ನವದೆಹಲಿ: ಭಾರತ ಟಿ20 ಕ್ರಿಕೆಟ್ ತಂಡದ ಮಾಜಿ ನಾಯಕ ಸೂರ್ಯಕುಮಾರ್ ಯಾದವ್ (Suryakumar Yadav) ಮತ್ತು ಪತ್ನಿ ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ(PM Narendra Modi) ಅವರನ್ನು ಭೇಟಿಯಾಗಿದ್ದಾರೆ. ಈ ವೇಳೆ ಪ್ರಧಾನಿಯವರು ಸೂರ್ಯಕುಮಾರ್ ಅವರ ಪುಟ್ಟ ಮಕ್ಕಳೊಂದಿಗೆ ಪ್ರೀತಿಯಿಂದ ಬೆರೆತು ಕೆಲ ಹರ್ಷದ ಕ್ಷಣಗಳನ್ನು ಕಳೆದರು.
ಈ ಭೇಟಿಯ ಕುರಿತು ತಮ್ಮ ಅಧಿಕೃತ ‘ಎಕ್ಸ್’ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಪ್ರಧಾನಿ ಮೋದಿ, “ದೀಪಾವಳಿಯ ಶುಭ ವಾತಾವರಣದಲ್ಲಿ ಶ್ರೀರಾಮ ಮತ್ತು ಸರಯೂ ಆಗಮನವಾಗಿದೆ. ಇದು ಈ ಬಾರಿಯ ದೀಪಾವಳಿ ಸಂಭ್ರಮವನ್ನು ಮತ್ತಷ್ಟು ಪವಿತ್ರ ಹಾಗೂ ದೈವಿಕವಾಗಿಸಿದೆ” ಎಂದು ಬರೆದುಕೊಂಡಿದ್ದಾರೆ.
ಭೇಟಿಯ ಸಂದರ್ಭದಲ್ಲಿ, 2026ರ ಐಸಿಸಿ ಪುರುಷರ ಟಿ20 ವಿಶ್ವಕಪ್ ಗೆಲುವಿನ ಸಂದರ್ಭದಲ್ಲಿ ತಮಗೆ ಲಭಿಸಿದ್ದ ಚಿನ್ನದ ಪದಕವನ್ನು ಸೂರ್ಯಕುಮಾರ್ ಧರಿಸಿದ್ದರು. ಪ್ರಧಾನಿ ಮೋದಿ ಆ ಪದಕವನ್ನು ಕೈಯಲ್ಲಿ ಹಿಡಿದು ಕಣ್ತುಂಬಿಕೊಂಡು, ಭಾರತ ತಂಡದ ಐತಿಹಾಸಿಕ ಗೆಲುವಿನ ಕ್ಷಣವನ್ನು ಸೂರ್ಯಕುಮಾರ್ ಅವರೊಂದಿಗೆ ಮೆಲುಕು ಹಾಕಿದರು.
ಸೂರ್ಯಕುಮಾರ್ ದಂಪತಿ ಭೇಟಿಯ ವೇಳೆ ಬಾಲಕಿಯೊಬ್ಬಳು ಗಣಪತಿ ಭಜನೆ ಮಾಡಿದ್ದಾಳೆ. “ಮೊರದ ಕಿವಿ ಅವನೇ, ಡೊಳ್ಳುಹೊಟ್ಟೆ ಅವನೇ ಕಿರಿಕಿರಿ ಕಣ್ಣವನೇ… ನಮ್ಮ ಸಣ್ಣ ಗಣೇಶನೇ” ಹಾಡಿದ್ದು ಈ ವಿಡಿಯೋವನ್ನು ಮೋದಿ ಅವರು ಸಾಮಾಜಿಕ ಜಾಲತಾಣದಲ್ಲೊ ಹಂಚಿಕೊಂಡಿದ್ದಾರೆ.
दीपावली के माहौल में राम और सरयू का आगमन हुआ है। इससे दीपावली का वातावरण और भी पावन एवं दिव्य हो गया है।
@surya_14kumar https://t.co/B6vwr35Iwm
— Narendra Modi (@narendramodi) November 6, 2026
ಸೂರ್ಯಕುಮಾರ್ ಯಾದವ್ ಮತ್ತು ದೇವಿಶಾ ಶೆಟ್ಟಿ ದಂಪತಿಗೆ ಮೇ 2026 ರಲ್ಲಿ ಹೆಣ್ಣು ಮಗು ಜನಿಸಿದ್ದು ರಿದ್ದಿಮಾ ಎಂದು ನಾಮಕರಣ ಮಾಡಿದ್ದಾರೆ.
ತಮ್ಮ ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ ಹಲವು ಅಪರೂಪದ ಮೈಲಿಗಲ್ಲುಗಳನ್ನು ಸ್ಥಾಪಿಸಿರುವ ಸೂರ್ಯಕುಮಾರ್ ಯಾದವ್ 2022 ಮತ್ತು 2023 ರಲ್ಲಿ ಸತತವಾಗಿ ‘ಐಸಿಸಿ ವರ್ಷದ ಪುರುಷರ ಟಿ20 ಕ್ರಿಕೆಟಿಗ’ ಪ್ರಶಸ್ತಿಗೆ ಭಾಜನರಾಗಿದ್ದರು. ಅಕ್ಟೋಬರ್ 2022 ರಲ್ಲಿ ಐಸಿಸಿ ಟಿ20 ಬ್ಯಾಟಿಂಗ್ ಶ್ರೇಯಾಂಕದಲ್ಲಿ ವಿಶ್ವದ ನಂ.1 ಪಟ್ಟಕ್ಕೇರಿದ್ದ ಅವರು, ಜನವರಿ 2023 ರಲ್ಲಿ ಬರೋಬ್ಬರಿ 910 ರೇಟಿಂಗ್ ಅಂಕಗಳನ್ನು ಗಳಿಸುವ ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಸಾರ್ವಕಾಲಿಕ ಗರಿಷ್ಠ ರೇಟಿಂಗ್ ಪಡೆದ ಆಟಗಾರರಲ್ಲಿ ಒಬ್ಬರೆನಿಸಿಕೊಂಡಿದ್ದರು.
2024ರ ಐಸಿಸಿ ಪುರುಷರ ಟಿ20 ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸೂರ್ಯಕುಮಾರ್, ತದನಂತರ ನಾಯಕರಾಗಿ ಮುನ್ನಡೆಸಿ ಭಾರತ ತಂಡವು 2026ರ ಟಿ20 ವಿಶ್ವಕಪ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳುವಂತೆ ಮಾಡಿದ್ದರು. ಇದರೊಂದಿಗೆ ಟಿ20 ವಿಶ್ವಕಪ್ ಇತಿಹಾಸದಲ್ಲಿ ಪ್ರಶಸ್ತಿಯನ್ನು ಯಶಸ್ವಿಯಾಗಿ ಉಳಿಸಿಕೊಂಡ ವಿಶ್ವದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಯಿತು. ಅವರ ಸಾರಥ್ಯದಲ್ಲೇ ಯುಎಇನಲ್ಲಿ ನಡೆದ 2025ರ ಟಿ20 ಏಷ್ಯಾಕಪ್ ಪ್ರಶಸ್ತಿಯನ್ನೂ ಭಾರತ ಮುಡಿಗೇರಿಸಿಕೊಂಡಿತ್ತು.
2026ರ ಟಿ20 ವಿಶ್ವಕಪ್ ಗೆಲುವಿನ ಬೆನ್ನಲ್ಲೇ ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧದ ಯುಕೆ (UK) ಪ್ರವಾಸದ ಟಿ20 ತಂಡದಿಂದ ಸೂರ್ಯಕುಮಾರ್ ಯಾದವ್ ಅವರನ್ನು ಕೈಬಿಡಲಾಗಿತ್ತು. ಐಪಿಎಲ್ನಲ್ಲಿ ಪಂಜಾಬ್ ಕಿಂಗ್ಸ್ (PBKS) ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿ ಗಮನ ಸೆಳೆದಿದ್ದ ಶ್ರೇಯಸ್ ಅಯ್ಯರ್ ಅವರನ್ನು ನೂತನ ಟಿ20 ನಾಯಕರನ್ನಾಗಿ ನೇಮಿಸಲಾಯಿತು. ನಾಯಕನಾಗಿ ಅದ್ಭುತ ದಾಖಲೆ ಹೊಂದಿದ್ದರೂ, ಇತ್ತೀಚಿನ ದಿನಗಳಲ್ಲಿ ಬ್ಯಾಟಿಂಗ್ ಫಾರ್ಮ್ನಲ್ಲಿ ಉಂಟಾದ ಹಿನ್ನಡೆಯೇ ಸೂರ್ಯಕುಮಾರ್ ಅವರನ್ನು ತಂಡದಿಂದ ಕೈಬಿಡಲು ಪ್ರಮುಖ ಕಾರಣ ಎಂದು ಹೇಳಲಾಗಿದೆ.
