– ಎಲ್ಲಾ 7 ಮೃತದೇಹಗಳನ್ನ ಪತ್ತೆಹಚ್ಚಿದ ಪೊಲೀಸರು
ಬೆಂಗಳೂರು: ಇಡೀ ರಾಜ್ಯದಲ್ಲಿ ಸಂಚಲನ ಮೂಡಿಸಿರುವ 7 ಜನರ ಹತ್ಯೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. 6 ವಿಶೇಷ ತಂಡಗಳಾಗಿ ತನಿಖೆಗೆ ಇಳಿದಿದ್ದ ಪೊಲೀಸರ ತಂಡ ಎಲ್ಲಾ 7 ಮೃತದೇಹಗಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಕರಣದ ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಶಿರಾಡಿ ಘಾಟ್ನಲ್ಲಿ ಮತ್ತೆರಡು ಮೃತದೇಹಗಳು ಪತ್ತೆಯಾಗಿವೆ. ಶಿರಾಡಿ ಘಾಟ್ನಲ್ಲಿ ಸಿಕ್ಕ ಮೃತದೇಹಗಳು ಹತ್ಯೆಯಾದ ಶಂಕರ್ ಮತ್ತು ನಳಿನಿ ಶವ ಎಂದು ತಿಳಿದುಬಂದಿದೆ. ಮಾಹಿತಿ ತಿಳಿಯುತ್ತಿದ್ದಂತೆ ರಾಜಾಜಿನಗರ ಪೊಲೀಸರು ಹಾಗೂ ಎಫ್ಎಸ್ಎಲ್ ತಂಡ ಬೆಂಗಳೂರಿನಿಂದ ಹೊರಟಿದೆ. ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ ಬಳಿಕ ಹೆಚ್ಚಿನ ಮಾಹಿತಿ ತಿಳಿದುಬರಲಿದೆ.
ಮೃತದೇಹ ಇಂದೇ ಹಸ್ತಾಂತರ
ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಸಿಕ್ಕ ದಿವ್ಯ, ಶಿವಕುಮಾರ್ ಮೃತದೇಹಗಳು, ಸೇಲಂನಲ್ಲಿ ಸಿಕ್ಕಿರುವ ರೂಪವತಿ, ಸುನೀತಾ ಶವಗಳು ಹಾಗೂ ಇಂದು ಶಿರಾಡಿ ಘಾಟ್ನಲ್ಲಿ ಸಿಕ್ಕ ಶಂಕರ್ ಮತ್ತು ನಳಿನಿ ಮೃತದೇಹಗಳನ್ನು ಪೊಲೀಸರು ಇಂದೇ ಕುಟುಂಬಗಳಿಗೆ ಹಸ್ತಾಂತರಿಸುವ ಸಾಧ್ಯತೆಯಿದೆ. ಬಳಿಕ ಒಂದೇ ಕಡೆ ಅಂತ್ಯಕ್ರಿಯೆಗೆ ತೀರ್ಮಾನಿಸಲಾಗಿದೆ.
ಹತ್ಯೆಯಾದ ಬಾಲಕ ಪುನೀತ್ ಅಂತ್ಯಕ್ರಿಯೆಯನ್ನ ಶನಿವಾರ (ನ.7) ರಾಜಾಜಿನಗರದ ಹರಿಶ್ಚಂದ್ರ ಘಾಟ್ನಲ್ಲಿ ನೆರವೇರಿಸಲಾಗಿತ್ತು.

