– ವಿಲೀನಕ್ಕೆ ಸುನೇತ್ರಾ, ಪಾರ್ಥ್ ಪವಾರ್ ವಿರೋಧ
ಮುಂಬೈ: ಮಹಾರಾಷ್ಟ್ರದ ರಾಜಕೀಯ ವಲಯದಲ್ಲಿ ಎನ್ಸಿಪಿ (ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ) ಪಕ್ಷ ವಿಲೀನದ ಕುರಿತು ಮತ್ತೆ ಚರ್ಚೆಗಳು ಜೋರಾಗಿವೆ.
ಈ ಮಧ್ಯೆ ಹಿರಿಯ ಎನ್ಸಿಪಿ ನಾಯಕ ಪ್ರಫುಲ್ ಪಟೇಲ್ ಅವರು ಗುರುವಾರ ರಾತ್ರಿ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ಭೇಟಿ ನೀಡಿ, ಎನ್ಸಿಪಿ (ಎಸ್ಪಿ) ಮುಖ್ಯಸ್ಥ ಶರದ್ ಪವಾರ್ ಅವರನ್ನ ಭೇಟಿಯಾಗಿದ್ದಾರೆ. ಈ ಭೇಟಿಯ ಬಳಿಕ ರಾಜಕೀಯ ವಲಯದಲ್ಲಿ ಎನ್ಡಿಎ ಜೊತೆಗೆ ಎನ್ಸಿಪಿ ವಿಲೀನದ ಚರ್ಚೆಗಳು ಭಾರೀ ಸದ್ದು ಮಾಡುತ್ತಿವೆ.
ಶರದ್ ಪವಾರ್ ಅವರೊಂದಿಗಿನ ಭೇಟಿಯ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಫುಲ್ ಪಟೇಲ್, ನಮ್ಮಿಬ್ಬರ ನಡುವೆ ಯಾವುದೇ ವೈಯಕ್ತಿಕ ಕಹಿ ಭಾವನೆಗಳಿಲ್ಲ. ನಮ್ಮ ನಡುವೆ ರಾಜಕೀಯ ಭಿನ್ನಾಭಿಪ್ರಾಯಗಳಿದ್ದವು. ಆದರೆ ವೈಯಕ್ತಿಕವಾಗಿ ಯಾವುದೇ ದ್ವೇಷ ಅಥವಾ ಕಹಿ ಭಾವನೆ ಇರಲಿಲ್ಲ. ನಾನು ಆಗಾಗ್ಗೆ ಪವಾರ್ ಸಾಹೇಬರನ್ನ ಭೇಟಿಯಾಗುತ್ತಲೇ ಇದ್ದೇನೆ. ನಮ್ಮ ನಡುವೆ ಕುಟುಂಬ ಸಂಬಂಧಗಳೂ ಇವೆ. ಅವು ಮುಂದುವರಿಯಲಿವೆ ಎಂದು ಹೇಳಿದ್ದರು.
ಇದೇ ವೇಳೆ, ಪ್ರಸಕ್ತ ರಾಜಕೀಯ ಪರಿಸ್ಥಿತಿಯ ಬಗ್ಗೆಯೂ ಇಬ್ಬರ ನಡುವೆ ಚರ್ಚೆ ನಡೆದಿದೆ ಎಂದು ಅವರು ತಿಳಿಸಿದ್ದಾರೆ.
ಉಭಯ ನಾಯಕರು ಪರಸ್ಪರ ಮಾತುಕತೆ ನಡೆಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಸಂದರ್ಭದಲ್ಲಿ ಶರದ್ ಪವಾರ್ ಅವರು, ನವೆಂಬರ್ 10ರ ಬಳಿಕ ಕುಳಿತುಕೊಂಡು ಈ ವಿಚಾರಗಳ ಬಗ್ಗೆ ಚರ್ಚಿಸೋಣ ಎಂದು ಪ್ರಫುಲ್ ಪಟೇಲ್ ಅವರಿಗೆ ತಿಳಿಸಿರುವುದಾಗಿ ವರದಿಯಾಗಿದೆ. ಈ ಹೇಳಿಕೆಯೇ ಇದೀಗ ಎನ್ಸಿಪಿ ಬಣಗಳ ವಿಲೀನದ ಕುರಿತ ಚರ್ಚೆಗೆ ಮತ್ತಷ್ಟು ಪುಷ್ಟಿ ನೀಡಿದೆ.
ಪ್ರಧಾನಿ ಮೋದಿ ಫೋನ್ ಕಾಲ್ – ಸುಪ್ರಿಯಾ ಸುಳೆ ಬಗ್ಗೆಯೂ ಮಹತ್ವದ ಮಾತು
ಇದೇ ಬೆಳವಣಿಗೆಯ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರು ಶರದ್ ಪವಾರ್ ಅವರ ಆರೋಗ್ಯ ವಿಚಾರಿಸಲು ದೂರವಾಣಿ ಕರೆ ಮಾಡಿದ್ದರು. ಈ ವೇಳೆ ಬಾರಾಮತಿ ಸಂಸದೆ ಸುಪ್ರಿಯಾ ಸುಳೆ ಅವರು ನಮ್ಮೊಂದಿಗೆ ರಾಷ್ಟ್ರೀಯ ಜವಾಬ್ದಾರಿಗಳನ್ನ ನಿರ್ವಹಿಸಲು ಸಿದ್ಧರಾಗಿದ್ದಾರೆಂದು ತಿಳಿಸಿದ್ದಾರೆ ಅಂತಾ ಪ್ರಧಾನಿ ಹೇಳಿರುವುದಾಗಿ ವರದಿಯಾಗಿದೆ.
ಪ್ರಧಾನಿ ಮೋದಿ ಅವರ ಈ ಆತ್ಮೀಯ ಮಾತುಕತೆ ಮಹಾರಾಷ್ಟ್ರದ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಇದು ಭವಿಷ್ಯದಲ್ಲಿ ರಾಜಕೀಯ ಸಂಬಂಧಗಳ ಮರುಹೊಂದಾಣಿಕೆಯ ಮುನ್ಸೂಚನೆಯೇ ಅಥವಾ ಹಿರಿಯ ರಾಜಕೀಯ ನಾಯಕನ ಆರೋಗ್ಯ ವಿಚಾರಿಸುವ ಸೌಜನ್ಯದ ಮಾತುಕತೆಯೇ ಎಂಬ ಪ್ರಶ್ನೆಗಳು ರಾಜಕೀಯ ವಿಶ್ಲೇಷಕರಲ್ಲಿ ಮೂಡಿವೆ.
ಆಸ್ಪತ್ರೆಗೆ ದಾಖಲಾಗಿರುವ ಶರದ್ ಪವಾರ್
85 ವರ್ಷದ ಶರದ್ ಪವಾರ್ ಅವರು ಸೋಮವಾರದಿಂದ ಪುಣೆಯ ರೂಬಿ ಹಾಲ್ ಕ್ಲಿನಿಕ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅಲ್ಲಿಂದ ಡಿಶ್ಚಾರ್ಜ್ ಆದ ಬಳಿಕ ಬುಧವಾರ ದಕ್ಷಿಣ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
2023ರಲ್ಲಿ ಎನ್ಸಿಪಿ ವಿಭಜನೆ
ಶರದ್ ಪವಾರ್ ಸ್ಥಾಪಿಸಿದ್ದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್ಸಿಪಿ) 2023ರಲ್ಲಿ ವಿಭಜನೆಯಾಗಿತ್ತು. ಅಜಿತ್ ಪವಾರ್ ನೇತೃತ್ವದಲ್ಲಿ ಪ್ರಫುಲ್ ಪಟೇಲ್ ಸೇರಿದಂತೆ ಹಲವು ಪ್ರಮುಖ ನಾಯಕರು ಪಕ್ಷ ತೊರೆದು ಮಹಾರಾಷ್ಟ್ರದ ಆಡಳಿತಾರೂಢ ಮಹಾಯುತಿ ಮೈತ್ರಿಕೂಟವನ್ನ ಸೇರಿದ್ದರು. ಇದೀಗ ಪ್ರಫುಲ್ ಪಟೇಲ್ ಅವರು ಶರದ್ ಪವಾರ್ ಅವರನ್ನ ಭೇಟಿಯಾಗಿರುವುದು ರಾಜಕೀಯವಾಗಿ ಮಹತ್ವ ಪಡೆದುಕೊಂಡಿದೆ.
ಇದರ ಬೆನ್ನಲ್ಲೇ, ಪಕ್ಷದ ಮುಖ್ಯಸ್ಥೆ ಸುನೇತ್ರಾ ಪವಾರ್ ಹಾಗೂ ಅವರ ಪುತ್ರರಾದ ಪಾರ್ಥ್ ಮತ್ತು ಜಯ್ ಅವರ ಅನುಪಸ್ಥಿತಿಯಲ್ಲಿ ಎನ್ಸಿಪಿಯ ಹಿರಿಯ ನಾಯಕರು ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದ್ದರು. ಪಕ್ಷದೊಳಗೆ ಪಾರ್ಥ್ ಪವಾರ್ ಅವರ ಪ್ರಭಾವ ಹೆಚ್ಚುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತವಾಗುತ್ತಿದೆ ಎಂಬ ವರದಿಗಳ ಹಿನ್ನೆಲೆ ಈ ಸಭೆ ನಡೆದಿರುವುದಾಗಿ ಹೇಳಲಾಗಿದೆ.
ವಿಲೀನ ಚರ್ಚೆಗೆ ಉಭಯ ಪಕ್ಷಗಳ ನಿರಾಕರಣೆ
ಎನ್ಸಿಪಿ ಮತ್ತು ಎನ್ಸಿಪಿ (ಎಸ್ಪಿ) ಪಕ್ಷಗಳ ವಿಲೀನದ ಕುರಿತು ರಾಜಕೀಯ ವಲಯದಲ್ಲಿ ಚರ್ಚೆಗಳು ನಡೆಯುತ್ತಿದ್ದರೂ, ಉಭಯ ಪಕ್ಷಗಳು ಅಧಿಕೃತವಾಗಿ ವಿಲೀನದ ಮಾತುಕತೆಗಳನ್ನ ನಿರಾಕರಿಸಿವೆ. ಈ ಬಗ್ಗೆ ತಮ್ಮ ನಿಲುವು ಸ್ಪಷ್ಟಪಡಿಸಿರುವ ಶರದ್ ಪವಾರ್, ತಮ್ಮ ಪಕ್ಷವನ್ನು ಯಾವುದೇ ರಾಜಕೀಯ ಪಕ್ಷದೊಂದಿಗೆ ವಿಲೀನಗೊಳಿಸುವ ಉದ್ದೇಶವಿಲ್ಲ ಎಂದು ಹೇಳಿದ್ದಾರೆ. ಆದರೆ, ವೈಯಕ್ತಿಕವಾಗಿ ತಮ್ಮ ಪಕ್ಷಕ್ಕೆ ಸೇರ್ಪಡೆಯಾಗಲು ಬಯಸುವ ನಾಯಕರಿಗೆ ಸ್ವಾಗತವಿದೆ ಎಂದು ತಿಳಿಸಿದ್ದಾರೆ.


