ಮುಂಬೈ: ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್(Donald Trump) ಅವರ ರಿಪಬ್ಲಿಕನ್ ಪಕ್ಷ ಸೋತ ಬೆನ್ನಲ್ಲೇ ಭಾರತೀಯ ಷೇರುಪೇಟೆಯ ಹೂಡಿಕೆದಾರರಿಗೆ(Dalal Street investors) ಗುರುವಾರ ಬೆಳಗ್ಗೆ ಅನಿರೀಕ್ಷಿತ ಜಾಕ್ಪಾಟ್ ಹೊಡೆದಿದೆ.
ಕಚ್ಚಾ ತೈಲ ದರದಲ್ಲಿ ಭಾರಿ ಕುಸಿತ, ವಿದೇಶಿ ಹೂಡಿಕೆದಾರರ ಭರ್ಜರಿ ಖರೀದಿ ಹಾಗೂ ಅಮೆರಿಕದ ವಾಲ್ ಸ್ಟ್ರೀಟ್ ಷೇರುಪೇಟೆಯ ಉತ್ಸಾಹದಿಂದಾಗಿ ದೇಶೀಯ ಷೇರು ಮಾರುಕಟ್ಟೆ ಮುಗಿಲೆತ್ತರಕ್ಕೆ ಜಿಗಿದಿದೆ. ಮಾರುಕಟ್ಟೆ ಆರಂಭವಾದ ಕೇವಲ ಒಂದೇ ಗಂಟೆಯಲ್ಲಿ ಹೂಡಿಕೆದಾರರ ಸಂಪತ್ತು ಬರೋಬ್ಬರಿ 7 ಲಕ್ಷ ಕೋಟಿ ರೂಪಾಯಿಗಳಷ್ಟು ಏರಿಕೆಯಾಗಿದೆ.
ಗುರುವಾರ ವಹಿವಾಟು ಆರಂಭವಾಗುತ್ತಿದ್ದಂತೆ ಬಿಎಸ್ಇ(BSE) ಸೆನ್ಸೆಕ್ಸ್ 1,300ಕ್ಕೂ ಹೆಚ್ಚು ಅಂಕಗಳ ಜಿಗಿತ ಕಂಡು 78,630 ಮಟ್ಟ ತಲುಪಿದರೆ, ನಿಫ್ಟಿ 50(Nifty 50) ಆರಂಭಿಕ ವಹಿವಾಟಿನಲ್ಲೇ 24,350ರ ಗಡಿ ದಾಟಿತು. ಈ ಮೂಲಕ ಭಾರತೀಯ ಮಾರುಕಟ್ಟೆ ಸತತ 6ನೇ ದಿನವೂ ತನ್ನ ಗೆಲುವಿನ ಓಟವನ್ನು ಮುಂದುವರಿಸಿದೆ.
ಬೆಳಿಗ್ಗೆ 10:15ರ ವೇಳೆಗೆ ಸೆನ್ಸೆಕ್ಸ್ 1,400 ಅಂಕಗಳ ಏರಿಕೆಯೊಂದಿಗೆ 78,735.79 ಮಟ್ಟದಲ್ಲಿತ್ತು. ನಿಫ್ಟಿ 50 ಸೂಚ್ಯಂಕ 431 ಅಂಕಗಳ ಏರಿಕೆಯೊಂದಿಗೆ 24,389.55 ಕ್ಕೆ ತಲುಪಿತು. ವಿಶೇಷವೆಂದರೆ, ಸೆಪ್ಟೆಂಬರ್ 4ರ ಬಳಿಕ ನಿಫ್ಟಿ ಇದೇ ಮೊದಲ ಬಾರಿಗೆ 24,000 ಗಡಿ ದಾಟಿದೆ.
ಮಾರುಕಟ್ಟೆ ಆರಂಭದ ವೇಳೆ ಬಿಎಸ್ಇ ಸೆನ್ಸೆಕ್ಸ್ ಕಂಪನಿಗಳ ಒಟ್ಟು ಮಾರುಕಟ್ಟೆ ಬಂಡವಾಳ ಮೌಲ್ಯ (Market Cap) 4,93,44,359 ಕೋಟಿ ರೂ. ಇತ್ತು. ಬೆಳಿಗ್ಗೆ 10:45ರ ವೇಳೆಗೆ ಈ ಮೌಲ್ಯ 5,01,00,485 ಕೋಟಿ ರೂ.ಗೆ ಏರಿಕೆಯಾಗಿದ್ದು, ಹೂಡಿಕೆದಾರರ ಸಂಪತ್ತಿಗೆ ಸುಮಾರು 7 ಲಕ್ಷ ಕೋಟಿ ರೂಪಾಯಿ ಹೊಸದಾಗಿ ಸೇರ್ಪಡೆಯಾಗಿದೆ.
ಮಾರುಕಟ್ಟೆ ಏರಿಕೆಗೆ ಕಾರಣ ಏನು?
ಕಚ್ಚಾ ತೈಲ ದರದಲ್ಲಿ ಶೇ. 8ರಷ್ಟು ಭಾರಿ ಕುಸಿತ:
ಗುರುವಾರದ ಈ ಭರ್ಜರಿ ರ್ಯಾಲಿಗೆ ಅಂತರರಾಷ್ಟ್ರೀಯ ಕಚ್ಚಾ ತೈಲ ದರದಲ್ಲಿ ಆದ ತೀವ್ರ ಕುಸಿತವೇ ಪ್ರಮುಖ ಕಾರಣ. ಬ್ರೆಂಟ್ ಕಚ್ಚಾ ತೈಲ(Crude Oil) ಬೆಲೆ ಶೇ. 8.7 ರಷ್ಟು ಕುಸಿದು ಪ್ರತಿ ಬ್ಯಾರೆಲ್ಗೆ 94 ಡಾಲರ್ಗೆ ಇಳಿದರೆ, ಯುಎಸ್ ಡಬ್ಲ್ಯುಟಿಐ (WTI) ಕಚ್ಚಾ ತೈಲ ದರ ಬ್ಯಾರೆಲ್ಗೆ ಸುಮಾರು 88 ಡಾಲರ್ಗೆ ಕುಸಿದಿದೆ. ಇದನ್ನೂ ಓದಿ: ಚುನಾವಣೆಯಲ್ಲಿ ಸೋತರೂ ವೀಟೋ ಬಳಸಿ ಡೆಮಾಕ್ರಟ್ಗಳನ್ನು ಆಟ ಆಡಿಸಲು ಮುಂದಾದ ಟ್ರಂಪ್!
ವಿದೇಶಿ ಹೂಡಿಕೆದಾರರ ಮರುಪ್ರವೇಶ:
ವಿದೇಶಿ ಸಾಂಸ್ಥಿಕ ಹೂಡಿಕೆದಾರರು(FII) ಬುಧವಾರ ಒಂದೇ ದಿನ 7,284 ಕೋಟಿ ರೂ. ಮೌಲ್ಯದ ಭಾರತೀಯ ಷೇರುಗಳನ್ನು ಖರೀದಿಸಿದ್ದಾರೆ. ಇದು ಅಕ್ಟೋಬರ್ 28, 2025ರ ನಂತರದ ಗರಿಷ್ಠ ಏಕದಿನ ಖರೀದಿಯಾಗಿದೆ. ಸತತ ನಾಲ್ಕನೇ ದಿನವೂ ವಿದೇಶಿ ಹೂಡಿಕೆದಾರರು ನಿವ್ವಳ ಖರೀದಿದಾರರಾಗಿದ್ದು, ಸೆಪ್ಟೆಂಬರ್ ಮತ್ತು ಅಕ್ಟೋಬರ್ನಲ್ಲಿ ಸುಮಾರು 90,000 ಕೋಟಿ ರೂ. ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದ ಎಫ್ಐಐಗಳು, ನವೆಂಬರ್ ತಿಂಗಳಿನಲ್ಲಿ ಈಗಾಗಲೇ 17,000 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ಹೂಡಿಕೆ ಮಾಡಿದ್ದಾರೆ.
ವಾಲ್ ಸ್ಟ್ರೀಟ್ ರ್ಯಾಲಿ
ಬುಧವಾರ ಅಮೆರಿಕ ಮಾರುಕಟ್ಟೆಯಲ್ಲಿ ಎಸ್&ಪಿ 500 (S&P 500) ಶೇ. 1.6 ರಷ್ಟು, ಡೌ ಜೋನ್ಸ್ ಸುಮಾರು ಶೇ. 3 ರಷ್ಟು ಹಾಗೂ ನಾಸ್ಡಾಕ್ ಶೇ. 1.4 ರಷ್ಟು ಏರಿಕೆ ಕಂಡಿವೆ. ಅಮೆರಿಕ ಚುನಾವಣಾ ಫಲಿತಾಂಶವು ರಾಜಕೀಯ ಅನಿಶ್ಚಿತತೆಯನ್ನು ಕಡಿಮೆ ಮಾಡಿದ್ದು, ಜಾಗತಿಕ ರಾಜಕೀಯ ಉದ್ವಿಗ್ನತೆ ಶಮನಗೊಳ್ಳುವ ಆಶಾವಾದವನ್ನು ಮೂಡಿಸಿದೆ. ಇದು ಜಾಗತಿಕ ಷೇರು ಮಾರುಕಟ್ಟೆಗಳಿಗೂ ಹೊಸ ಚೈತನ್ಯ ನೀಡಿದೆ.
ಡೆಮಾಕ್ರಟ್ ಗೆಲುವು
ಅಮೆರಿಕ ಕಾಂಗ್ರೆಸ್ನಲ್ಲಿ ಡೆಮಾಕ್ರಟ್ಗಳ ಪ್ರಾಬಲ್ಯವು ಯುಎಸ್ ಆರ್ಥಿಕ ವೆಚ್ಚಗಳು, ಬಾಂಡ್ ಇಳುವರಿ ಮತ್ತು ಡಾಲರ್ ಮೌಲ್ಯದ ಮೇಲೆ ಪ್ರಭಾವ ಬೀರಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಹೊಸ ವರ್ಷದ ಜನವರಿಯಲ್ಲಿ ಪ್ರಮಾಣವಚನ ಸ್ವೀಕರಿಸಿದ ನಂತರ ಇದರ ಸಂಪೂರ್ಣ ಪರಿಣಾಮಗಳು ಸ್ಪಷ್ಟವಾಗಲಿವೆ. ಅಮೆರಿಕದಲ್ಲಿ ಹಣಕಾಸಿನ ವೆಚ್ಚ ಮಿತಿಗೊಂಡು, ಬಾಂಡ್ ಇಳುವರಿ ಹಾಗೂ ಡಾಲರ್ ದುರ್ಬಲಗೊಂಡರೆ ಅದು ಭಾರತದಂತಹ ಉದಯೋನ್ಮುಖ ಮಾರುಕಟ್ಟೆಗಳು ಹಾಗೂ ಚಿನ್ನದ ದರಕ್ಕೆ ಮತ್ತಷ್ಟು ಅನುಕೂಲಕರವಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
