್ತಾಗಿದ್ದಾಳೆ. ಬಡವರಾದ ನಮಗೆ ಅಷ್ಟು ಹಣವನ್ನು ಖರ್ಚು ಮಾಡಿ ಆಕ್ಸಿಜನ್ ಕಾನ್ಸೆಂಟ್ರೇಟರ್ ಕೊಡಿಸಲು ಅಸಾಧ್ಯ. ತಾವು ನಮಗೆ ನೆರವಾಗಿ ಮಗುವಿನ ಜೀವ ರಕ್ಷಣೆ ಮಾಡಬೇಕು ಎಂದು ಕೋರಿದ್ದರು.
📍ಬೆಂಗಳೂರು
ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ರಾಮನಗರ ಜಿಲ್ಲೆಯ ಹಾರೋಹಳ್ಳಿ ತಾಲೂಕಿನ ಮರಳವಾಡಿ ಹೋಬಳಿಯ ಸುಂಡಘಟ್ಟ ಗ್ರಾಮದ ಶ್ರೀಮತಿ ರಾಜಲಕ್ಷ್ಮಿ, ಶ್ರೀ ಚಂದ್ರು ಅವರ ಪುತ್ರಿಯಾದ 14 ವರ್ಷದ ಕುಮಾರಿ ನವ್ಯಶ್ರೀ ಅವರಿಗೆ ಆಕ್ಸಿಜನ್ ಕಾನ್ಸೆಂಟ್ರೇಟರ್ ಅನ್ನು ಹಸ್ತಾಂತರಿಸಲಾಯಿತು. ವಿಷಯವೆಂದರೆ, ಬಾಲಕಿಯು ಈ ಆಕ್ಸಿಜನ್ ಕಾನ್ಸೆಂಟ್ರೇಟರ್ ಅನ್ನು ಶಾಲಾ ಬ್ಯಾಗ್ ನಂತೆಯೇ ತೆಗೆದುಕೊಂಡು ಹೋಗಬಹುದಾಗಿದೆ. ಅತ್ಯಂತ ಸುಧಾರಿತ ತಂತ್ರಜ್ಞಾನದ ಕಾನ್ಸೆಂಟ್ರೇಟರ್ ಇದಾಗಿದೆ.
ಅನಾರೋಗ್ಯದಿಂದ ಬಳಲುತ್ತಿದ್ದ ಪ್ರತಿಭಾವಂತ ವಿದ್ಯಾರ್ಥಿನಿ ನವ್ಯಶ್ರೀ ಅವರ ಪೋಷಕರ ಮನವಿಯ ಮೇರೆಗೆ ₹2.50 ಲಕ್ಷ ಮೌಲ್ಯದ ಆಕ್ಸಿಜನ್ ಕಾನ್ಸೆಂಟ್ರೇಟರ್ ಕೊಡಿಸಲಾಯಿತು. ಬಾಲಕಿ ಆದಷ್ಟು ಬೇಗ ಚೇತರಿಸಿಕೊಳ್ಳಿ ಹಾಗೂ ಚಿಕಿತ್ಸೆಗೆ ಸಂಬಂಧಿಸಿದ ಮಾಹಿತಿಯನ್ನು ಕಾಲಕಾಲಕ್ಕೆ ತಿಳಿಸುವಂತೆ ಪೋಷಕರಿಗೆ ಸೂಚಿಸಿದ್ದೇನೆ.
— ಹೆಚ್.ಡಿ.ಕುಮಾರಸ್ವಾಮಿ | HD Kumaraswamy (@hd_kumaraswamy) November 12, 2026
ಬಾಲಕಿಯ ಪೋಷಕರ ಮನವಿಗೆ ಓಗೊಟ್ಟ ಕೇಂದ್ರ ಸಚಿವರು, ತಕ್ಷಣವೇ ಮಗುವಿನ ಆರೋಗ್ಯಕ್ಕೆ ಸಂಬಂಧಿಸಿ ವೈದ್ಯರಿಂದ ಮಾಹಿತಿಯನ್ನು ಪಡೆದುಕೊಂಡರು. ತಮ್ಮ ಸ್ವಂತ ಖರ್ಚಿನಲ್ಲಿ ಬಾಲಕಿಗೆ ಅತ್ಯಗತ್ಯವಾಗಿ ಬೇಕಾಗಿದ್ದ ಇಗೋಜೆನ್ ರೋವ್ 6 ಪೋರ್ಟಬಲ್ ಆಕ್ಸಿಜನ್ ಕಾನ್ಸೆಂಟ್ರೇಟರ್ ಅನ್ನು ಖರೀದಿಸಿ ಆಕೆಯ ಪೋಷಕರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಬಾಲಕಿಯ ಜೊತೆ ಕೆಲಕಾಲ ಮಾತನಾಡಿದ ಸಚಿವರು, ವೈದ್ಯರು ನೀಡುವ ಚಿಕಿತ್ಸೆಯನ್ನು ಚಾಚೂ ತಪ್ಪದಂತೆ ಪಡೆದುಕೊಳ್ಳಬೇಕು ಎಂದು ಸೂಚಿಸಿದರು. ಹಾಗೆ ಮಗುವಿನ ಆರೋಗ್ಯಕ್ಕೆ ಸಂಬಂಧಿಸಿದ ನಿರ್ಲಕ್ಷ್ಯ ಮಾಡದೆ ಕಾಲಕಾಲಕ್ಕೆ ಸರಿಯಾದ ಚಿಕಿತ್ಸೆ ಕೊಡಿಸಿ, ಆ ಬಗ್ಗೆ ನನಗೆ ಮಾಹಿತಿ ನೀಡುತ್ತೀರಿ ಎಂದು ಕುಮಾರಸ್ವಾಮಿ ಅವರು ಪೋಷಕರಿಗೆ ತಿಳಿಸಿದರು.ಇದನ್ನೂ ಓದಿ: KSRTC ಡಿಪೋದಲ್ಲಿ ಮಹಿಳಾ ಮೆಕ್ಯಾನಿಕ್ಗೆ ಸಹೋದ್ಯೋಗಿಯಿಂದ ಚಾಕು ಇರಿತ
